ADVERTISEMENT

T-20 WC | IND vs AUS: ಆಸ್ಟ್ರೇಲಿಯಾ ವಿರುದ್ಧ ಭಾರತದ ವಿಜಯದ ಕೇಕೆ

24 ರನ್‌ಗಳಿಂದ ಜಯ: ಸೆಮಿಫೈನಲ್‌ಗೆ ಭಾರತ

ಏಜೆನ್ಸೀಸ್
Published 24 ಜೂನ್ 2024, 18:19 IST
Last Updated 24 ಜೂನ್ 2024, 18:19 IST
<div class="paragraphs"><p>ಭಾರತ ತಂಡದ ಆಟಗಾರರ ಸಂಭ್ರಮ</p></div>

ಭಾರತ ತಂಡದ ಆಟಗಾರರ ಸಂಭ್ರಮ

   

ಗ್ರಾಸ್‌ ಐಲೆಟ್‌, ಸೇಂಟ್‌ ಲೂಸಿಯಾ: ರೋಹಿತ್ ಶರ್ಮಾ ಅವರ ’ಸೂಪರ್ ಹಿಟ್’ ಬ್ಯಾಟಿಂಗ್ ಅಬ್ಬರದಲ್ಲಿ ಆಸ್ಟ್ರೇಲಿಯಾ ತಂಡದ ಆರ್ಭಟ ಮರೆಯಾಯಿತು.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿದ ಭಾರತ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.  ಮಿಚೆಲ್ ಮಾರ್ಷ್ ನಾಯಕತ್ವದ ಆಸ್ಟ್ರೇಲಿಯಾ ನಾಲ್ಕರ ಘಟ್ಟದ ಹಾದಿಯಿಂದ ಹೊರಬೀಳುವುದು ಬಹುತೇಕ ಖಚಿತವಾಯಿತು. ಕಳೆದ ಪಂದ್ಯದಲ್ಲಿ ಅಫ್ಗಾನಿಸ್ತಾನ ಎದುರು ಮುಖಭಂಗ ಅನುಭವಿಸಿದ್ದ ಆಸ್ಟ್ರೇಲಿಯಾ ಭಾರತದ ಎದುರೂ ಮಂಡಿಯೂರಿತು. ಮಂಗಳವಾರ ನಡೆಯಲಿರುವ ಬಾಂಗ್ಲಾ–ಅಫ್ಗಾನಿಸ್ತಾನ ಪಂದ್ಯದ ಫಲಿತಾಂಶದ ನಂತರ ಆಸ್ಟ್ರೇಲಿಯಾದ ಭವಿಷ್ಯ ನಿರ್ಧಾರವಾಗಲಿದೆ.

ADVERTISEMENT

ಏಳು ತಿಂಗಳುಗಳ ಹಿಂದೆ ಅಹಮದಾಬಾದಿನಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋತಿದ್ದ ಭಾರತ ಇಲ್ಲಿ ಮುಯ್ಯಿ ತೀರಿಸಿಕೊಂಡಿತು.

ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 24 ರನ್‌ಗಳಿಂದ  ಜಯಿಸಲು ನಾಯಕ ರೋಹಿತ್ ಅವರ ಬ್ಯಾಟಿಂಗ್ ಮತ್ತು ಬೌಲರ್‌ಗಳ ಛಲ ಬಿಡದ ಆಟ ಕಾರಣವಾಯಿತು. 

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲಿ ಯಶಸ್ಸು ಲಭಿಸಿತು.   ಆಸ್ಟ್ರೇಲಿಯಾ ಪರ ಪರಿಣಾಮಕಾರಿಯಾಗಿದ್ದ ಜೋಶ್‌ ಹ್ಯಾಜಲ್‌ವುಡ್‌ (4–0–14–1) ಅವರು ಕೊಹ್ಲಿ ವಿಕೆಟ್‌ ಪಡೆದರು. ಟಿಮ್‌ ಡೇವಿಡ್‌ ಮಿಡ್‌ಆನ್‌ ಕಡೆ ಓಡಿ ಪಡೆದ ಉತ್ತಮ ಕ್ಯಾಚ್‌ ಇದಕ್ಕೆ ಕಾರಣವಾಯಿತು. ಕೊಹ್ಲಿ ಬರಿಗೈಯಲ್ಲಿ ಮರಳಿದರು.

