ಗಯಾನ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂದವನ್ನು ಬಗ್ಗುಬಡಿದ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತ ಎರಡನೇ ಭಾರಿಗೆ ಫೈನಲ್ ಪ್ರವೇಶ ಮಾಡಿತು.
ಮತ್ತೊಂದೆಡೆ 2022ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧವೇ ಎದುರಾದ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿತು
ಭಾರತದ ನೀಡಿದ್ದ 172 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ 16.4 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 103 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಆರಂಭದ ನಾಲ್ಕು ಓವರ್‌ಗಳಲ್ಲಿ ಉತ್ತಮ ಪ್ರತಿರೋಧ ತೋರಿದರೂ ಇಂಗ್ಲೆಂಡ್ ಕಡೆಗಿನ ಪಂದ್ಯ ನಾಟಕೀಯ ಕುಸಿತ ಕಂಡಿತು.
ಇಂಗ್ಲೆಂಡ್ ಪರ ಬ್ರೂಕ್ 25, ಜೋಸ್ ಬಟ್ಲರ್ 25 ಹಾಗೂ ಜೋಪ್ರಾ ಆರ್ಚರ್ 21 ರನ್ ಗಳಿಸಿದ್ದೇ ಹೆಚ್ಚು. ಎಡಗೈ ಸ್ಪಿನ್ ಜೋಡಿ ಅಕ್ಷರ್ ಪಟೇಲ್ (23ಕ್ಕೆ3) ಮತ್ತು ಕುಲದೀಪ್ ಯಾದವ್ (19ಕ್ಕೆ3) ಮೋಡಿಯ ಮುಂದೆ ಇಂಗ್ಲೆಂಡ್ ತಂಡವು ಕುಸಿಯಿತು. ನಾಯಕ ಜೋಸ್ ಬಟ್ಲರ್ ಸಹಿತ ಪ್ರಮುಖ ಬ್ಯಾಟರ್‌ಗಳು ಮತ್ತು ಆಲ್‌ರೌಂಡರ್‌ಗಳು ವಿಫಲರಾದರು. ಇಂಗ್ಲೆಂಡ್ 16.4 ಓವರ್‌ಗಳಲ್ಲಿ 103 ರನ್ ಗಳಿಸಿತು. ಭಾರತ ತಂಡವು ಈ ಟೂರ್ನಿಯಲ್ಲಿ ಅಜೇಯವಾಗಿ ಉಳಿದು ಅಂತಿಮ ಪಂದ್ಯಕ್ಕೆ ಪ್ರವೇಶಿಸಿತು.
2007ರಲ್ಲಿ ಮೊದಲ ಬಾರಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಜಯಿಸಿತ್ತು. ಈಗ ಮತ್ತೆ ಚಾಂಪಿಯನ್ ಆಗುವ ಅವಕಾಶ ಲಭಿಸಿದೆ. ಶನಿವಾರ ನಡೆಯುವ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ರೋಹಿತ್ ಪಡೆ ಎದುರಿಸಲಿದೆ.
ರೋಹಿತ್ ಅರ್ಧಶತಕ: ನಾಯಕ ರೋಹಿತ್ ಶರ್ಮಾ (57; 39ಎ, 4x6, 6x2) ಮತ್ತು ಸೂರ್ಯಕುಮಾರ್ ಯಾದವ್ (47; 36ಎ, 4x4, 6x2) ಅವರ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ 7 ವಿಕೆಟ್‌ಗೆ 171 ರನ್ ಗಳಿಸಿತು.
ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಆರಂಭದಲ್ಲಿ ಮಳೆಯದ್ದೇ ಆಟ. ರಾತ್ರಿ 8ಕ್ಕೆ (ಭಾರತೀಯ ಕಾಲಮಾನ) ಆರಂಭವಾಗಬೇಕಿದ್ದ ಪಂದ್ಯವು 75 ನಿಮಿಷ ವಿಳಂಬವಾಗಿ ಆರಂಭವಾಯಿತು. ಟಾಸ್ ಗೆದ್ದ ‘ಹಾಲಿ ಚಾಂಪಿಯನ್’ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 8 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 65 ರನ್ ಗಳಿಸಿದ್ದಾಗ ಮತ್ತೆ ಮಳೆ ಸುರಿಯಿತು. ಆಟವನ್ನು ಸ್ಥಗಿತಗೊಳಿಸಲಾಯಿತು. ಅರ್ಧ ಗಂಟೆ ಬಳಿಕ ಮತ್ತೆ ಆಟ ಮುಂದುವರಿಯಿತು.
