ADVERTISEMENT

T20 World Cup: ಆಸ್ಟ್ರೇಲಿಯಾಗೆ ಅಫ್ಗಾನ್‌ ಆಘಾತ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 4:37 IST
Last Updated 23 ಜೂನ್ 2024, 4:37 IST
<div class="paragraphs"><p>ಗಲ್ಬಾದಿನ್‌</p></div>

ಗಲ್ಬಾದಿನ್‌

   

ಕಿಂಗ್ಸ್‌ಟೌನ್: ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡವು ಉದಯೋನ್ಮುಖ ತಂಡ ಅಫ್ಗಾನಿಸ್ತಾನದ ಎದುರು ಸೋಲಿನ ಆಘಾತಕ್ಕೊಳಗಾಯಿತು.

ಸೇಂಟ್ ವಿನ್ಸೆಂಟ್‌ನ ಅರ್ನೋಸ್ ವಾಲೆ ಮೈದಾನದಲ್ಲಿ ಭಾನುವಾರ ಬೆಳಿಗ್ಗೆ (ಭಾರತೀಯ ಕಾಲಮಾನ) ನಡೆದ ಟಿ20 ವಿಶ್ವಕಪ್ ಟೂರ್ನಿಯ ಸೂಪರ್‌ 8ರ ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 21 ರನ್‌ಗಳಿಂದ ಅಫ್ಗಾನಿಸ್ತಾನವು ಸೋಲಿಸಿತು. ಚಾರಿತ್ರಿಕ ಸಾಧನೆ ಮಾಡಿದ ಅಫ್ಗನ್ ಬಳಗದ ಆಟಗಾರರು ಮತ್ತು ನೆರವು ಸಿಬ್ಬಂದಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ADVERTISEMENT

ನಾಲ್ಕು ವಿಕೆಟ್ ಗಳಿಸಿದ ಮಧ್ಯಮವೇಗಿ ಗುಲ್ಬದೀನ್ ನೈಬ್ ನಾಲ್ಕು ವಿಕೆಟ್ ಗಳಿಸಿ  ಗೆಲುವಿನ ರೂವಾರಿಯಾದರು.  ಅದರಲ್ಲೂ 15ನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ (59; 41ಎ, 4X6, 6X3) ವಿಕೆಟ್ ಗಳಿಸಿದ ನೈಬ್, ಇನಿಂಗ್ಸ್‌ಗೆ ಮಹತ್ವದ ತಿರುವು ನೀಡಿದರು. ಇದು ಅಫ್ಗನ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು. ಸತತ ಎರಡನೇ ಪಂದ್ಯದಲ್ಲಿಯೂ ಹ್ಯಾಟ್ರಿಕ್ ಸಾಧಿಸಿದ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ದಾಖಲೆ ಪುಟ ಸೇರಿದರು.

ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ತುಸು ಕಷ್ಟವೇ ಆಗಿದ್ದ ಪಿಚ್‌ನಲ್ಲಿ ಅಫ್ಗಾನಿಸ್ತಾನದ ಆರಂಭಿಕ ಜೋಡಿ (60; 49ಎ, 4X4, 6X4) ಹಾಗೂ ಇಬ್ರಾಹಿಂ ಝದ್ರಾನ್ (51; 48ಎ, 4X6) ಮೊದಲ ವಿಕೆಟ್‌ಗೆ 118 ರನ್‌ ಸೇರಿಸಿದರು. 16ನೇ ಓವರ್‌ನವರೆಗೂ ಇವರಿಬ್ಬರ ಜೊತೆಯಾಟ ನಡೆಯಿತು. ಆದರೆ ಕೊನೆಯ ನಾಲ್ಕು ಓವರ್‌ಗಳಲ್ಲಿ ಕಮಿನ್ಸ್‌ ದಾಳಿಯಿಂದಾಗಿ ಆರು ವಿಕೆಟ್‌ಗಳು ಪತವಾದವು. ನಿಗದಿಯ ಅಫ್ಗನ್ ತಂಡವು 148 ರನ್‌ಗಳ ಮೊತ್ತ ಸೇರಿಸಿತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ತಂಡಕ್ಕೆ 19.2 ಓವರ್‌ಗಳಲ್ಲಿ 127 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.