ಆದರೆ ಇನ್ನೊಂದೆಡೆ ಇದ್ದ ರೋಹಿತ್‌ ಬೀಸಾಟ ಮುಗಿಲುಮುಟ್ಟಿತು.  ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್ ಅವರ ಮೂರನೇ ಓವರ್‌ನಲ್ಲಿ ಶರ್ಮಾ 28 ರನ್‌ ಬಾಚಿದರು. ಆ ಓವರ್‌ನಲ್ಲಿ ನಾಲ್ಕು ಸಿಕ್ಸರ್, ಒಂದು ಬೌಂಡರಿ ಜೊತೆ ಒಂದು ವೈಡ್ ಸೇರಿ 29 ರನ್‌ಗಳು ಹರಿದುಬಂದವು.

ರೋಹಿತ್ ಕೇವಲ ಎಂಟು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಆದರೆ ತಂಡ 5 ವಿಕೆಟ್‌ಗೆ 205 ರನ್‌ಗಳ ದೊಡ್ಡ ಮೊತ್ತ ಪೇರಿಸಲು ನೆರವಾದರು. ಎದುರಾಳಿ ಬೌಲರ್‌ಗಳ ಬೆವರಿಳಿಸಿದರು. ಕೇವಲ 41 ಎಸೆತಗಳಲ್ಲಿ ಏಳು ಬೌಂಡರಿ, ಎಂಟು ಸೊಗಸಾದ ಸಿಕ್ಸರ್‌ಗಳಿದ್ದ 92 ರನ್‌ ಸಿಡಿಸಿದರು. 

 ರಿಷಭ್‌ ಪಂತ್ (15) ಜೊತೆ 87 ರನ್‌ಗಳ ಎರಡನೇ ಜೊತೆಯಾಟದಲ್ಲಿ ರೋಹಿತ್ ಅವರದೇ ಸಿಂಹಪಾಲು. ಕೊನೆಗೂ ಮಾರ್ಕಸ್‌ ಸ್ಟೊಯಿನಿಸ್ ಈ ಜೊತೆಯಾಟ ಮುರಿದರು. ಪಂತ್‌ ಅವರು ಲಾಂಗ್‌ಆಫ್‌ನಲ್ಲಿ ಹ್ಯಾಜಲ್‌ವುಡ್ ಹಿಡಿದ ಕ್ಯಾಚಿಗೆ ನಿರ್ಗಮಿಸಬೇಕಾಯಿತು.

ಶತಕದತ್ತ ಹೆಜ್ಜೆಯಿಟ್ಟಿದ್ದ ರೋಹಿತ್ ಅವರ ವಿಕೆಟ್‌ ಅನ್ನು  ಸ್ಟಾರ್ಕ್ ಅವರೇ ಗಳಿಸಿದರು. ಈ ಪಂದ್ಯದಲ್ಲಿ ರೋಹಿತ್ ಅವರಿಂದ ಅತಿ ಹೆಚ್ಚು ದಂಡಿತರಾಗಿದ್ದ ಸ್ಟಾರ್ಕ್ ನಿಟ್ಟುಸಿರುಬಿಟ್ಟರು. 

ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ (31, 16ಎ, 4x2, 2x6), ಶಿವಂ ದುಬೆ (28, 22ಎ) ಮತ್ತು ಹಾರ್ದಿಕ್ ಪಾಂಡ್ಯ (ಔಟಾಗದೇ 27, 17ಎ) ಉತ್ತಮ ಕಾಣಿಕೆ ನೀಡಿದರು.

