ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಮಗದೊಮ್ಮೆ ಭಾರತ ಮತ್ತು ಪಾಕಿಸ್ತಾನ ನಡುವಣ ರೋಚಕ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. ಅಕ್ಟೋಬರ್ 24 ಭಾನುವಾರ ದುಬೈಯಲ್ಲಿ ನಡೆಯಲಿರುವ ಹೈವೋಲ್ಟೆಜ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗವು ಬಾಬರ್ ಆಜಂ ಪಡೆಯ ಸವಾಲನ್ನು ಎದುರಿಸಲಿದೆ.
ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಎಂದಿಗೂ ಸೋತಿಲ್ಲ. ಏಕದಿನ ವಿಶ್ವಕಪ್‌ನಲ್ಲಿ ಏಳು ಹಾಗೂ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಐದು ಜಯ ಸೇರಿದಂತೆ ಒಟ್ಟು 12 ಬಾರಿ ಗೆಲುವು ದಾಖಲಿಸಿದೆ.
ಈ ಪೈಕಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಪ್ತಾನಗಿರಿಯಲ್ಲಿ ಭಾರತ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿರುವ ಎಲ್ಲ ಐದು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಈಗ ಧೋನಿ ಮಾರ್ಗದರ್ಶನದಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಜೈತ್ರಯಾತ್ರೆ ಮುಂದುವರಿಸುವ ಜವಾಬ್ದಾರಿಯಿದೆ.
'ಬಾಲ್ ಔಟ್' ಗೆಲುವು
2007ರಲ್ಲಿ ನಡೆದ ಚೊಚ್ಚಲ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಫೈನಲ್ ಸೇರಿದಂತೆ ಎರಡು ಬಾರಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಗೆಲುವು ದಾಖಲಿಸಿತ್ತು. 'ಡಿ' ಗುಂಪಿನಲ್ಲಿ ಪಾಕಿಸ್ತಾನ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ರಾಬಿನ್ ಉತ್ತಪ್ಪ (50) ಅರ್ಧಶತಕದ ನೆರವಿನಿಂದ ಒಂಬತ್ತು ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನ ಮಿಸ್ಬಾ ಉಲ್ ಹಕ್ ಬಿರುಸಿನ ಅರ್ಧಶತಕದ (53) ಹೊರತಾಗಿಯೂ ಏಳು ವಿಕೆಟ್ ನಷ್ಟಕ್ಕೆ 141 ರನ್ ಗಳಿಸಲಷ್ಟೇ ಸಮರ್ಥವಾಯಿತು. ಇದರಿಂದಾಗಿ ಪಂದ್ಯ 'ಟೈ' ಆಗಿತ್ತು.
ಬಳಿಕ ಬಾಲ್ ಔಟ್‌ನಲ್ಲಿ ಭಾರತ ರೋಚಕ ಗೆಲುವು ದಾಖಲಿಸಿತು. ಭಾರತದ ಪರ ಬೌಲಿಂಗ್ ಮಾಡಿದ ವೀರೇಂದ್ರ ಸೆಹ್ವಾಗ್, ಹರಭಜನ್ ಸಿಂಗ್ ಹಾಗೂ ರಾಬಿನ್ ಉತ್ತಪ್ಪ ವಿಕೆಟ್ ಹಾರಿಸಿದರು. ಈ ಮೂಲಕ ಸ್ಮರಣೀಯ ಗೆಲುವು ದಾಖಲಿಸಿತು.
ಭಾರತಕ್ಕೆ ಚೊಚ್ಚಲ ವಿಶ್ವಕಪ್
ಫೈನಲ್‌ನಲ್ಲಿ ಮತ್ತದೇ ಪಾಕಿಸ್ತಾನವನ್ನು ಮಣಿಸಿದ ಮಹೇಂದ್ರ ಸಿಂಗ್ ಧೋನಿ ಬಳಗವು ಚೊಚ್ಚಲ ಟಿ20 ವಿಶ್ವಕಪ್ ಕಿರೀಟಕ್ಕೆ ಮುತ್ತಿಕ್ಕಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಗೌತಮ್ ಗಂಭೀರ್ ಸಮಯೋಚಿತ ಅರ್ಧಶತಕದ (75) ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 157 ರನ್ ಪೇರಿಸಿತು. ಗುರಿ ಬೆನ್ನತ್ತಿದ ಪಾಕಿಸ್ತಾನ 19.3 ಓವರ್‌ಗಳಲ್ಲಿ 152 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಮಿಸ್ಬಾ ಉಲ್ ಹಕ್ 43 ರನ್ ಗಳಿಸಿ ದಿಟ್ಟ ಹೋರಾಟ ತೋರಿದರು. ಭಾರತದ ಪರ ಇರ್ಫಾನ್ ಪಠಾಣ್ ಮೂರು ವಿಕೆಟ್ ಗಳಿಸಿದರು.
