ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಅಫ್ಗಾನಿಸ್ತಾನ ಐದು ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ.
ಈ ನಡುವೆ ಅಫ್ಗನ್ ಸ್ಪಿನ್ನರ್ ರಶೀದ್ ಖಾನ್ ವಿಶಿಷ್ಟ ದಾಖಲೆ ಬರೆದಿದ್ದಾರೆ. ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್ ಮಾದರಿಯಲ್ಲಿ ಅತಿ ವೇಗದಲ್ಲಿ 100 ವಿಕೆಟ್ ಗಳಿಸಿದ ಬೌಲರ್ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.
53ನೇ ಪಂದ್ಯದಲ್ಲಿ ರಶೀದ್ ಈ ಮೈಲಿಗಲ್ಲು ತಲುಪಿದ್ದಾರೆ. ಈ ಮೂಲಕ ಶ್ರೀಲಂಕಾದ ಮಾಜಿ ವೇಗದ ಬೌಲರ್ ಲಸಿತ್ ಮಾಲಿಂಗ ದಾಖಲೆಯನ್ನು ಮುರಿದಿದ್ದಾರೆ. ಮಾಲಿಂಗ 76ನೇ ಪಂದ್ಯದಲ್ಲಿ 100 ವಿಕೆಟ್ ಗಳಿಸಿದ್ದರು.
ಒಟ್ಟಾರೆಯಾಗಿ ರಶೀದ್ ಖಾನ್, ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ವಿಶ್ವದ ನಾಲ್ಕನೇ ಬೌಲರ್ ಎನಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಾಬರ್ ಆಜಂ ಸೇರಿದಂತೆ ಎರಡು ಮಹತ್ವದ ವಿಕೆಟ್‌ಗಳನ್ನು ರಶೀದ್ ಕಬಳಿಸಿದ್ದರು.
ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ದಾಖಲೆಯನ್ನು ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಹೊಂದಿದ್ದಾರೆ. ಇದೇ ಟೂರ್ನಿಯಲ್ಲಿ ಮಾಲಿಂಗ ಅವರನ್ನು ಹಿಂದಿಕ್ಕಿರುವ ಶಕೀಬ್, 94 ಪಂದ್ಯಗಳಲ್ಲಿ 117 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಸರದಾರರು:
1. ಶಕೀಬ್ ಅಲ್ ಹಸನ್: 117
2. ಲಸಿತ್ ಮಾಲಿಂಗ: 107
3. ರಶೀದ್ ಖಾನ್: 101
4. ಟಿಮ್ ಸೌಥಿ: 100
5. ಶಾಹೀದ್ ಆಫ್ರಿದಿ: 98
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.