ADVERTISEMENT

ವಿಶ್ವಕಪ್ ಗೆಲುವಿನ ಪ್ರತಿಯೊಂದು ಕ್ಷಣದಲ್ಲೂ ಬದುಕಲು ಬಯಸುತ್ತೇನೆ: ರೋಹಿತ್ ಶರ್ಮಾ

ಪಿಟಿಐ
Published 2 ಜುಲೈ 2024, 6:51 IST
Last Updated 2 ಜುಲೈ 2024, 6:51 IST
<div class="paragraphs"><p>ರೋಹಿತ್ ಶರ್ಮಾ</p></div>

ರೋಹಿತ್ ಶರ್ಮಾ

   

(ಪಿಟಿಐ ಚಿತ್ರ)

ಬಾರ್ಬಡೋಸ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಎರಡನೇ ಸಲ ಕಿರೀಟ ಮುಡಿಗೇರಿಸಿಕೊಂಡಿತು.

ADVERTISEMENT

'ಈ ಗೆಲುವು ಅತ್ಯಂತ ವಿಶೇಷ' ಎಂದು ಬಣ್ಣಿಸಿರುವ ಟೀಮ್ ಇಂಡಿಯಾ ನಾಯಕ ರೋಹತ್ ಶರ್ಮಾ, 'ಗೆಲುವಿನ ಪ್ರತಿಯೊಂದು ಕ್ಷಣದಲ್ಲೂ ಬದುಕಲು ಬಯಸುತ್ತೇನೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಚಾಂಪಿಯನ್ ಆದ ಬಳಿಕ ಬ್ರಿಜ್‌ಟೌನ್‌ನ ಬೀಚ್‌ಗೆ ತೆರಳಿದ ರೋಹಿತ್ ಶರ್ಮಾ, ಟ್ರೋಫಿ ಜೊತೆ ಸ್ಮರಣೀಯ ಕ್ಷಣಗಳನ್ನು ಕ್ಲಿಕ್ಕಿಸಿದರು.

'ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಕನಸಿನಂತೆ ಭಾಸವಾಗುತ್ತಿದೆ. ವಿಶ್ವಕಪ್ ಗೆದ್ದರೂ ಸಹ ಗೆದ್ದಿಲ್ಲವೇ ಅಂತಾ ಅನಿಸುತ್ತಿದೆ' ಎಂದು ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ರೋಹಿತ್ ತಿಳಿಸಿದ್ದಾರೆ.

'ರಾತ್ರಿಯಿಡೀ ನಾವು ಸಹ ಆಟಗಾರರೊಂದಿಗೆ ಸಂಭ್ರಮಿಸಿದೆವು. ನನಗೆ ನಿದ್ರಿಸಲು ಸಾಧ್ಯವಾಗಿರಲಿಲ್ಲ. ಆದರೆ ಪರವಾಗಿಲ್ಲ. ತವರಿಗೆ ಹೋಗಿ ನಿದ್ರಿಸಲು ಬೇಕಾದಷ್ಟು ಸಮಯವಿದೆ' ಎಂದು ಹೇಳಿದ್ದಾರೆ.

'ಇದು ನಮಗೆ ಭಾವನಾತ್ಮಕ ಕ್ಷಣವಾಗಿದೆ. ನಾನು ಈ ಕ್ಷಣದಲ್ಲಿ ಬದುಕಲು ಬಯಸುತ್ತೇನೆ. ಪ್ರತಿಯೊಂದು ಕ್ಷಣದಲ್ಲೂ ಸಂಭ್ರಮಿಸಲು ಇಷ್ಟಪಡುತ್ತೇನೆ' ಎಂದು ತಿಳಿಸಿದ್ದಾರೆ.

'ದೀರ್ಘ ಸಮಯದಿಂದ ಟ್ರೋಫಿ ಗೆಲ್ಲುವ ಬಗ್ಗೆ ಕನಸು ಕಂಡಿದ್ದೆವು. ಒಂದು ತಂಡವಾಗಿ ಅದಕ್ಕಾಗಿ ಕಠಿಣ ಪರಿಶ್ರಮ ವಹಿಸಿದ್ದೆವು. ತುಂಬಾ ಕಷ್ಟಪಟ್ಟು ಕೊನೆಗೆ ಟ್ರೋಫಿ ಗೆದ್ದಾಗ ತುಂಬಾ ಸಂತೋಷವಾಗುತ್ತಿದೆ. ನಾವೀಗ ನಿರಾಳಗೊಂಡಿದ್ದೇವೆ' ಎಂದು ಹೇಳಿದ್ದಾರೆ.

'ಈ ಪಿಚ್ (ಬಾರ್ಬಡೋಸ್) ನಮಗೆ ಟ್ರೋಫಿ ನೀಡಿತು. ನನ್ನ ಜೀವನದಲ್ಲಿ ಈ ಪಿಚ್ ಅನ್ನು ಸದಾ ನೆನಪಿಸಿಕೊಳ್ಳುತ್ತೇನೆ. ಹಾಗಾಗಿ ಅದರ ಒಂದು ತುಣುಕನ್ನು ನನ್ನೊಂದಿಗೆ ಹೊಂದಿರಲು ಬಯಸಿದ್ದೆ' ಎಂದು ಪಿಚ್‌ಗೆ ಹೋಗಿ ಮಣ್ಣಿನ ಕಣವನ್ನು ತಿಂದಿರುವುದನ್ನು ರೋಹಿತ್ ವಿವರಿಸಿದರು.

'ಆ ಕ್ಷಣಗಳು ತುಂಬಾ ವಿಶೇಷವಾಗಿತ್ತು. ನಮ್ಮ ಕನಸುಗಳು ನನಸಾದ ಸ್ಥಳ. ಅಲ್ಲಿಂದ ಏನನ್ನಾದರೂ ಪಡೆಯಲು ಬಯಸಿದ್ದೆ' ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್ ಟ್ರೋಫಿ ಜತೆ ರೋಹಿತ್ ಶರ್ಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.