ಅನುಭವಿ ಆಸ್ಟ್ರೇಲಿಯಾದ ಬಲಿಷ್ಠ ಬ್ಯಾಟರ್‌ಗಳ ಪಡೆಗೆ ಇದೇನೂ ದೊಡ್ಡ ಮೊತ್ತವಾಗಿರಲಿಲ್ಲ. ಆದರೆ, ನಿಧಾನಗತಿಯ ಎಸೆತಗಳನ್ನು ಚಾಣಾಕ್ಷತನದಿಂದ ಪ್ರಯೋಗಿಸಿದ ನೈಬ್ (20ಕ್ಕೆ4) ಹಾಗೂ ನವೀನ್ ಉಲ್ ಹಕ್ (20ಕ್ಕೆ3) ಅವರ ಮುಂದೆ ಆಸ್ಟ್ರೇಲಿಯನ್ ಬ್ಯಾಟರ್‌ಗಳ ಆಟ ನಡೆಯಲಿಲ್ಲ. 

ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ನಾಯಕ ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್ ಹಾಗೂ ಮ್ಯಾಥ್ಯೂ ವೇಡ್ ಅವರಂತಹ ನುರಿತ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 

ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಮಾತ್ರ ಏಕಾಂಗಿ ಹೋರಾಟ ನಡೆಸಿದರು. ನಾಲ್ಕನೇ ಕ್ರಮಾಂಕದಲ್ಲಿ ಅವರು  ಕ್ರೀಸ್‌ಗೆ ಬಂದಾಗ ಆಸ್ಟ್ರೇಲಿಯಾ ತಂಡವು ಪವರ್‌ಪ್ಲೇನಲ್ಲಿಯೇ (3ಕ್ಕೆ32) ಪ್ರಮುಖ ಬ್ಯಾಟರ್‌ಗಳು ಔಟಾಗಿದ್ದರು. 

ಮ್ಯಾಕ್ಸ್‌ವೆಲ್ ಅವರು ಹೋದ ವರ್ಷ ಮುಂಬೈನಲ್ಲಿ ಅಫ್ಗಾನಿಸ್ತಾನ ಎದುರು ನಡೆದಿದ್ದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಪಂದ್ಯದಲ್ಲಿ  ದ್ವಿಶತಕ ಬಾರಿಸಿ ಆಸ್ಟ್ರೇಲಿಯಾವನ್ನು ಗೆಲ್ಲಿಸಿದ್ದರು. ಇಲ್ಲಿಯೂ ಅದೇ ರೀತಿಯಾಗುವ ಎಲ್ಲ ಲಕ್ಷಣಗಳೂ ಇದ್ದವು. ಆದರೆ ನೈಬ್ ಎಸೆತವನ್ನು ಹೊಡೆದ ಗ್ಲೆನ್ ಅವರು ನೂರ್ ಅಹಮದ್‌ಗೆ ಕ್ಯಾಚ್ ಆದರು. ನಂತರದ 21 ರನ್‌ಗಳ ಅಂತರದಲ್ಲಿ ನಾಲ್ಕು ವಿಕೆಟ್‌ಗಳು ಪತನವಾದವು. 

