ADVERTISEMENT

ಏಷ್ಯಾಕಪ್ ಚಾಂಪಿಯನ್ ಲಂಕಾಗೆ ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಸೋಲುಣಿಸಿದ ನಮಿಬಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಅಕ್ಟೋಬರ್ 2022, 14:42 IST
Last Updated 16 ಅಕ್ಟೋಬರ್ 2022, 14:42 IST
ನಮಿಬಿಯಾ ಆಟಗಾರರ ಸಂಭ್ರಮ (ಚಿತ್ರಕೃಪೆ: @ICC)
ನಮಿಬಿಯಾ ಆಟಗಾರರ ಸಂಭ್ರಮ (ಚಿತ್ರಕೃಪೆ: @ICC)   

ಮೆಲ್ಬರ್ನ್:ಏಷ್ಯಾ ಕಪ್ ವಿಜೇತ ಶ್ರೀಲಂಕಾ ತಂಡಕ್ಕೆ ನಮಿಬಿಯಾ ತಂಡವು ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಆಘಾತ ನೀಡಿತು.

ಭಾನುವಾರ ಸೈಮಂಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಾನ್ ಫ್ರೈಲಿಂಕ್ (44 ಹಾಗೂ 26ಕ್ಕೆ2) ಆಲ್‌ರೌಂಡ್ ಆಟದ ಬಲದಿಂದ ನಮಿಬಿಯಾ 55 ರನ್‌ಗಳಿಂದ ಗೆದ್ದಿತು.

ಟಾಸ್ ಗೆದ್ದ ಲಂಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇತ್ತೀಚೆಗಷ್ಟೇ ಏಷ್ಯಾ ಕಪ್‌ ಟೂರ್ನಿಯಲ್ಲಿ ಮಿಂಚಿದ್ದ ಲಂಕಾ ಬೌಲರ್‌ಗಳಿಗೆ ಕ್ರಿಕೆಟ್‌ ಲೋಕದಲ್ಲಿ ಅಂಬೆಗಾಲಿಡುತ್ತಿರುವ ನಮಿಬಿಯಾವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಾಗಲಿಲ್ಲ.

ADVERTISEMENT

ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಉತ್ತಮ ಆಟದಿಂದ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 163 ರನ್ ಗಳಿಸಿತು. 15 ಓವರ್‌ಗಳಲ್ಲಿ 93 ರನ್ ಗಳಿಸಿ ಆರು ವಿಕೆಟ್‌ ಕಳೆದುಕೊಂಡಿದ್ದ ತಂಡವು ಪುಟಿದೆದ್ದಿತು. ಕೊನೆಯ ಐದು ಓವರ್‌ಗಳಲ್ಲಿ 69 ರನ್‌ಗಳು ಹರಿದುಬರಲು ಫ್ರೈಲಿಂಕ್ ಹಾಗೂ ಸ್ಮಿತ್ ಅವರ ಬ್ಯಾಟಿಂಗ್ ಕಾರಣವಾಯಿತು.

ಈ ಹೋರಾಟದ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ಬಳಗದ ಬ್ಯಾಟರ್‌ಗಳಿಗೆ ನಮಿಬಿಯಾ ಬೌಲಿಂಗ್ ಪಡೆ ತಡೆಯೊಡ್ಡಿತು. ಹೆಚ್ಚು ಡಾಟ್‌ಬಾಲ್‌ಗಳನ್ನೂ ಪ್ರಯೋಗಿಸಿದ ಬೌಲರ್‌ಗಳು ವಿಕೆಟ್‌ ಕೂಡ ಗಳಿಸಿದರು. ಉತ್ತಮವಾಗಿ ಫೀಲ್ಡಿಂಗ್ ಕೂಡ ಮಾಡಿದರು.

ಇದರಿಂದಾಗಿ ಲಂಕಾ ತಂಡವು 19 ಓವರ್‌ಗಳಲ್ಲಿ 108 ರನ್ ಗಳಿಸಿ ಆಲೌಟ್ ಆಯಿತು. 2014ರ ವಿಶ್ವಕಪ್ ವಿಜೇತ ಶ್ರೀಲಂಕಾ ತಂಡವು ಆರಂಭದಲ್ಲಿಯೇ ಸೋಲಿನ ಕಹಿ ಅನುಭವಿಸಿತು.

ಹೋದ ಸಲದ ಟೂರ್ನಿಯಲ್ಲಿಯೂನಮಿಬಿಯಾ ಉತ್ತಮವಾಗಿ ಆಡಿ ಗಮನ ಸೆಳೆದಿತ್ತು.

ಇನ್ನೊಂದು ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವು ಯುನೈಟೆಡ್ ಅರಬ್ ಎಮಿರೇಟ್ಸ್‌ ವಿರುದ್ಧ 3 ವಿಕೆಟ್‌ಗಳಿಂದ ಜಯಿಸಿತು.

ಲಂಕಾಗೆ ಮರ್ಮಾಘಾತ
ಕಳೆದ ತಿಂಗಳಷ್ಟೇ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಶ್ರೀಲಂಕಾಗೆದ್ದು ಬೀಗಿತ್ತು. ಆ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಂತಹ ಬಲಿಷ್ಠ ತಂಡಗಳು ಆಡಿದ್ದವು. ಹೀಗಾಗಿ ಅನನುಭವಿ ನಮಿಬಿಯಾ ತಂಡವನ್ನು ಸುಲಭವಾಗಿ ಹಣಿಯುವ ಲೆಕ್ಕಾಚಾರದಲ್ಲಿಯೇ ಲಂಕಾ ಕಣಕ್ಕಿಳಿದಿತ್ತು.

