ADVERTISEMENT

T20 World Cup | ಬಾಂಗ್ಲಾದೇಶಕ್ಕೆ ರೋಚಕ ಗೆಲುವು; ಲಂಕಾಗೆ ಸತತ 2ನೇ ಸೋಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜೂನ್ 2024, 4:31 IST
Last Updated 8 ಜೂನ್ 2024, 4:31 IST
<div class="paragraphs"><p>ತೌಹಿದ್ ಹೃದೋಯ್</p></div>

ತೌಹಿದ್ ಹೃದೋಯ್

   

(ಪಿಟಿಐ ಚಿತ್ರ)

ಡಲ್ಲಾಸ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ 'ಡಿ' ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ಎರಡು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ADVERTISEMENT

ಇದರೊಂದಿಗೆ ಸತತ ಎರಡನೇ ಸೋಲಿಗೆ ಗುರಿಯಾಗಿರುವ ಶ್ರೀಲಂಕಾ, 'ಸೂಪರ್ 8'ರ ಹಂತಕ್ಕೆ ಪ್ರವೇಶಿಸುವುದು ಮತ್ತಷ್ಟು ಕಠಿಣವೆನಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲೂ ಲಂಕಾ ಆರು ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು.

ಡಲ್ಲಾಸ್‌ನ ಗ್ಯ್ರಾಂಡ್ ಪ್ರಯರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಒಂಬತ್ತು ವಿಕೆಟ್ ನಷ್ಟಕ್ಕೆ 124 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಸಾಧಾರಣ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಒಂದು ಹಂತದಲ್ಲಿ 11.3 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ದಿಢೀರ್ ಪತನ ಕಂಡು 17.4 ಓವರ್‌ಗಳಲ್ಲಿ 113 ರನ್‌ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿತ್ತು.

ಆದರೆ ಕೊನೆಯ ಹಂತದಲ್ಲಿ ಅಜೇಯ 16 ರನ್‌ಗಳ ಕೊಡುಗೆ ನೀಡಿದ ಮಹಮುದುಲ್ಲಾ ತಂಡವನ್ನು ಗೆಲುವಿನ ದಡ ಸೇರಿಸಲು ನೆರವಾದರು. ಇನ್ನೂ ಒಂದು ಓವರ್ ಬಾಕಿ ಉಳಿದಿರುವಂತೆಯೇ ಬಾಂಗ್ಲಾದೇಶ ಎಂಟು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಇದರೊಂದಿಗೆ ನಾಲ್ಕು ವಿಕೆಟ್ ಕಬಳಿಸಿದ ಲಂಕಾ ವೇಗಿ ನುವಾನ್ ತುಷಾರಾ ಹೋರಾಟ ವ್ಯರ್ಥವೆನಿಸಿತು. 20 ಎಸೆತಗಳಲ್ಲಿ 40 ರನ್ (4 ಸಿಕ್ಸರ್) ಗಳಿಸಿದ ತೌಹಿದ್ ಹೃದೋಯ್ ಬಾಂಗ್ಲಾ ಪರ ಗೆಲುವಿನ ರೂವಾರಿ ಎನಿಸಿದರು. ಲಿಟನ್ ದಾಸ್ 36 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು.

ಈ ಮೊದಲು ಮುಸ್ತಾಫಿಜುರ್ ರೆಹಮಾನ್ (17ಕ್ಕೆ 3), ರಿಷಾದ್ ಹೊಸೈನ್ (22ಕ್ಕೆ 2) ಹಾಗೂ ತಸ್ಕಿನ್ ಅಹ್ಮದ್ (25ಕ್ಕೆ 2) ದಾಳಿಗೆ ತತ್ತರಿಸಿದ ಲಂಕಾ 124 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಆರಂಭಿಕ ಪಥುಮ್ ನಿಸ್ಸಾಂಕ ಗರಿಷ್ಠ 47 ರನ್ ಗಳಿಸಿದರು. ಕುಸಾಲ್ ಮೆಂಡಿಸ್ (10), ಕಮಿಂದು ಮೆಂಡಿಸ್ (4) ನಿರಾಸೆ ಮೂಡಿಸಿದರು. ಧನಂಜಯ ಡಿಸಿಲ್ವ 21, ಅಸಲಂಕಾ 19 ಹಾಗೂ ಏಂಜೆಲೊ ಮ್ಯಾಥ್ಯೂಸ್ 16 ರನ್ ಗಳಿಸಿದರು. ನಾಯಕ ವನಿಂದು ಹಸರಂಗ ಶೂನ್ಯಕ್ಕೆ ಔಟ್ ಆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.