ನ್ಯೂಯಾರ್ಕ್: ಸೋಮವಾರ ನಡೆದ ಟಿ20 ವಿಶ್ವಕಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶ ವಿರುದ್ಧ 4 ರನ್‌ಗಳ ರೋಚಕ ಜಯ ಸಾಧಿಸಿತು.
ಬ್ಯಾಟರ್‌ಗಳಿಗೆ ತ್ರಾಸದಾಯಕವಾಗಿದ್ದ ಈ ಪಿಚ್‌ನಲ್ಲಿ 113 ರನ್‌ಗಳ ಅಲ್ಪಮೊತ್ತವನ್ನು ರಕ್ಷಿಸುವಲ್ಲಿ ದಕ್ಷಿಣ ಆಫ್ರಿಕಾ ಯಶಸ್ವಿಯಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡವು ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅವರ ಅರ್ಧಶತಕದ ಜೊತೆಯಾಟದ ನೆರವಿಂದ 6 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾ ತಂಡವು 4 ರನ್‌ಗಳಿಂದ ಸೋಲು ಕಂಡಿತ್ತು.
ಬಾಂಗ್ಲಾ ವಿರುದ್ಧ ಗೆಲ್ಲುವ ಮೂಲಕ ದಕ್ಷಿಣಾ ಆಫ್ರಿಕಾ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಜತೆಗೆ ಸೂಪರ್ ಎಂಟರ ಘಟ್ಟಕ್ಕೆ ಸ್ಥಾನವನ್ನು ಕಾಯ್ದಿರಿಸಿತು.
ದಕ್ಷಿಣಾ ಆಪ್ರಿಕಾದ ಹೆನ್ರಿಚ್ ಕ್ಲಾಸೆನ್ 46, ಡೇವಿಡ್ ಮಿಲ್ಲರ್ 29 ರನ್‌ಗಳಿಸುವ ಮೂಲಕ ತಂಡಕ್ಕೆ ಆಧಾರವಾದರು. ಆಫ್ರಿಕಾ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಕೇಶವ್ ಮಹಾರಾಜ ಮೂರು ವಿಕೆಟ್ ಪಡೆದರೆ, ಕಗಿಸೊ ರಬಾಡ ಮತ್ತು ಹೆನ್ರಿಚ್ ನಾರ್ಟ್ಜೆ ತಲಾ ಎರಡು ವಿಕೆಟ್ ಗಳಿಸಿದರು.
ಬಾಂಗ್ಲಾ ಪರವಾಗಿ ತೌಹಿದ್ ಹೃದಯ್ 37, ಮಹ್ಮದುಲ್ಲಾ 20 ರನ್ ಹೊಡೆದು ಗಮನ ಸೆಳೆದರು. ತಂಜಿಮ್ ಹಸನ್ ಶಕಿಬ್ 3, ತಸ್ಕಿನ್ ಅಹ್ಮದ್ 2 ವಿಕೆಟ್ ಪಡೆದು ಆಫ್ರಿಕಾವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದರು.
ಪಂದ್ಯದ ರೋಚಕ ಕ್ಷಣ...
ಪಂದ್ಯದ ಕೊನೆಯ ಓವರ್‌ನಲ್ಲಿ ಬಾಂಗ್ಲಾ ತಂಡದ ಗೆಲುವಿಗೆ 11 ರನ್ ಬೇಕಿತ್ತು. ಕೇಶವ್ ಮಹಾರಾಜ್ ಕೊನೆಯ ಓವರ್ ಬೌಲ್ ಮಾಡಿದರು. ಅಂತಿಮ ಎರಡು ಎಸೆತದಲ್ಲಿ 6 ರನ್ ಬೇಕಿದ್ದಾಗ ಮಹ್ಮದುಲ್ಲಾ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದರು. ಆದರೆ, ಬೌಂಡರಿ ಲೈನ್ ಬಳಿ ಏಡನ್ ಮರ್ಕರಂ ಕ್ಯಾಚ್ ಹಿಡಿದು ಬಾಂಗ್ಲಾಕ್ಕೆ ನಿರಾಸೆ ಮೂಡಿಸಿದರು.
ಅಂತಿಮವಾಗಿ ಬಾಂಗ್ಲಾ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 109 ರನ್ ಗಳಿಸಿ ಸವಾಲನ್ನು ಮುಗಿಸಿತು.
ಸಂಕ್ಷಿಪ್ತ ಸ್ಕೋರು...
ದಕ್ಷಿಣ ಆಫ್ರಿಕಾ: 20 ಓವರುಗಳಲ್ಲಿ 6 ಕ್ಕೆ 113 (ಕ್ವಿಂಟನ್ ಡಿಕಾಕ್ 18, ಹೆನ್ರಿಚ್ ಕ್ಲಾಸೆನ್ 46, ಡೇವಿಡ್ ಮಿಲ್ಲರ್ 29; ತಂಜಿಮ್ ಹಸನ್ ಶಕಿಬ್ 18ಕ್ಕೆ3, ತಸ್ಕಿನ್ ಅಹ್ಮದ್ 19ಕ್ಕೆ2, ರಿಷದ್ ಹುಸೇನ್ 32ಕ್ಕೆ1).
ಬಾಂಗ್ಲಾದೇಶ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 109 (ತೌಹಿದ್ ಹೃದಯ್ 37, ಮಹ್ಮದುಲ್ಲಾ 20; ಕೇಶವ್ ಮಹಾರಾಜ 27ಕ್ಕೆ 3, ಕಗಿಸೊ ರಬಾಡ 19ಕ್ಕೆ 2, ಹೆನ್ರಿಚ್ ನಾರ್ಟ್ಜೆ 17ಕ್ಕೆ 2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.