ADVERTISEMENT

T20 WC | ಚುಟುಕು ಕ್ರಿಕೆಟ್‌ನಲ್ಲಿ ಭಾರತ vs ಪಾಕಿಸ್ತಾನ 5 ರೋಚಕ ಪಂದ್ಯಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜೂನ್ 2024, 3:03 IST
Last Updated 8 ಜೂನ್ 2024, 3:03 IST
<div class="paragraphs"><p>ಪಿಟಿಐ ಸಂಗ್ರಹ ಚಿತ್ರ</p></div>

ಪಿಟಿಐ ಸಂಗ್ರಹ ಚಿತ್ರ

   

ನ್ಯೂಯಾರ್ಕ್: ಕ್ರಿಕೆಟ್ ಲೋಕದಲ್ಲಿ ಅತಿ ಹೆಚ್ಚು ರೋಚಕತೆಗೆ ಸಾಕ್ಷಿಯಾಗುತ್ತಿರುವ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಮಗದೊಂದು ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್ ‌ಟೂರ್ನಿಯಲ್ಲಿ ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗವು ಬಾಬರ್ ಆಜಂ ಪಡೆಯ ಸವಾಲನ್ನು ಎದುರಿಸಲಿದೆ. ಐರ್ಲೆಂಡ್ ವಿರುದ್ಧ ಭಾರತ ಶುಭಾರಂಭ ಮಾಡಿದ್ದರೆ ಅತಿಥೇಯ ಅಮೆರಿಕ ವಿರುದ್ಧ ಪಾಕಿಸ್ತಾನ ಸೋಲಿನ ಆಘಾತಕ್ಕೆ ಒಳಗಾಗಿತ್ತು. ಬ್ಯಾಟರ್‌ಗಳಿಗೆ ಕಷ್ಟಕರ ಎನಿಸಿರುವ ಹೊಸ ಪಿಚ್‌ನ ಸವಾಲನ್ನು ಯಾವ ತಂಡ ಮೇಲುಗೈ ಸಾಧಿಸಲಿದೆ ಎಂದು ಕಾದು ನೋಡಬೇಕಿದೆ.

ADVERTISEMENT

ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಮುಖಾಮುಖಿ...

ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಅಭಿಮಾನಿಗಳಲ್ಲಿ ಈಗಾಗಲೇ ರೋಚಕತೆ ಮನೆ ಮಾಡಿದೆ.

ಭಾರತ vs ಪಾಕಿಸ್ತಾನ ನಡುವಣ 5 ರೋಚಕ ಪಂದ್ಯಗಳು:

1. ಚೊಚ್ಚಲ ವಿಶ್ವಕಪ್‌ನಲ್ಲಿ ಭಾರತಕ್ಕೆ 'ಬಾಲ್ ಔಟ್' ಗೆಲುವು...

2007ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನ ಮೊದಲ ಪಂದ್ಯವೇ 'ಟೈ' ಕಂಡಿತ್ತು. ಬಳಿಕ 'ಬೌಲ್‌ ಔಟ್‌'ನಲ್ಲಿ ಭಾರತ ಗೆಲುವು ದಾಖಲಿಸಿತ್ತು. ವೀರೇಂದ್ರ ಸೆಹ್ವಾಗ್, ರಾಬಿನ್ ಉತ್ತಪ್ಪ ಹಾಗೂ ಹರಭಜನ್ ಸಿಂಗ್ ವಿಕೆಟ್‌ಗೆ ನಿಖರ ದಾಳಿ ಮಾಡುವ ಮೂಲಕ ಭಾರತಕ್ಕೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾಗಿದ್ದರು. ಬಳಿಕ ಐಸಿಸಿ ನಿಯಮ ಬದಲಿಸಿದ್ದು, ಬಾಲ್ ಔಟ್ ಬದಲಿಗೆ 'ಸೂಪರ್ ಓವರ್' ಆಳವಡಿಸಲಾಗಿದೆ.

2. ಭಾರತಕ್ಕೆ ಚೊಚ್ಚಲ ವಿಶ್ವಕಪ್...