ಈ ಸೋಲಿನಿಂದಾಗಿ ಆಸ್ಟ್ರೇಲಿಯಾದ ಸೆಮಿಫೈನಲ್ ಹಾದಿ ತುಸು ಕಠಿಣವಾಗಿದೆ. ಸೂಪರ್ 8ರ ಹಂತದಲ್ಲಿ ಆಸ್ಟ್ರೇಲಿಯಾ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ. ಅಫ್ಗನ್ ತಂಡವೂ ಬಾಂಗ್ಲಾ ಎದುರು ಸೆಣಸಲಿದೆ. ಉಭಯ ತಂಡಗಳೂ ತಮ್ಮ ಅಂತಿಮ ಪಂದ್ಯಗಳಲ್ಲಿ ಸೋತರೆ ಅಥವಾ ಗೆದ್ದರೆ (ಪಾಯಿಂಟ್‌ಗಳಲ್ಲಿ ಸಮಬಲವಾಗುತ್ತದೆ) ನೆಟ್‌ ರನ್‌ರೇಟ್ ಹೆಚ್ಚು ಇರುವ ತಂಡವು ನಾಲ್ಕರ ಘಟ್ಟಕ್ಕೆ ಸಾಗಲಿದೆ. ಒಂದೊಮ್ಮೆ ಭಾರತದ ಎದುರು ಆಸ್ಟ್ರೇಲಿಯಾ ಸೋತು, ಅಫ್ಗನ್ ತಂಡವು ತನ್ನ ಪಂದ್ಯದಲ್ಲಿ ಜಯಿಸಿದರೆ ಇತಿಹಾಸ ಸೃಷ್ಟಿಯಾಗಲಿದೆ. ಆಸ್ಟ್ರೇಲಿಯಾ ಹೊರಬೀಳಲಿದೆ. ಅಫ್ಗನ್ ನಾಲ್ಕರ ಘಟ್ಟಕ್ಕೆ ಪ್ರವೇಶಿಸುತ್ತದೆ.

ಸಂಕ್ಷಿಪ್ತ ಸ್ಕೋರು

ಅಫ್ಗಾನಿಸ್ತಾನ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 148 (ಗುರ್ಬಾಜ್ 60 ಇಬ್ರಾಹಿಂ ಝದ್ರಾನ್ 51 ಕರೀಂ ಜನತ್ 13 ಮೊಹಮ್ಮದ್ ನಬಿ 10 ಪ್ಯಾಟ್ ಕಮಿನ್ಸ್ 28ಕ್ಕೆ3 ಆ್ಯಡಂ ಜಂಪಾ 28ಕ್ಕೆ2)

ಆಸ್ಟ್ರೇಲಿಯಾ: 19.2 ಓವರ್‌ಗಳಲ್ಲಿ 127 (ಗ್ಲೆನ್ ಮ್ಯಾಕ್ಸ್‌ವೆಲ್ 59 ಮಿಚೆಲ್ ಮಾರ್ಷ್ 12 ನವೀನ್ ಉಲ್ ಹಕ್ 20ಕ್ಕೆ3 ಗುಲ್ಬದೀನ್ ನೈಬ್ 20ಕ್ಕೆ ಅಜ್ಮತ್‌ಉಲ್ಲಾ ಒಮರ್‌ಝೈ 10ಕ್ಕೆ1 ಮೊಹಮ್ಮದ್ ನಬಿ 1ಕ್ಕೆ1) ಫಲಿತಾಂಶ: ಅಫ್ಗಾನಿಸ್ತಾನ ತಂಡಕ್ಕೆ 21 ರನ್‌ಗಳ ಜಯ. 

ಪಂದ್ಯಶ್ರೇಷ್ಠ: ಗುಲ್ಬದೀನ್ ನೈಬ್. 

