ಗಯಾನ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಭಾರತೀಯ ಆಟಗಾರರು ಚೆಂಡನ್ನು ವಿರೂಪಗೊಳಿಸಿದ್ದಾರೆ ಎಂದು ಆರೋಪ ಮಾಡಿರುವ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್‌ಗೆ ಟೀಮ್ ಇಂಡಿಯಾ ಕಪ್ತಾನ ರೋಹಿತ್ ಶರ್ಮಾ ತಿರುಗೇಟು ನೀಡಿದ್ದಾರೆ.
'ಸ್ವಲ್ಪ ಬುದ್ಧಿಶಕ್ತಿ ಉಪಯೋಗಿಸಿ' ಎಂದು ರೋಹಿತ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಸೆಮಿಫೈನಲ್‌ಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಕೇಳಲಾದ ಪ್ರಶ್ನೆಗೆ ರೋಹಿತ್ ಉತ್ತರ ನೀಡಿದ್ದಾರೆ.
'ಇದಕ್ಕೆ ಏನು ಉತ್ತರ ನೀಡಲಿ? ಇಷ್ಟು ಬಿಸಿಲಿನ ವಾತಾವರಣದಲ್ಲಿ ಆಡುವಾಗ ವಿಕೆಟ್ ಕೂಡ ಒಣಗಿರುತ್ತದೆ. ಎಲ್ಲ ತಂಡಗಳ ಬೌಲರ್‌ಗಳು ರಿವರ್ಸ್ ಸ್ವಿಂಗ್ ಮಾಡುತ್ತಿದ್ದಾರೆ. ಎಲ್ಲರಿಗೂ ಸಮಾನವಾಗಿದೆ. ನಮಗೆ ಮಾತ್ರ ಏಕೆ? ಕೆಲವೊಮ್ಮೆ ಬುದ್ಧಿಶಕ್ತಿ ಉಪಯೋಗಿಸಬೇಕಾಗುತ್ತದೆ. ಯಾವ ಪರಿಸ್ಥಿತಿಯಲ್ಲಿ ಆಡುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ. ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾದಲ್ಲಿ ಪಂದ್ಯ ನಡೆಯುತ್ತಿಲ್ಲ' ಎಂದು ಹೇಳಿದ್ದಾರೆ.
ಇಂಜಮಾಮ್ ಆರೋಪ ಏನಾಗಿತ್ತು?
ಪಾಕಿಸ್ತಾನದ 24 ನ್ಯೂಸ್ ಚಾನೆಲ್‌ನ 'ವರ್ಲ್ಡ್ ಕಪ್ ಹಂಗಾಮಾ' ಕಾರ್ಯಕ್ರಮದಲ್ಲಿ ಭಾರತೀಯ ಆಟಗಾರರ ವಿರುದ್ಧ ಇಂಜಮಾಮ್ ಚೆಂಡು ವಿರೂಪಗೊಳಿಸಿದ ಆರೋಪ ಹೊರಿಸಿದ್ದರು. 'ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತೀಯ ವೇಗಿ ಅರ್ಷದೀಪ್ ಸಿಂಗ್‌ಗೆ 15ನೇ ಓವರ್‌ನಲ್ಲೇ ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಲು ಸಾಧ್ಯವಾಯಿತು. ಪಂದ್ಯದ ಅಧಿಕೃತರು ಈ ಕುರಿತು ಕಣ್ಣು ತೆರೆದು ನೋಡಬೇಕು' ಎಂದು ಇಂಜಮಾಮ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.