ಸಿಡ್ನಿ: ಭಾರತ ಮತ್ತು ಪಾಕಿಸ್ತಾನ ಈ ಬಾರಿಯ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ. ಈ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಸೂಪರ್ 12ರ ಹಂತದಲ್ಲಿ ಒಂದೇ (ಬಿ) ಗುಂಪಿನಲ್ಲಿ ಆಡಿರುವ ಭಾರತ ಮತ್ತು ಪಾಕಿಸ್ತಾನ, 'ಎ' ಗುಂಪಿನಿಂದ ನಾಕೌಟ್ ತಲುಪಿರುವ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿವೆ.
ಮೊದಲ ಸೆಮಿಫೈನಲ್ ನವೆಂಬರ್ 9 ಸಿಡ್ನಿಯಲ್ಲಿ ಮತ್ತು ಎರಡನೇ ಸೆಮಿಫೈನಲ್ ನವೆಂಬರ್ 10 ರಂದು ಅಡಿಲೇಡ್‌ನಲ್ಲಿ ನಡೆಯಲಿವೆ.
ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನಮೊದಲ ಸೆಮಿಫೈನಲ್‌ನಲ್ಲಿ ಸೆಣಸಿದರೆ, ಭಾರತ ಹಾಗೂ ಇಂಗ್ಲೆಂಡ್ ಎರಡನೇ ಸೆಮಿಫೈನಲ್‌ನಲ್ಲಿ ಪೈಪೋಟಿ ನಡೆಸಲಿವೆ. ಈ ಪಂದ್ಯಗಳಲ್ಲಿ ಗೆಲ್ಲುವವರು ನವೆಂಬರ್ 13ರಂದು ಮೆಲ್ಬರ್ನ್‌ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.
ಫೈನಲ್ ಪಂದ್ಯದ ಕುರಿತು ಟಿ20 ವಿಶ್ವಕಪ್ ಟೂರ್ನಿಯ ಅಧಿಕೃತ ವೆಬ್‌ಸೈಟ್‌ಗೆ ಮಾತನಾಡಿರುವ ವಾಟ್ಸನ್, 'ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗುವುದನ್ನು ನೋಡಲು ಎಲ್ಲರೂ ಬಯಸುತ್ತಾರೆ. ದುರದೃಷ್ಟವಶಾತ್, ಉಭಯ ತಂಡಗಳ ಮೊದಲ (ಸೂಪರ್ 12 ಹಂತದ) ಪಂದ್ಯವನ್ನು ಮೆಲ್ಬರ್ನ್‌ನಲ್ಲಿ ನೋಡಲು ಸಾಧ್ಯವಾಗಿರಲಿಲ್ಲ.ಆದರೆ,ಪಂದ್ಯ ವಿಶೇಷವಾಗಿತ್ತು ಎಂದು ವರದಿಗಳು ಉಲ್ಲೇಖಿಸಿದ್ದವು. ಟಿವಿಯಲ್ಲಿ ನೋಡುವುದೂಅಮೋಘವಾಗಿತ್ತು ಜನರು ಹೇಳಿದ್ದರು. ಭಾರತ ಮತ್ತು ಪಾಕಿಸ್ತಾನ 2007ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಅದೇರೀತಿ ಈ ತಂಡಗಳು ಮತ್ತೊಮ್ಮೆ ಸೆಣಸಾಟ ನಡೆಸುವುದನ್ನು ನೋಡಲು ಪ್ರತಿಯೊಬ್ಬರೂ ಬಯಸುತ್ತಿದ್ದಾರೆ' ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್ 23ರಂದು ನಡೆದ 'ಸೂಪರ್ 12' ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 159ರನ್ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ ಭಾರತ ಕೊನೇ ಎಸೆತದಲ್ಲಿ ಗೆಲುವು ಸಾಧಿಸಿತ್ತು.
ಅಮೋಘ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ, ಕೊನೆವರೆಗೂ ಹೋರಾಡಿದ್ದರು. ಕೇವಲ 53 ಎಸೆತಗಳಲ್ಲಿ 82 ರನ್ ಸಿಡಿಸಿ ಜಯ ತಂದುಕೊಟ್ಟಿದ್ದರು.
ಇವನ್ನೂ ಓದಿ
*ಪಾಕ್ ಎದುರು ಕೊಹ್ಲಿ ಬ್ಯಾಟಿಂಗ್ ಮಾಡಿದ್ದು ದೇವರೇ ಹಾಡಿದಂತಿತ್ತು: ಗ್ರೇಗ್ ಚಾಪೆಲ್
*Factcheck: ಪಾಕ್ ಜನರು 'ಕಾಶ್ಮೀರ ಬೇಡ, ಕೊಹ್ಲಿ ಕಳುಹಿಸಿ' ಎಂದು ಬೇಡಿಕೆ ಇಟ್ಟರೇ!
*'ನಾನು ಸಾರ್ವಕಾಲಿಕ ಶ್ರೇಷ್ಠ ಅಲ್ಲ' ಎಂದ ಕೊಹ್ಲಿ ಹೆಸರಿಸಿದ್ದು ಯಾರನ್ನು ಗೊತ್ತೇ?
*T20 World Cup | ಪಾಕ್ ವಿರುದ್ದ ರೋಚಕ ವಿಜಯದ ರೂವಾರಿ ವಿರಾಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.