ಮೆಲ್ಬರ್ನ್: ಭಾನುವಾರ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ನವೇ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಟಿ20 ವಿಶ್ವಕಪ್ ಟೂರ್ನಿ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು.
ಸೂಪರ್ 12ರ ಹಂತದ ಎರಡನೇ ಗುಂಪಿನಲ್ಲಿ ಬೆಳಿಗ್ಗೆ (ಭಾರತೀಯ ಕಾಲಮಾನದ ಪ್ರಕಾರ) ನಡೆದ ಪಂದ್ಯದಲ್ಲಿಯೇ ನೆದರ್ಲೆಂಡ್ಸ್ ದಕ್ಷಿಣ ಆಫ್ರಿಕಾಕ್ಕೆ ಸೋಲಿನ ಆಘಾತ ನೀಡಿದ್ದರಿಂದ ಭಾರತದ ನಾಲ್ಕರ ಘಟ್ಟದ ಹಾದಿ ಸುಲಭವಾಯಿತು. ಸೆಮಿ ಹಾದಿಯಿಂದ ಈಗಾಗಲೇ ಹೊರಬಿದ್ದಿರುವ ಜಿಂಬಾಬ್ವೆಯಿಂದಲೂ ಹೆಚ್ಚು ಪ್ರತಿರೋಧ ಕಂಡುಬರದ ಪಂದ್ಯದಲ್ಲಿ ಭಾರತ ತಂಡವು ‘ಅಭ್ಯಾಸ’ ಮಾಡಿತು. 71 ರನ್‌ಗಳಿಂದ ಜಯಿಸಿದ ತಂಡವು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿತು.
ಅಡಿಲೇಡ್‌ನಲ್ಲಿ ಗುರುವಾರ ನಡೆಯುವ ನಾಲ್ಕರ ಘಟ್ಟದ ಎರಡನೇ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ಎದುರು ಕಣಕ್ಕಿಳಿಯಲಿದೆ. ಅದಕ್ಕೂ ಮುನ್ನಾದಿನ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧ ಆಡಲಿದೆ.
ರಾಹುಲ್–ಸೂರ್ಯ ಮಿಂಚು
ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ಗಳಿಸಿದರು. ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಪ್ರಜ್ವಲಿಸಿದರು. ಅಜೇಯ 61 ರನ್ ಗಳಿಸಿದ ಮುಂಬೈಕರ್ 2022ರ ಕ್ಯಾಲೆಂಡರ್ ವರ್ಷದಲ್ಲಿ ಅಂತರರಾಷ್ಟ್ರೀಯ ಟಿ20 ಮಾದರಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಮಾಡಿದರು. ಕ್ರೀಡಾಂಗಣದಲ್ಲಿ ಸೇರಿದ್ದ 82,507 ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದರು.ಕನ್ನಡಿಗ ರಾಹುಲ್ ಹಾಗೂ ಸೂರ್ಯ ಅವರ ಅಮೋಘ ಬ್ಯಾಟಿಂಗ್‌ನಿಂದ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 186 ರನ್ ಗಳಿಸಿತು. ರೋಹಿತ್, ವಿರಾಟ್ ಮತ್ತು ಹಾರ್ದಿಕ್ ಅಲ್ಪಕಾಣಿಕೆ ನೀಡಿದರು.
ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡದ ಸಿಕಂದರ್ ರಝಾ (34 ರನ್) ಹಾಗೂ ರಿಯಾನ್ ಬರ್ಲ್ (35; 22ಎಸೆತ) ಬಿಟ್ಟರೆ ಉಳಿದವರು ಹೆಚ್ಚು ಪ್ರತಿರೋಧ ತೋರಲಿಲ್ಲ. ಮೊಹಮ್ಮದ್ ಶಮಿ, ಆರ್ಷದೀಪ್, ಆರ್. ಅಶ್ವಿನ್ ಹಾಗೂ ಆರ್. ಅಶ್ವಿನ್ ಅವರಂತಹ ಅನುಭವಿಗಳ ಬೌಲಿಂಗ್ ಎದುರಿಸಲು ಬ್ಯಾಟರ್‌ಗಳು ಪಟ್ಟ ಪ್ರಯತ್ನ ಫಲಿಸಲಿಲ್ಲ. 36 ರನ್‌ಗಳಿಗೆ ಐದು ವಿಕೆಟ್‌ಗಳನ್ನು ತಂಡವು ಕಳೆದುಕೊಂಡಿತು. ಆದರೂ ದಿಟ್ಟ ಹೋರಾಟ ಮಾಡಿದ ರಝಾ ಹಾಗೂ ರಿಯಾನ್ ಅವರಿಂದಾಗಿ 17.2 ಓವರ್‌ಗಳಲ್ಲಿ 115 ರನ್ ಕಲೆಹಾಕಲು ತಂಡಕ್ಕೆ ಸಾಧ್ಯವಾಯಿತು.
ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ವಿಶ್ರಾಂತಿ ನೀಡಿ, ರಿಷಭ್ ಪಂತ್‌ಗೆ ಅವಕಾಶ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.