ಆದರೆ, ಅಮೋಘ ಪ್ರದರ್ಶನ ತೋರಿದ ನಮಿಬಿಯಾ ತಂಡ, ಏಷ್ಯಾಕಪ್‌ ಚಾಂಪಿಯನ್ನರಿಗೆ ಮರ್ಮಾಘಾತ ನೀಡಿತು.

ಅಂದಹಾಗೆ ಶ್ರೀಲಂಕಾ ತಂಡ ಐಸಿಸಿ ಟಿ20 ಕ್ರಿಕೆಟ್‌ ರ‍್ಯಾಂಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿದೆ. ನಮಿಬಿಯಾ 14ನೇ ಸ್ಥಾನದಲ್ಲಿದೆ ಎಂಬುದು ವಿಶೇಷ.

ನಮಿಬಿಯಾ ಪ್ರದರ್ಶನದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಪ್ರಶಂಸೆ ವ್ಯಕ್ತವಾಗಿದೆ.

ನಮಿಬಿಯಾ vs ಶ್ರೀಲಂಕಾ ಪಂದ್ಯದಸಂಕ್ಷಿಪ್ತ ಸ್ಕೋರು
ನಮಿಬಿಯಾ:
20 ಓವರ್‌ಗಳಲ್ಲಿ 7ಕ್ಕೆ163 (ಲಾಟಿ ಈಟನ್ 20, ಸ್ಟಿಫನ್ ಬಾರ್ಡ್ 26, ಗೆರಾರ್ಡ್ ಎರಸ್ಮಸ್ 20, ಜಾನ್ ಫ್ರೈಲಿಂಕ್ 44, ಜೆ.ಜೆ. ಸ್ಮಿತ್ ಔಟಾಗದೆ 31, ಪ್ರಮೋದ್ ಮಧುಶಾನ್ 37ಕ್ಕೆ2)

ಶ್ರೀಲಂಕಾ: 19 ಓವರ್‌ಗಳಲ್ಲಿ 108 (ಧನಂಜಯ ಡಿಸಿಲ್ವಾ 12, ಭಾನುಕಾ ರಾಜಪಕ್ಸ 20, ದಸುನ್ ಶನಕ 29, ಡೇವಿಡ್ ವೀಸ್ 16ಕ್ಕೆ2, ಬೆಮಾರ್ಡ್ ಶೋಲ್ಜ್ 18ಕ್ಕೆ2, ಬೆನ್ ಶಿಕೊಂಗೊ 22ಕ್ಕೆ2, ಜಾನ್ ಫ್ರೈಲಿಂಕ್ 26ಕ್ಕೆ2)
ಫಲಿತಾಂಶ: ನಮಿಬಿಯಾ ತಂಡಕ್ಕೆ 55 ರನ್‌ಗಳ ಜಯ. ಪಂದ್ಯಶ್ರೇಷ್ಠ: ಜಾನ್ ಫ್ರೈಲಿಂಕ್.

ಯುಎಇ vs ನೆದರ್ಲೆಂಡ್ಸ್ ಪಂದ್ಯದಸಂಕ್ಷಿಪ್ತ ಸ್ಕೋರು
ಯುಎಇ: 20 ಓವರ್‌ಗಳಲ್ಲಿ 8ಕ್ಕೆ111 (ಮೊಹಮ್ಮದ್ ವಾಸೀಂ 41, ಫ್ರೆಡ್ ಕ್ಲಾಸೆನ್ 13ಕ್ಕೆ2, ಬೆಸ್ ಡಿ ಲೀಡ್ 19ಕ್ಕೆ3)

ನೆದರ್ಲೆಂಡ್ಸ್: 19.5 ಓವರ್‌ಗಳಲ್ಲಿ 7ಕ್ಕೆ112 (ಮ್ಯಾಕ್ಸ್ ಒಡೌಡ್ 23, ಸ್ಕಾಟ್ ಎಡ್ವರ್ಡ್ಸ್ 16, ಕಾಲಿನ್17, ಜುನೇದ್ ಸಿದ್ದೀಕಿ 24ಕ್ಕೆ3)
ಫಲಿತಾಂಶ: ನೆದರ್ಲೆಂಡ್ಸ್ ತಂಡಕ್ಕೆ 3 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಬೆಸ್ ಡಿ ಲೀಡ್

ಅಕ್ಟೋಬರ್‌ 17ರ ಪಂದ್ಯಗಳು (ಬಿ ಗುಂಪು)
* ವೆಸ್ಟ್ ಇಂಡೀಸ್–ಸ್ಕಾಟ್ಲೆಂಡ್ (ಬೆಳಿಗ್ಗೆ 9.30ರಿಂದ)
* ಜಿಂಬಾಬ್ವೆ–ಐರ್ಲೆಂಡ್ (ಮಧ್ಯಾಹ್ನ 1.30ರಿಂದ)
ಸ್ಥಳ: ಹೋಬರ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.