2007ರ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಮತ್ತದೇ ಪಾಕಿಸ್ತಾನವನ್ನು ಮಣಿಸಿದ್ದ ಮಹೇಂದ್ರ ಸಿಂಗ್ ಧೋನಿ ಬಳಗ ಚೊಚ್ಚಲ ಕಿರೀಟ ಎತ್ತಿ ಹಿಡಿದಿತ್ತು. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ 158 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ವಿರುದ್ಧ ಭಾರತ ಐದು ರನ್‌ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಅದಾದ ಬಳಿಕ ಭಾರತ ಚುಟುಕು ಕ್ರಿಕೆಟ್‌ನಲ್ಲಿ ವಿಶ್ವಕಪ್ ಗೆದ್ದಿಲ್ಲ.

3. ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ಮೊದಲ ಗೆಲುವು

2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ 10 ವಿಕೆಟ್ ಅಂತರದ ಜಯ ಸಾಧಿಸಿತ್ತು. ಇದು ಯಾವುದೇ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗಳಿಸಿದ ಮೊದಲ ಗೆಲುವುವಾಗಿದೆ. ಬೌಲಿಂಗ್‌ನಲ್ಲಿ ಶಾಹೀನ್ ಅಫ್ರಿದಿ ಮಿಂಚಿನ ದಾಳಿ ಸಂಘಟಿಸಿದ್ದರೆ ಬ್ಯಾಟಿಂಗ್‌ನಲ್ಲಿ ನಾಯಕ ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ ಬಿರುಸಿನ ಅರ್ಧಶತಕ ಗಳಿಸುವ ಮೂಲಕ 10 ವಿಕೆಟ್ ಜಯ ಗಳಿಸುವಲ್ಲಿ ನೆರವಾಗಿದ್ದರು.

4. 2022 ಏಷ್ಯಾ ಕಪ್‌ನಲ್ಲಿ ಪಾಕ್‌ಗೆ ಮೇಲುಗೈ...

ದುಬೈಯಲ್ಲಿ ಆಯೋಜನೆಯಾಗಿದ್ದ 2022ರ ಏಷ್ಯಾ ಕಪ್ 'ಸೂಪರ್ ಫೋರ್' ಪಂದ್ಯದಲ್ಲೂ ಭಾರತ ವಿರುದ್ಧ ಪಾಕಿಸ್ತಾನ ಜಯಭೇರಿ ಮೊಳಗಿಸಿತ್ತು. ವಿರಾಟ್ ಕೊಹ್ಲಿ ಅರ್ಧಶತಕದ ಬಲದಿಂದ ಭಾರತ ಏಳು ವಿಕೆಟ್ ನಷ್ಟಕ್ಕೆ 181 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ, 19.5 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು.

5. ಮೆಲ್ಬರ್ನ್‌ನಲ್ಲಿ ಕೊಹ್ಲಿ ಮೋಡಿ...

2022ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಮೆಲ್ಬರ್ನ್‌ನಲ್ಲಿ ರೋಚಕ ಮುಖಾಮುಖಿ ನಡೆದಿತ್ತು. ಸರಿ ಸುಮಾರು 90,000 ಕಿಕ್ಕಿರಿದು ತುಂಬಿದ ಪ್ರೇಕ್ಷಕರ ಮುಂದೆ ವಿರಾಟ್ ಕೊಹ್ಲಿ ಅಕ್ಷರಶಃ ಮೋಡಿ ಮಾಡಿದರು. 160ರ ಗುರಿ ಬೆನ್ನಟ್ಟಿದ್ದ ಭಾರತ ಒಂದು ಹಂತದಲ್ಲಿ 31 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಕೊನೆಯ ಮೂರು ಓವರ್‌ನಲ್ಲಿ 48 ಹಾಗೂ ಅಂತಿಮ ಎರಡು ಓವರ್‌ನಲ್ಲಿ ಭಾರತದ ಗೆಲುವಿಗೆ 31 ರನ್‌ಗಳ ಅವಶ್ಯಕತೆಯಿತ್ತು. 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದ ವಿರಾಟ್ ಭಾರತದ ಗೆಲುವಿನ ರೂವಾರಿ ಎನಿಸಿದರು. ಹ್ಯಾರಿಸ್ ರವೂಫ್ 19ನೇ ಓವರ್‌ನಲ್ಲಿ ವಿರಾಟ್ ಎತ್ತಿದ ಸಿಕ್ಸರ್, ಐಸಿಸಿಯ ಅತ್ಯಂತ 'ಶ್ರೇಷ್ಠ ಕ್ಷಣ' ಎಂಬ ಶ್ರೇಯಸ್ಸಿಗೆ ಭಾಜನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.