ದುಬೈ: ಅಮೇಲಿಯಾ ಕೆರ್ (43;38ಎ, 24ಕ್ಕೆ 3) ಅವರ ಆಲ್‌ರೌಂಡ್ ಆಟದ ಬಲದಿಂದ ನ್ಯೂಜಿಲೆಂಡ್ ಮಹಿಳಾ ತಂಡವು ಭಾನುವಾರ ಫೈನಲ್ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 32 ರನ್‌ಗಳಿಂದ ಮಣಿಸಿ ಚೊಚ್ಚಲ ಟಿ20 ಕ್ರಿಕೆಟ್ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.
ಸತತ ಎರಡನೇ ಬಾರಿ ಫೈನಲ್ ತಲು ಪಿದ್ದ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಮೇಲಿಯಾ, ಸೂಜಿ ಬೇಟ್ಸ್ (32; 31ಎ, 4X3) ಮತ್ತು ಬ್ರೂಕ್ ಹ್ಯಾಲಿಡೇ (38,28ಎ, 4x3) ಬ್ಯಾಟಿಂಗ್ ಬಲದಿಂದ ನ್ಯೂಜಿಲೆಂಡ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 158 ರನ್ ಗಳಿಸಿತು.
ಸವಾಲಿನ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆದಿತ್ತು. ನಾಯಕಿ ಲಾರಾ ವೊಲ್ವಾರ್ಟ್ (33;27ಎ) ಮತ್ತು ತಜ್ಮಿನ್ ಬ್ರಿಟ್ಸ್ (17;18ಎ) ಮೊದಲ ವಿಕೆಟ್‌ಗೆ 51 ರನ್ ಸೇರಿಸಿದ್ದರು. 10ನೇ ಓವರ್‌ನಲ್ಲಿ ಲಾರಾ ಔಟಾದ ಬಳಿಕ ತಂಡವು ನಾಟಕೀಯ ಕುಸಿತಕ್ಕೆ ಒಳಗಾಯಿತು.
ಕೇರ್ ಮತ್ತು ರೋಸ್ಮರಿ ಮೈರ್ (25ಕ್ಕೆ 3) ಅವರ ಮಾರಕ ದಾಳಿಗೆ ಎದುರಾಳಿ ತಂಡದ ಬ್ಯಾಟರ್‌ಗಳು ತಡಬಡಾಯಿಸಿದರು. ಹೀಗಾಗಿ ದಕ್ಷಿಣ ಆಫ್ರಿಕಾ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 126 ರನ್ ಗಳಿಸಿ ಹೋರಾಟವನ್ನು ಮುಗಿಸಿ ದ್ದರಿಂದ ಮೊದಲ ಬಾರಿ ವಿಶ್ವಕಪ್ ಗೆಲ್ಲುವ ಕನಸು ಕೂಡ ಭಗ್ನವಾಯಿತು.
2009 ಮತ್ತು 2010ರಲ್ಲಿ ಸತತ ಎರಡು ಬಾರಿ ಫೈನಲ್ ಪ್ರವೇಶಿಸಿದ್ದ ನ್ಯೂಜಿಲೆಂಡ್ ಇದೇ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿದೆ. ಈ ಸಾಧನೆ ಮಾಡಿದ ನಾಲ್ಕನೇ ತಂಡ ಎಂಬ ಹಿರಿಮೆಗೆ ಪಾತ್ರವಾಯಿತು. ಆಸ್ಟ್ರೇಲಿಯಾ ಆರು ಬಾರಿ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಲಾ ಒಂದು ಸಲ ಪ್ರಶಸ್ತಿ ಗೆದ್ದಿವೆ.
ದಕ್ಷಿಣ ಆಫ್ರಿಕಾ ತಂಡವು ‘ಚೋಕರ್ಸ್’ ಹಣೆಪಟ್ಟಿಯನ್ನು ಕಳಚುವಲ್ಲಿ ಮತ್ತೆ ವಿಫಲವಾಯಿತು. ಕಳೆದ ಬಾರಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ಹರಿಣ ಪಡೆ, ಈ ಬಾರಿಯೂ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಪಂದ್ಯ ಸೋಲು
ತ್ತಿದ್ದಂತೆ ದಕ್ಷಿಣ ಆಫ್ರಿಕಾ ಆಟಗಾರ್ತಿಯರು ಕಣ್ಣೀರು ಹಾಕಿದರು.
ಸಂಕ್ಷಿಪ್ತ ಸ್ಕೋರು:
ನ್ಯೂಜಿಲೆಂಡ್: 20 ಓವರ್‌ಗಳಲ್ಲಿ 5ಕ್ಕೆ158 (ಸೂಜಿ ಬೇಟ್ಸ್ 32, ಅಮೇಲಿಯಾ ಕೆರ್ 43, ಬ್ರೂಕ್ ಹ್ಯಾಲಿಡೇ 38, ನೊನ್‌ಕುಲುಲೆಕೊ ಮ್ಲಾಬಾ 31ಕ್ಕೆ2). ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 9ಕ್ಕೆ 126 (ಲಾರಾ ವೊಲ್ವಾರ್ಟ್ 33, ತಜ್ಮಿನ್ ಬ್ರಿಟ್ಸ್ 17, ಅಮೆಲಿಯಾ ಕೇರ್ 24ಕ್ಕೆ 3, ರೋಸ್ಮರಿ ಮೈರ್ 25ಕ್ಕೆ 3). ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 32 ರನ್‌ಗಳ ಜಯ, ಪ್ರಶಸ್ತಿ. ಪಂದ್ಯದ ಆಟಗಾರ್ತಿ: ಅಮೇಲಿಯಾ ಕೆರ್
ನ್ಯೂಜಿಲೆಂಡ್‌ಗೆ ಡಬಲ್ ಧಮಾಕ...
ಈ ಭಾನುವಾರವನ್ನು ನ್ಯೂಜಿಲೆಂಡ್ ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯಲ್ಲ. ಆ ದೇಶದ ಪುರುಷರ ತಂಡವು ಭಾರತದಲ್ಲಿ 36 ವರ್ಷಗಳ ನಂತರ ಟೆಸ್ಟ್ ಪಂದ್ಯ ಜಯಿಸಿತು. ಅದೇ ದಿನ ಕಿವೀಸ್ ಮಹಿಳಾ ತಂಡ ಟಿ20 ವಿಶ್ವಕಪ್ ಜಯಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.