ಈ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ (9 ರನ್) ಅವರ ವೈಫಲ್ಯ ಮುಂದುವರಿಯಿತು. ರೋಹಿತ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಕೊಹ್ಲಿ ಒಂದು ಸಿಕ್ಸರ್ ಹೊಡೆದು ಭರವಸೆ ಮೂಡಿಸಿದ್ದರು. ಆದರೆ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ರೀಸ್ ಟಾಪ್ಲಿ ಹಾಕಿದ ಮಿಂಚಿದ ವೇಗದ ನೇರ ಎಸೆತಕ್ಕೆ ಕೊಹ್ಲಿ ಕ್ಲೀನ್‌ಬೌಲ್ಡ್ ಆದರು.
ರಿಷಭ್ ಪಂತ್ (4 ರನ್) ಕೇವಲ 6 ಎಸೆತಗಳನ್ನು ಎದುರಿಸಿ ಔಟಾದರು. ಸ್ಯಾಮ್ ಕರನ್ ಎಸೆತದಲ್ಲಿ ರಿಷಭ್ ದೊಡ್ಡ ಹೊಡೆತಕ್ಕೆ ಯತ್ನಿಸಿದರು. ಜಾನಿ ಬೆಸ್ಟೊ ಕ್ಯಾಚ್ ಪಡೆದು ಸಂಭ್ರಮಿಸಿದರು.
ಆದರೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಚೆಂದದ ಬ್ಯಾಟಿಂಗ್ ಗಮನ ಸೆಳೆಯಿತು. ಟೂರ್ನಿಯಲ್ಲಿ ಮೂರನೇ ಬಾರಿ ಅರ್ಧಶತಕ ದಾಖಲಿಸಿದರು. ರೋಹಿತ್ ಜೊತೆಗೂಡಿದ ಸೂರ್ಯಕುಮಾರ್ ಆತ್ಮವಿಶ್ವಾಸದಿಂದ ಆಟವಾಡಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 73 (50ಎ) ರನ್ ಸೇರಿಸಿದರು.
ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ (23; 13ಎ) ಮತ್ತು ರವೀಂದ್ರ ಜಡೇಜ (ಔಟಾಗದೇ 17; 9ಎ) ಉಪಯುಕ್ತ ಕಾಣಿಕೆ ನೀಡಿ ತಂಡದ ಮೊತ್ತ ಹೆಚ್ಚಿಸಿದರು. ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 171 ರನ್ ಕಲೆ ಹಾಕಿತು.
ಇಂಗ್ಲೆಂಡ್‌ನ ಕ್ರಿಸ್ ಜೋರ್ಡನ್ ಮೂರು ವಿಕೆಟ್ ಪಡೆದರು. ರೀಸ್ ಟಾಪ್ಲಿ, ಜೋಫ್ರಾ ಆರ್ಚರ್, ಸ್ಯಾಮ್ ಕರನ್, ಆದಿಲ್ ರಶೀದ್ ತಲಾ ಒಂದು ವಿಕೆಟ್ ಪಡೆದರು.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ ಒಂಬತ್ತು ವಿಕೆಟ್ ಅಂತರದ ಗೆಲುವು ಸಾಧಿಸಿತ್ತು. ಐಸಿಸಿ ವಿಶ್ವಕಪ್‌ನಲ್ಲಿ ಇದೇ ಮೊದಲ ಮೊದಲ ದಕ್ಷಿಣ ಆಫ್ರಿಕಾ ಫೈನಲ್‌ಗೇರಿದ ಸಾಧನೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.