‘ಅಂದೂ ನಿದ್ದೆ ಆಗಿರಲಿಲ್ಲ..ಇಂದೂ ಆಗಲ್ಲ..‘

ಕಿಂಗ್ಸ್‌ಟೌನ್: ‘ಅವತ್ತು ಮುಂಬೈನಲ್ಲಿ ಆಸ್ಟ್ರೇಲಿಯಾ ಎದುರು ಸೋತ ರಾತ್ರಿಯಿಡೀ ನಿದ್ದೆ ಮಾಡಿರಲಿಲ್ಲ. ಗ್ಲೆನ್ ಮ್ಯಾಕ್ಸ್‌ವೆಲ್ ಇನಿಂಗ್ಸ್ ಕಾಡುತ್ತಿತ್ತು. ಇವತ್ತು ಇಲ್ಲಿಯೂ ನಿದ್ದೆ ಬರುವುದಿಲ್ಲ. ಏಕೆಂದರೆ; ಗೆಲುವಿನ ಸಂತಸ ಉತ್ತುಂಗದಲ್ಲಿದೆ’– ಅಫ್ಗಾನಿಸ್ತಾನ ಕ್ರಿಕೆಟ್ ತಂಡದ ನಾಯಕ ರಶೀದ್ ಖಾನ್ ಅವರ ಭಾವುಕ ನುಡಿಗಳು ಇವು.

ಹೋದ ವರ್ಷ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಫ್ಗನ್ ಎದುರು ಆಸ್ಟ್ರೇಲಿಯಾವು 292 ರನ್‌ಗಳ ಗುರಿ ಬೆನ್ನಟ್ಟಿತ್ತು.  ಈ ಹಾದಿಯಲ್ಲಿ 91 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಆಗ ಮ್ಯಾಕ್ಸ್‌ವೆಲ್ ಅಜೇಯ 201 ರನ್‌ ಗಳಿಸಿದ್ದರು. ತಮ್ಮ ತೊಡೆಯ ಸ್ನಾಯುಸೆಳೆತದ ನೋವಿನಲ್ಲಿ ಅವರು ಈ ಸಾಧನೆ ಮಾಡಿ ತಂಡವನ್ನು ಗೆಲ್ಲಿಸಿದ್ದರು.  ಇದೀಗ ಅಫ್ಗನ್ ತಂಡವು ಆ ಸೋಲಿಗೆ ಇಲ್ಲಿ ಮುಯ್ಯಿ ತೀರಿಸಿಕೊಂಡಿದೆ.

‘ನಮ್ಮ ತಂಡಕ್ಕೆ ಇದೊಂದು ಅವಿಸ್ಮರಣೀಯ ಮತ್ತು ಬಹುದೊಡ್ಡ ಗೆಲುವಾಗಿದೆ. ವಿಶ್ವಕಪ್ ಪಂದ್ಯ ಇದು. ಶ್ರೇಷ್ಠ ತಂಡವನ್ನು ಸೋಲಿಸುವುದೆಂದರೆ ದೊಡ್ಡಸಾಧನೆಯೇ ಸರಿ. ಆಸ್ಟ್ರೇಲಿಯಾ 2021ರ ಚಾಂಪಿಯನ್ ಕೂಡ ಹೌದು’ ಎಂದು ರಶೀದ್ ಹೇಳಿದರು.

‘ನಮ್ಮ ದೇಶದಲ್ಲಿ (ಅಫ್ಗಾನಿಸ್ತಾನ) ಜನರಿಗೆ ಕ್ರಿಕೆಟ್‌ ಒಂದೇ ಸಂತಸದ ಮೂಲವಾಗಿದೆ. ನಮ್ಮ ಗೆಲುವನ್ನು ಜನರು ಅಪಾರವಾಗಿ ಸಂಭ್ರಮಿಸುತ್ತಾರೆ. ಉತ್ಸವ ಆಚರಿಸುತ್ತಾರೆ. ಅವರಿಗಾಗಿ ಒಳ್ಳೆಯ ಕ್ರಿಕೆಟ್‌ ಆಡುವುದು ನಮ್ಮ ಉದ್ದೇಶ. ಅಫ್ಗನ್ ತಂಡವು ಈ ಪಯಣದಲ್ಲಿ ಎಲ್ಲಿಯವರೆಗೆ ಹೋಗಿ ನಿಲ್ಲುತ್ತದೆ ಎಂದು ನನಗೆ ಗೊತ್ತಿಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.