2007ರಲ್ಲಿ ನಡೆದ ಮೊಟ್ಟಮೊದಲ ಟಿ20 ವಿಶ್ವಕಪ್ ಟೂರ್ನಿಯನ್ನು ಕ್ರಿಕೆಟ್ ಲೋಕವು ಎರಡು ಕಾರಣಗಳಿಗಾಗಿ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಮೊದಲನೇಯದು ಚುಟುಕು ಮಾದರಿ ಬೆಳವಣಿಗೆಗೆ ಬುನಾದಿ ಹಾಕಿದ ಟೂರ್ನಿ ಅದಾಗಿತ್ತು. ಎರಡನೇಯದ್ದು ಮಹೇಂದ್ರಸಿಂಗ್ ಧೋನಿ ಎಂಬ ‘ಮಹಾನಾಯಕ’ನ ಉದಯಕ್ಕೆ ಕಾರಣವಾದ ಟೂರ್ನಿ ಅದಾಯಿತು.
ಅದೇ ವರ್ಷ ವೆಸ್ಟ್ಇಂಡೀಸ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಹೀನಾಯವಾಗಿ ಸೋತಿತ್ತು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಖ್ಯಾತನಾಮ ಆಟಗಾರರು ಸಿದ್ಧರಾಗಲಿಲ್ಲ. ವಿಶ್ರಾಂತಿಗೆ ತೆರಳಿದರು. ಆಗಿನ್ನೂ ಚುಟುಕು ಮಾದರಿಯು ಹೆಚ್ಚು ಜನಪ್ರಿಯವೂ ಆಗಿರಲಿಲ್ಲ. ದೇಶ ವಿದೇಶಗಳ ದೊಡ್ಡ ಕ್ರಿಕೆಟಿಗರು ಈ ಮಾದರಿಯ ಬಗ್ಗೆ ಟೀಕಿಸಿದ್ದೇ ಹೆಚ್ಚು. ಅದರಿಂದಾಗಿ ವಿಕೆಟ್‌ಕೀಪರ್ ಧೋನಿಗೆ ನಾಯಕತ್ವ ನೀಡಲಾಯಿತು. ರಾಂಚಿಯ ಧೋನಿಯ ದಿಟ್ಟ ನಿರ್ಧಾರಗಳು ತಂಡವನ್ನು ಪ್ರಶಸ್ತಿ ಜಯದತ್ತ ತಂದು ನಿಲ್ಲಿಸಿದ್ದು ಇತಿಹಾಸ.
ಪ್ರಮುಖ ಅಂಶಗಳು
l ಡಿ ಗುಂಪಿನಲ್ಲಿ ಭಾರತ –ಪಾಕಿಸ್ತಾನ ಮುಖಾಮುಖಿಯಾಗಿದ್ದ ಪಂದ್ಯದ ಫಲಿತಾಂಶವು ಬಾಲೌಟ್‌ನಲ್ಲಿ (3–0) ನಿರ್ಧಾರವಾಯಿತು. ಭಾರತ ಜಯಿಸಿತ್ತು.
l ಇ ಗುಂಪು ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಭಾರತದ ಯುವರಾಜ್ ಸಿಂಗ್ ಅವರು ಸ್ಟುವರ್ಟ್ ಬ್ರಾಡ್ ಅವರ ಒಂದು ಓವರ್‌ನಲ್ಲಿ ಸತತ ಆರು ಸಿಕ್ಸರ್ ಸಿಡಿಸಿದ್ದರು.
l ಫೈನಲ್‌ನಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಭಾರತ 20 ಓವರ್‌ಗಳಲ್ಲಿ 5ಕ್ಕೆ157 ರನ್ ಗಳಿಸಿತು. ಪಾಕಿಸ್ತಾನ 19.3 ಓವರ್‌ಗಳಲ್ಲಿ 152 ರನ್ ಗಳಿಸಿತು. ಭಾರತ 5 ರನ್‌ಗಳಿಂದ ಜಯಿಸಿತು.
l ಫೈನಲ್ ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಲು ಭಾರತದ ವೇಗಿ ಜೋಗಿಂದರ್ ಶರ್ಮಾ ಅವರಿಗೆ ಧೋನಿ ಅವಕಾಶ ನೀಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಏಕೆಂದರೆ ಶ್ರೀಶಾಂತ್, ಇರ್ಫಾನ್ ಅವರಂತಹ ಅನುಭವಿಗಳನ್ನು ಬಿಟ್ಟು ಶರ್ಮಾಗೆ ಚೆಂಡು ನೀಡಲಾಗಿತ್ತು. ಆದರೆ, ಆ ಓವರ್‌ನಲ್ಲಿ ಜೋಗಿಂದರ್ ಅವರು ಮಿಸ್ಬಾ ಉಲ್ ಹಕ್ ವಿಕೆಟ್ ಗಳಿಸಿ ಪಾಕ್ ಇನಿಂಗ್ಸ್‌ಗೆ ತೆರೆಯೆಳೆದರು.
l ಎಡಗೈ ವೇಗಿ ಇರ್ಫಾನ್ ಪಠಾಣ್ ಅವರಿಗೆ ಫೈನಲ್ ಪಂದ್ಯಶ್ರೇಷ್ಠ ಗೌರವ ನೀಡಲಾಯಿತು.
ಮೂಲ: ಐಸಿಸಿ ಹಾಗೂ ಕ್ರಿಕೆಟ್ ವೆಬ್‌ಸೈಟ್‌ಗಳು
l ಮೊದಲ ವಿಶ್ವಕಪ್ : 2007
l ಆತಿಥ್ಯ: ದಕ್ಷಿಣ ಆಫ್ರಿಕಾ
l ವಿಜೇತರು: ಭಾರತ
l ರನ್ನರ್ಸ್ ಅಪ್: ಪಾಕಿಸ್ತಾನ
l ಸ್ಪರ್ಧಿಸಿದ ತಂಡಗಳು: 12
l ಪಂದ್ಯಗಳು: 27
l ಸರಣಿಶ್ರೇಷ್ಠ: ಶಾಹೀದ್ ಆಫ್ರಿದಿ (ಪಾಕ್)
l ಶ್ರೇಷ್ಠ ಬ್ಯಾಟರ್: ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ; 265 ರನ್)
l ಶ್ರೇಷ್ಠ ಬೌಲರ್: ಉಮರ್ ಗುಲ್ (ಪಾಕ್; 13 ವಿಕೆಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.