ಕಾಡಿದ ಹೆಡ್: ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡದ ಗೆಲುವಿನ ಆಸೆಯನ್ನು ಇನಿಂಗ್ಸ್‌ನಲ್ಲಿ ಬಹಳಷ್ಟು ಹೊತ್ತು ಜೀವಂತವಾಗಿಟ್ಟವರು  ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್.

43 ಎಸೆತಗಳಲ್ಲಿ 76 ರನ್‌ ಗಳಿಸಿದರು. ಮಿಚೆಲ್ ಮಾರ್ಷ ಜೊತೆಗೆ ಎರಡನೇ ವಿಕೆಟ್‌ಗೆ 81 ರನ್‌ ಸೇರಿಸಿದರು. ಆದರೆ, 17ನೇ ಓವರ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಎಸೆತವನ್ನು ಆಡುವ ಭರದಲ್ಲಿ ರೋಹಿತ್‌ಗೆ ಕ್ಯಾಚಿತ್ತ ಹೆಡ್ ಔಟಾದರು. 

ಒಂದು ಕಡೆ ಹೆಡ್ ಬೀಸಾಟವಾಡುತ್ತಿದ್ದರೂ ಇನ್ನೊಂದೆಡೆಯಿಂದ ವಿಕೆಟ್ ಕಬಳಿಸಿದ ಆರ್ಷದೀಪ್ ಸಿಂಗ್, ಕುಲದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ಅವರ ಆಟಕ್ಕೆ ಜಯ ಒಲಿಯಿತು.

ಭಾರತ 5 ವಿಕೆಟ್‌ಗೆ 204 (20 ಓವರ್‌ಗಳಲ್ಲಿ)

ರೋಹಿತ್ ಬಿ ಸ್ಟಾರ್ಕ್ 92 (41ಎ, 4X7, 6X8)

ಕೊಹ್ಲಿ ಸಿ ಡೇವಿಡ್‌ ಬಿ ಜೋಶ್ ಹ್ಯಾಜಲ್‌ವುಡ್ 0 (5ಎ)

‍ಪಂತ್ ಸಿ ಹ್ಯಾಜಲ್‌ವುಡ್ ಬಿ ಸ್ಟೊಯಿನಿಸ್ 15 (14ಎ, 4X1, 6X1)

ಸೂರ್ಯಕುಮಾರ್ ಸಿ ವೇಡ್‌ ಬಿ ಸ್ಟಾರ್ಕ್ 31 (16ಎ, 4X3, 6X2)

ಶಿವಂ ದುಬೆ ಸಿ ವಾರ್ನರ್‌ ಬಿ ಸ್ಟೊಯಿನಿಸ್ 28 (22ಎ, 4X2, 6X1)

ಹಾರ್ದಿಕ್ ಔಟಾಗದೇ 27 (17ಎ, 4X1, 6X2)

ರವೀಂದ್ರ ಔಟಾಗದೇ 9 (5ಎ, 6X1)

ಇತರೆ 3 (ಎಲ್‌ಬಿ1, ವೈಡ್‌2)

ವಿಕೆಟ್ ಪತನ: 1-6 (ವಿರಾಟ್ ಕೊಹ್ಲಿ, 1.4), 2-93 (ರಿಷಭ್ ಪಂತ್, 7.6), 3-127 (ರೋಹಿತ್ ಶರ್ಮಾ, 11.2), 4-159 (ಸೂರ್ಯಕುಮಾರ್ ಯಾದವ್, 14.3), 5-194 (ಶಿವಂ ದುಬೆ, 18.4)

ಬೌಲಿಂಗ್: ಮಿಚೆಲ್ ಸ್ಟಾರ್ಕ್ 4–0–45–2, ಜೋಶ್ ಹ್ಯಾಜಲ್‌ವುಡ್ 4–0–14–1, ಪ್ಯಾಟ್ ಕಮಿನ್ಸ್ 4–0–48–0, ಆ್ಯಡಂ ಜಂಪಾ 4–0–41–0, ಮಾರ್ಕಸ್‌ ಸ್ಟೊಯಿನಿಸ್ 4–0–56–2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.