ಕೊನೆಯ ಓವರ್‌ನಲ್ಲಿ ಜೋಗಿಂದರ್ ಶರ್ಮಾ ದಾಳಿಯಲ್ಲಿ ಎಸ್. ಶ್ರೀಶಾಂತ್ ಕ್ಯಾಚ್ ಹಿಡಿಯುವುದರೊಂದಿಗೆ ಭಾರತೀಯ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಆ ರೋಚಕ ಕ್ಷಣ ಈಗಲೂ ಅಚ್ಚಳಿಯದೇ ಉಳಿದಿದೆ.
2012ರಲ್ಲಿ ಕೊಹ್ಲಿ ಅಬ್ಬರ
2012ರಲ್ಲಿ 'ಗ್ರೂಪ್ 2'ರ ಮುಖಾಮುಖಿಯಲ್ಲಿ ಭಾರತೀಯ ಬೌಲರ್‌ಗಳ ಸಾಂಘಿಕ ದಾಳಿಗೆ ಸಿಲುಕಿದ ಪಾಕಿಸ್ತಾನ 19.4 ಓವರ್‌ಗಳಲ್ಲಿ ಕೇವಲ 128 ರನ್ನಿಗೆ ಆಲೌಟ್ ಆಗಿತ್ತು. ಲಕ್ಷ್ಮೀಪತಿ ಬಾಲಾಜಿ ಮೂರು ಮತ್ತು ಆರ್. ಅಶ್ವಿನ್ ಹಾಗೂ ಯುವರಾಜ್ ಸಿಂಗ್ ಎರಡು ವಿಕೆಟ್ ಕಿತ್ತು ಮಿಂಚಿದರು. ಬಳಿಕ ಭಾರತ 17 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ವಿರಾಟ್ ಕೊಹ್ಲಿ 78 ರನ್ ಗಳಿಸಿ ಔಟಾಗದೆ ಉಳಿದರು.
2014ರಲ್ಲಿ 7 ವಿಕೆಟ್ ಜಯ
2012ಕ್ಕೆ ಸಮಾನವಾಗಿ 2014ರಲ್ಲೂ ಭಾರತದ ಸಾಂಘಿಕ ದಾಳಿಗೆ ನಲುಗಿದ ಪಾಕಿಸ್ತಾನ ಏಳು ವಿಕೆಟ್ ನಷ್ಟಕ್ಕೆ 130 ರನ್ ಗಳಿಸಲಷ್ಟೇ ಸಮರ್ಥವಾಯಿತು. ಬಳಿಕ ವಿರಾಟ್ ಕೊಹ್ಲಿ (36*) ಹಾಗೂ ಸುರೇಶ್ ರೈನಾ (35*) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಭಾರತ 18.3 ಓವರ್‌ಗಳಲ್ಲಿ ಗುರಿ ತಲುಪಿತು.
2016ರಲ್ಲಿ ಮಗದೊಮ್ಮೆ ಕೊಹ್ಲಿ ಮಿಂಚು
2016ರಲ್ಲೂ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಐದು ವಿಕೆಟ್ ನಷ್ಟಕ್ಕೆ 118 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಬಳಿಕ ವಿರಾಟ್ ಕೊಹ್ಲಿ ಅಜೇಯ ಅರ್ಧಶತಕದ (55*) ಬಲದೊಂದಿಗೆ ಟೀಮ್ ಇಂಡಿಯಾ 15.5 ಓವರ್‌ಗಳಲ್ಲೇ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಫಲಿತಾಂಶ ಇಂತಿದೆ:
2007 (ಸೆ.14): 'ಟೈ' ಪಂದ್ಯದಲ್ಲಿ ಬಾಲ್ ಔಟ್‌ನಲ್ಲಿ ಭಾರತಕ್ಕೆ ಗೆಲುವು, ಡರ್ಬನ್
2007 (ಸೆ.24): ಭಾರತಕ್ಕೆ 5 ರನ್ ಗೆಲುವು, ಜೋಹಾನ್ಸ್‌ಬರ್ಗ್
2012 (ಸೆ.30): ಭಾರತಕ್ಕೆ 8 ವಿಕೆಟ್ ಗೆಲುವು, ಕೊಲಂಬೊ
2014 (ಮಾ.21): ಭಾರತಕ್ಕೆ 7 ವಿಕೆಟ್ ಗೆಲುವು, ಡಾಕಾ
2016 (ಮಾ.19): ಭಾರತಕ್ಕೆ 6 ವಿಕೆಟ್ ಗೆಲುವು, ಕೋಲ್ಕತ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.