ಫ್ಲಾರಿಡಾ: ಬಾಬರ್ ಆಜಂ ನಾಯಕತ್ವದ ಪಾಕಿಸ್ತಾನ ತಂಡದವರ ಕಣ್ಣುಗಳು ಈಗ ಲಾಡೆರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್ ಕ್ರೀಡಾಂಗಣದ ಮೇಲೆ ನೆಟ್ಟಿವೆ.
ಶುಕ್ರವಾರ ಈ ಕ್ರೀಡಾಂಗಣದಲ್ಲಿ ನಡೆಯಲಿರುವ ಅಮೆರಿಕ ಮತ್ತು ಐರ್ಲೆಂಡ್ ನಡುವಣ ಪಂದ್ಯದ ಫಲಿತಾಂಶವು ಪಾಕ್ ತಂಡದ ’ಭವಿಷ್ಯ‘ ನಿರ್ಧರಿಸಲಿದೆ.
ಎ ಗುಂಪಿನ ಈ ಪಂದ್ಯದಲ್ಲಿ ಒಂದೊಮ್ಮೆ ಅಮೆರಿಕ ಜಯಿಸಿದರೆ ಪಾಕ್ ತಂಡವು ಸೂಪರ್ 8ರ ಹಂತಕ್ಕೆ ತಲುಪುವ ಕನಸು ಭಗ್ನವಾಗಲಿದೆ. ಒಂದೊಮ್ಮೆ ಸೋತರೆ ಬಾಬರ್ ಬಳಗಕ್ಕೆ ಒಂದು ಅವಕಾಶ ಉಳಿಯಲಿದೆ.
ಎ ಗುಂಪಿನಲ್ಲಿ ಅಮೆರಿಕ ತಂಡವು ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮೂರು ಪಂದ್ಯಗಳನ್ನು ಆಡಿರುವ ಅಮೆರಿಕವು ಭಾರತದ ಎದುರು ಸೋತಿದೆ. ಆದರೆ ಪಾಕಿಸ್ತಾನ ಮತ್ತು ಕೆನಡಾ ತಂಡದ ವಿರುದ್ಧ ಜಯಿಸಿದೆ. ಐರ್ಲೆಂಡ್ ತಂಡವು ಆಡಿರುವ ಎರಡೂ ಪಂದ್ಯಗಳಲ್ಲಿ ಸೋತಿದೆ. ಈ ಗುಂಪಿನಿಂದ ಭಾರತ ತಂಡವು ಈಗಾಗಲೇ ಸೂಪರ್ ಎಂಟರ ಘಟ್ಟ ತಲುಪಿದೆ.
ಪಾಕ್ ತಂಡವು ಈಗಾಗಲೇ ಮೂರು ಪಂದ್ಯಗಳನ್ನು ಆಡಿದೆ. ಕೇವಲ ಎರಡು ಅಂಕಗಳನ್ನು ಗಳಿಸಿದೆ. ಶುಕ್ರವಾರದ ಪಂದ್ಯದಲ್ಲಿ ಅಮೆರಿಕ ಸೋತರೆ, ಪಾಕ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ದೊಡ್ಡ ರನ್‌ರೇಟ್‌ನೊಂದಿಗೆ ಜಯಿಸಬೇಕಾಗುತ್ತದೆ. ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ಲಭಿಸುತ್ತವೆ. ಇದರಿಂದಾಗಿ ಐದು ಅಂಕಕ್ಕೇರುವ ಅಮೆರಿಕ ತಂಡಕ್ಕೆ ಲಾಭ. ಪಾಕ್ ಹೊರಬೀಳುವುದು ಖಚಿತ.
ಪಂದ್ಯ ಆರಂಭ: ರಾತ್ರಿ 8
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸಿ ಸ್ಪೋರ್ಟ್ಸ್, ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.