ADVERTISEMENT

T20 World Cup | WI vs NZ: ಕಿವೀಸ್‌ಗೆ ನಿರ್ಣಾಯಕ ಪಂದ್ಯ

ಜಂಟಿ ಆತಿಥೇಯ ವಿಂಡೀಸ್‌ ವಿರುದ್ಧ ಸೆಣಸಾಟ ಇಂದು

ಪಿಟಿಐ
Published 12 ಜೂನ್ 2024, 15:57 IST
Last Updated 12 ಜೂನ್ 2024, 15:57 IST
<div class="paragraphs"><p>ಕೇನ್ ವಿಲಿಯಮ್ಸನ್</p></div>

ಕೇನ್ ವಿಲಿಯಮ್ಸನ್

   

(ಪಿಟಿಐ ಚಿತ್ರ)

ತರೂಬಾ: ಲೀಗ್‌ ಹಂತದಲ್ಲೇ ಹೊರಬೀಳುವ ಆತಂಕ ಎದುರಿಸುತ್ತಿರುವ ನ್ಯೂಜಿಲೆಂಡ್ ತಂಡ ಗುರುವಾರ ನಡೆಯುವ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಜಂಟಿ ಆತಿಥೇಯ ವೆಸ್ಟ್‌ ಇಂಡೀಸ್ ತಂಡವನ್ನು ಎದುರಿಸಲಿದೆ. ಸೂಪರ್ ಎಂಟರ ಅವಕಾಶ ಜೀವಂತವಾಗಿರಿಸಿಕೊಳ್ಳಬೇಕಾದರೆ ಕಿವೀಸ್ ತಂಡ ಸುಧಾರಿತ ಪ್ರದರ್ಶನ ನೀಡುವ ಅನಿವಾರ್ಯತೆಯಲ್ಲಿದೆ.

ADVERTISEMENT

ಅಫ್ಗಾನಿಸ್ತಾನ ವಿರುದ್ಧ ಗಯಾನಾದ ಪ್ರಾವಿಡೆನ್ಸ್‌ ಕ್ರೀಡಾಂಗಣದಲ್ಲಿ ನಡೆದ ‘ಸಿ’ ಗುಂಪಿನ ಮೊದಲ ಪಂದ್ಯದಲ್ಲೇ ನ್ಯೂಜಿಲೆಂಡ್ 15.2 ಓವರುಗಳಲ್ಲಿ ಬರೇ 75 ರನ್‌ಗಳಿಗೆ ಪತನಗೊಂಡು 84 ರನ್‌ಗಳ ಮುಖಭಂಗ ಅನುಭವಿಸಿತ್ತು. ಇದರಿಂದ ಅದರ ರನ್‌ ರೇಟ್‌ –4.2ಕ್ಕೆ ಕುಸಿದಿದೆ. ಇದು ಐದು ತಂಡಗಳ ಗುಂಪಿನಲ್ಲೇ ಅತಿಕಡಿಮೆ ರನ್‌ ರೇಟ್‌.

ವಿಶ್ವಕಪ್‌ನಲ್ಲಿ ಸ್ಥಿರಪ್ರದರ್ಶನ ನೀಡುವ ತಂಡಗಳಲ್ಲೊಂದಾದ, ಕಳೆದ ಆರೂ ವಿಶ್ವಕಪ್‌ಗಳಲ್ಲಿ ಸೆಮಿಫೈನಲ್ ತಲುಪಿದ ಹಿರಿಮೆ ಹೊಂದಿದೆ. ಏಕದಿನ ವಿಶ್ವಕಪ್‌ನಲ್ಲಿ 2015, 2019 ಮತ್ತು 2023ರಲ್ಲಿ, ಟಿ20 ಮಾದರಿಯ ವಿಶ್ವಕಪ್‌ನಲ್ಲಿ 2016, 2021, 2022ರಲ್ಲಿ ನಾಲ್ಕರ ಘಟ್ಟ ತಲುಪಿತ್ತು. ಅಫ್ಗಾನಿಸ್ತಾನ, ವೆಸ್ಟ್‌ ಇಂಡೀಸ್‌ ಆಡಿದ ಎರಡರಲ್ಲೂ ಗೆದ್ದು ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ.

ಕೇನ್‌ ವಿಲಿಯಮ್ಸನ್‌ ಬಳಗದಲ್ಲಿ ಇಬ್ಬರು ಮಾತ್ರ ಎರಡಂಕಿ ಮೊತ್ತ ಗಳಿಸಿದ್ದರು. ಕಿವೀಸ್‌ ಬೌಲರ್‌ಗಳು ಸಹ, ರಹಮಾನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಜದ್ರಾನ್ ಅವರನ್ನು ನಿಯಂತ್ರಿಸಲು ವಿಫಲರಾಗಿದ್ದರು. ಅವರಿಬ್ಬರು ಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದರು.

ವೆಸ್ಟ್ ಇಂಡೀಸ್, ಇನ್ನೊಂದೆಡೆ ಈ ಪಂದ್ಯದಲ್ಲಿ ಗೆಲುವು ಸಾಧಿಸಿದಲ್ಲಿ ಆ ತಂಡ ಸೂಪರ್‌ ಎಂಟರಲ್ಲಿ ಸ್ಥಾನ ಗಟ್ಟಿಮಾಡಿಕೊಳ್ಳಲಿದೆ.

ಪಾಪುವಾ ನ್ಯೂಗಿನಿ ಎದುರು ಪರದಾಡಿ ಗೆದ್ದ ವಿಂಡೀಸರು, ಯುಗಾಂಡ ವಿರುದ್ಧ 134 ರನ್‌ಗಳ ಭಾರಿ ಜಯಗಳಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.