ADVERTISEMENT

T20 World Cup: ಮಿಂಚಿದ ಅರ್ಶದೀಪ್, ಭಾರತಕ್ಕೆ 160 ರನ್ ಗುರಿ ನೀಡಿದ ಪಾಕಿಸ್ತಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2022, 10:05 IST
Last Updated 23 ಅಕ್ಟೋಬರ್ 2022, 10:05 IST
ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಂ ವಿಕೆಟ್‌ ಪಡೆದ ಸಂಭ್ರಮದಲ್ಲಿ ಅರ್ಶದೀಪ್‌ ಸಿಂಗ್‌
ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಂ ವಿಕೆಟ್‌ ಪಡೆದ ಸಂಭ್ರಮದಲ್ಲಿ ಅರ್ಶದೀಪ್‌ ಸಿಂಗ್‌   

ಮೆಲ್ಬರ್ನ್:ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್‌ 12ರ ಹಂತದ ಪಂದ್ಯದಲ್ಲಿಪಾಕಿಸ್ತಾನ ತಂಡ ಭಾರತದ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳನ್ನು ಕಳೆದುಕೊಂಡು 159 ರನ್‌ ಕಲೆಹಾಕಿದೆ.

ಇಲ್ಲಿನ ನಡೆಯುತ್ತಿರುವ ಪಂದ್ಯದಲ್ಲಿಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಟಿ20 ಮಾದರಿಯಲ್ಲಿ ವಿಶ್ವದ ಶ್ರೇಷ್ಠ ಆರಂಭಿಕ ಜೋಡಿಗಳಲ್ಲಿ ಒಂದೆನಿಸಿರುವ ಮೊಹಮ್ಮದ್‌ ರಿಜ್ವಾನ್‌ (4) ಹಾಗೂ ಬಾಬರ್‌ ಅಜಂ (0) ಪಾಕಿಸ್ತಾನಕ್ಕೆ ಕೈಕೊಟ್ಟರು.

ಯುವ ವೇಗಿ ಅರ್ಶದೀಪ್ ಸಿಂಗ್‌, ತಂಡದ ಮೊತ್ತ 15 ರನ್‌ ಆಗುವಷ್ಟರಲ್ಲಿಯೇ ಇವರಿಬ್ಬರಿಗೂ ಪೆವಿಲಿಯನ್‌ ದಾರಿ ತೋರಿದರು.

ADVERTISEMENT

ಆಸರೆಯಾದ ಮಸೂದ್, ಇಫ್ತಿಕರ್‌
ಈ ಹಂತದಲ್ಲಿ ಜೊತೆಯಾದ ಶಾನ್‌ ಮಸೂದ್‌ ಮತ್ತು ಇಫ್ತಿಕರ್‌ ಅಹಮದ್ ವಿಕೆಟ್ ಉರುಳುವಿಕೆಗೆ ತಡೆಯೊಡ್ಡಿದರು. ಆರಂಭದಲ್ಲಿ ರಕ್ಷಣಾತ್ಮಕವಾಗಿ ಆಡಿದ ಇವರಿಬ್ಬರು, ನಿಧಾನವಾಗಿ ರನ್‌ ಗತಿ ಹೆಚ್ಚಿಸಿದರು. ಈ ಜೋಡಿ ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 76ರನ್ ಕಲೆಹಾಕಿತು.

ಇಫ್ತಿಕರ್‌ 34 ಎಸೆತಗಳಲ್ಲಿ 4 ಸಿಕ್ಸರ್‌ 2 ಬೌಂಡರಿ ಸಹಿತ 51 ರನ್‌ ಗಳಿಸಿ ಔಟಾದರು. ಆದರೆ, ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಕ್ರೀಸ್‌ಗೆ ಅಂಟಿಕೊಂಡು ಕೊನೆಯವರೆಗೂ ಆಡಿದ ಮಸೂದ್‌, ಕೆಳ ಕ್ರಮಾಂಕದ ಬ್ಯಾಟರ್‌ಗಳೊಂದಿಗೆ ರನ್‌ ಗತಿ ಹೆಚ್ಚಿಸುವ ಪ್ರಯತ್ನ ಮಾಡಿದರು.

42 ಎಸೆತಗಳನ್ನು ಎದುರಿಸಿದ ಮಸೂದ್‌, 52 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 5 ಬೌಂಡರಿಗಳಿದ್ದವು.

ಕೊನೆಯಲ್ಲಿ ಶಾಹಿನ್‌ ಅಫ್ರಿದಿ (16),ಮಸೂದ್‌ಗೆ ಉತ್ತಮ ಬೆಂಬಲ ನೀಡಿದರು. ಹೀಗಾಗಿ 159 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಭಾರತ ಪರ ಉತ್ತಮವಾಗಿ ಬೌಲಿಂಗ್‌ ಮಾಡಿದ ಅರ್ಶದೀಪ್‌ ಸಿಂಗ್‌ ಹಾಗೂಹಾರ್ದಿಕ್‌ ಪಾಂಡ್ಯ ತಲಾ ಮೂರು ವಿಕೆಟ್‌ ಕಬಳಿಸಿದರು. ಇವರಿಬ್ಬರೂ ತಮ್ಮ ಪಾಲಿನ 4 ಓವರ್‌ಗಳಲ್ಲಿ ಕ್ರಮವಾಗಿ 32 ಮತ್ತು 30 ರನ್‌ ಬಿಟ್ಟುಕೊಟ್ಟರು. ಮತ್ತೆರಡುವಿಕೆಟ್‌ಗಳನ್ನುಮೊಹಮ್ಮದ್‌ ಶಮಿ ಮತ್ತು ಭುವನೇಶ್ವರ್‌ ಕುಮಾರ್ ಹಂಚಿಕೊಂಡರು.

ಆಡುವ ಹನ್ನೊಂದರ ಬಳಗ
ಭಾರತ:ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್) ಅಕ್ಷರ್ ಪಟೇಲ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಆರ್ಷದೀಪ್ ಸಿಂಗ್

ಪಾಕಿಸ್ತಾನ:ಬಾಬರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್‌ಕೀಪರ್), ಶಾನ್ ಮಸೂದ್, ಹೈದರ್ ಅಲಿ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಇಫ್ತಿಕರ್ ಅಹಮದ್, ಅಸಿಫ್ ಅಲಿ, ಶಾಹೀನ್ ಆಫ್ರಿದಿ, ಹ್ಯಾರಿಸ್ ರವೂಫ್, ನಸೀಂ ಶಾಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.