ನವದೆಹಲಿ: ಭಾರತ–ಪಾಕಿಸ್ತಾನ ನಡುವಣ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದ ವೀಕ್ಷಣೆಯು ಡಿಜಿಟಲ್ ವೇದಿಕೆಯಲ್ಲಿ ಹೊಸ ದಾಖಲೆ ಬರೆದಿದೆ.
‘ಡಿಸ್ನಿ ಪ್ಲಸ್ ಹಾಟ್‌ಸ್ಟಾರ್’ನಲ್ಲಿ ಪಂದ್ಯವನ್ನು 1.8 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದು, ಹೊಸ ದಾಖಲೆಯಾಗಿದೆ. ಇವೆರಡು ತಂಡಗಳು ಏಷ್ಯಾಕಪ್‌ನಲ್ಲಿ ಆಡಿದ್ದಾಗ 1.4 ಕೋಟಿ ಮಂದಿ ವೀಕ್ಷಿಸಿದ್ದು, ಇದುವರೆಗಿನ ದಾಖಲೆಯಾಗಿತ್ತು’ ಎಂದು ಮೂಲಗಳು ತಿಳಿಸಿವೆ.
ಪಂದ್ಯದ ಮೊದಲ ಎಸೆತ ಹಾಕುವ ವೇಳೆಗೆ 36 ಲಕ್ಷ ಮಂದಿ ನೇರ ಪ್ರಸಾರ ವೀಕ್ಷಿಸುತ್ತಿದ್ದರು. ಪಾಕಿಸ್ತಾನದ ಇನಿಂಗ್ಸ್ ಕೊನೆಗೊಂಡಾಗ ಈ ಸಂಖ್ಯೆ 1.1 ಕೋಟಿಗೆ ಹೆಚ್ಚಿತ್ತು. ಇನಿಂಗ್ಸ್ ವಿರಾಮದ ವೇಳೆ ಇದು 1.4 ಕೋಟಿಗೆ ಏರಿಕೆ ಕಂಡಿತಲ್ಲದೆ, ಪಂದ್ಯ ಕೊನೆಗೊಳ್ಳುವ ವೇಳೆಗೆ ವೀಕ್ಷಕರ ಸಂಖ್ಯೆ 1.8 ಕೋಟಿಗೆ ತಲುಪಿತ್ತು.
ಇದಲ್ಲದೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಪಿವಿಆರ್ ಮತ್ತು ಐನಾಕ್ಸ್‌ನಲ್ಲಿ ಸಾವಿರಾರು ಮಂದಿ ಪಂದ್ಯ ವೀಕ್ಷಿಸಿದ್ದಾರೆ. 51 ನಗರಗಳಲ್ಲಿ ಒಟ್ಟು 122 ಸ್ಕೀನ್‌ಗಳಲ್ಲಿ ಪಂದ್ಯಗಳ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು ಎಂದು ಐನಾಕ್ಸ್ ಲಿಮಿಟೆಡ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.