ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆಗೆ ಗುರಿಯಾಗಿರುವ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬೆಂಬಲ ವ್ಯಕ್ತಪಡಿಸಿದೆ.
ಟಿ–20 ವಿಶ್ವಕಪ್‌ನಲ್ಲಿ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಬಳಗದ ವಿರುದ್ಧ ಅಭಿಮಾನಿಗಳು ಆನ್‌ಲೈನ್ ದಾಳಿ ನಡೆಸಿದ್ದರು. ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ನಿಂದಿಸಲಾಗಿತ್ತು.
ಸದ್ಯ ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತಿರುವ ಬಿಸಿಸಿಐ, ‘ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಶಮಿ ಫೋಟೊವನ್ನು ಹಂಚಿಕೊಂಡಿದ್ದು, ‘ನೀವು ತಂಡದ ಹೆಮ್ಮೆ ಮತ್ತು ಬಲ’ ಎಂದು ಬರೆದುಕೊಂಡಿದೆ.
ಶಮಿ ವಿರುದ್ಧದ ನಿಂದನೆಯನ್ನು ಭಾರತದ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಯಜುವೇಂದ್ರ ಚಾಹಲ್ ಸೇರಿದಂತೆ ಅನೇಕರು ಖಂಡಿಸಿದ್ದರು.
ಸೂಪರ್ 12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಇದು ವಿಶ್ವಕಪ್ ಒಂದರಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗಳಿಸಿದ ಮೊದಲ ಜಯವಾಗಿತ್ತು. 29 ವರ್ಷಗಳಲ್ಲಿ 12 ಬಾರಿ ಮುಖಾಮುಖಿಯಾದಾಗಲೂ ಗೆಲುವು ಭಾರತದ್ದಾಗಿತ್ತು.
ಅಕ್ಟೋಬರ್ 31ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ -ನ್ಯೂಜಿಲೆಂಡ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.