ಗಯಾನ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಲಯದಲ್ಲಿದ್ದಾರೆ.
ಈವರೆಗೆ ಆಡಿರುವ ಆರು ಪಂದ್ಯಗಳ ಪೈಕಿ ಎರಡು ಸಲ ಶೂನ್ಯಕ್ಕೆ ಔಟ್ ಆಗಿದ್ದಾರೆ. ಅಲ್ಲದೆ ಟೂರ್ನಿಯಲ್ಲಿ 11ರ ಸರಾಸರಿಯಲ್ಲಿ 66 ರನ್ ಮಾತ್ರ ಗಳಿಸಿದ್ದು, ಒಂದು ಸಲವೂ ಅರ್ಧಶತಕ ಗಳಿಸಲು ಸಾಧ್ಯವಾಗಿಲ್ಲ.
ಗುಂಪು ಹಂತದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್, ಸೂಪರ್ ಎಂಟರ ಹಂತದಲ್ಲಿ ಲಯಕ್ಕೆ ಮರಳುವ ಸೂಚನೆ ನೀಡಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ ಮತ್ತೆ ಶೂನ್ಯಕ್ಕೆ ಔಟ್ ಆಗುವ ಮೂಲಕ ಹಿನ್ನಡೆ ಅನುಭವಿಸಿದ್ದರು.
ಈವರೆಗೆ ಕೊಹ್ಲಿ ಸ್ಕೋರ್ ಪಟ್ಟಿ ಇಂತಿದೆ: 1, 4, 0, 24, 37, 0
ಕೊಹ್ಲಿ ಬೆಂಬಲಕ್ಕೆ ನಿಂತ ರೋಹಿತ್:
'ಇಲ್ಲ, ಇವೆಲ್ಲವೂ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ನಿಮಗೆ ಇದನ್ನು ಆಲಿಸುವಾಗ ಬೋರಿಂಗ್ ಅನಿಸಬಹುದು. ಆದರೆ ನ್ಯೂಯಾರ್ಕ್‌ನಲ್ಲಿ ಪರಿಸ್ಥಿತಿ ಹೇಗಿತ್ತು ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ಅಲ್ಲಿ ಕ್ರೀಸಿಗೆ ಇಳಿದ ತಕ್ಷಣ ಹೊಡೆಬಡಿಯ ಆಟವಾಡುವುದು ಸೂಕ್ತವೆನಿಸಿರಲಿಲ್ಲ' ಎಂದು ರೋಹಿತ್ ಹೇಳಿದ್ದಾರೆ.
'ಪ್ರತಿಯೊಬ್ಬ ಆಟಗಾರನೂ ತನಗೆ ವಹಿಸಿರುವ ಜವಾಬ್ದಾರಿಯನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಪಂದ್ಯದಲ್ಲಿ ಪರಿಣಾಮ ಬೀರಲು ಯತ್ನಿಸುತ್ತಾರೆ. ಪ್ರತಿಯೊಬ್ಬರೂ ನಿರ್ಭೀತಿಯ ಶೈಲಿಯ ಕ್ರಿಕೆಟ್ ಆಡುತ್ತಾರೆ' ಎಂದು ಹೇಳಿದ್ದಾರೆ.
'ಕಳೆದ ಕೆಲವು ವರ್ಷಗಳಲ್ಲಿ ತಂಡದಲ್ಲಿ ಇಂತಹ ವಾತಾವರಣ ಸೃಷ್ಟಿ ಮಾಡಿದ್ದೇವೆ. ವೈಯಕ್ತಿಕ ಸಾಧನೆ ಹೆಚ್ಚಿನ ಮಹತ್ವ ಗಿಟ್ಟಿಸಿಕೊಳ್ಳುವುದಿಲ್ಲ' ಎಂದು ಅವರು ಉಲ್ಲೇಖಿಸಿದ್ದಾರೆ.
'ಸೆಮಿಫೈನಲ್ ಪಂದ್ಯದ ಕುರಿತು ಹೆಚ್ಚು ಚಿಂತೆ ಮಾಡುವುದಿಲ್ಲ. ನಮಗಿದು ಇನ್ನೊಂದು ಪಂದ್ಯ ಮಾತ್ರವಾಗಿದೆ. ನಮ್ಮ ಸಾಮರ್ಥ್ಯಕ್ಕೆ ತಕ್ಕ ಕ್ರಿಕೆಟ್ ಆಡಿದ್ದಲ್ಲಿ ಖಂಡಿತವಾಗಿಯೂ ಗೆಲ್ಲಲಿದ್ದೇವೆ. ಫೈನಲ್ ಕುರಿತು ಈಗಲೇ ಯೋಚಿಸುವುದಿಲ್ಲ. ನಮ್ಮ ರಣನೀತಿ ಬಗ್ಗೆ ಸ್ಪಷ್ಟತೆ ಹೊಂದಿರಬೇಕು ಎಂಬುದು ಅಷ್ಟೇ ಮುಖ್ಯ' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.