ADVERTISEMENT

T20 World Cup: ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 1 ರನ್‌ ರೋಚಕ ಜಯ

ಏಜೆನ್ಸೀಸ್
Published 15 ಜೂನ್ 2024, 3:29 IST
Last Updated 15 ಜೂನ್ 2024, 3:29 IST
<div class="paragraphs"><p>ದಕ್ಷಿಣ ಆಫ್ರಿಕಾ ತಂಡ</p></div>

ದಕ್ಷಿಣ ಆಫ್ರಿಕಾ ತಂಡ

   

X/ @cricbuzz

ಕಿಂಗ್ಸ್‌ಟೌನ್‌, ಸೇಂಟ್‌ ವಿನ್ಸೆಂಟ್‌: ಸತತ ಮೂರು ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ದಕ್ಷಿಣ ಆಫ್ರಿಕಾ, ಟಿ20 ವಿಶ್ವಕಪ್‌ ಲೀಗ್ ಪಂದ್ಯದಲ್ಲಿ ಶನಿವಾರ ನೇಪಾಳ ವಿರುದ್ಧ ಮುಖಭಂಗದಿಂದ ಕೂದಲೆಳೆಯಲ್ಲಿ ಪಾರಾಯಿತು. ರೋಚಕ ಅಂತ್ಯಕಂಡ ‘ಡಿ’ ಗುಂಪಿನ ತನ್ನ ಕೊನೆಯ ಪಂದ್ಯವನ್ನು ದಕ್ಷಿಣ ಆಫ್ರಿಕಾ ಒಂದು ರನ್‌ನಿಂದ ಗೆದ್ದುಕೊಂಡಿತು.

ADVERTISEMENT

116 ರನ್‌ಗಳ ಅಲ್ಪ ಮೊತ್ತದ ಗುರಿ ಎದುರಿಸಿದ ನೇಪಾಳಕ್ಕೆ ಕೊನೆಯ ಓವರಿನಲ್ಲಿ ಅಚ್ಚರಿಯ ಗೆಲುವಿಗೆ ಎಂಟು ರನ್‌ಗಳಷ್ಟೇ ಬೇಕಿದ್ದವು.  ಒಟ್ನೀಲ್‌ ಬಾಟ್‌ಮನ್‌ ಮಾಡಿದ್ದ ಅಂತಿಮ ಓವರಿನ ಕೊನೆಯ ಎಸೆತದಲ್ಲಿ ಎರಡು ರನ್‌ಗಳು ಅಗತ್ಯವಿರುವಾವ ಗುಲ್ಶನ್ ಝಾ ರನೌಟ್‌ ಆದರು. ಪಂದ್ಯವನ್ನು ಕನಿಷ್ಠ ಸೂಪರ್‌ ಓವರ್‌ಗೆ ಬೆಳೆಸಬೇಕೆಂಬ ಅವರ ಯತ್ನ ಫಲಿಸಲಿಲ್ಲ. ತಂಡ 7 ವಿಕೆಟ್‌ಗೆ 114 ರನ್‌ಗಳೊಡನೆ ಓವರ್‌ಗಳನ್ನು ಪೂರೈಸಿತು.

ದಕ್ಷಿಣ ಆಫ್ರಿಕಾ ಈ ಪಂದ್ಯಕ್ಕೆ ಮೊದಲೇ ಸೂಪರ್ ಎಂಟರ ಹಂತಕ್ಕೆ ಸ್ಥಾನ ಖಚಿತಪಡಿಸಿಕೊಂಡಿತ್ತು.

‘ನಾವು ಇಂದು ನಮ್ಮ ಉತ್ತಮ ಆಟದ ಸಮೀಪವೂ ಬಂದಿರಲಿಲ್ಲ’ ಎಂದು ನಿರಾಳರಾದ ದಕ್ಷಿಣ ಆಫ್ರಿಕಾ ನಾಯಕ ಏಡನ್ ಮರ್ಕರಂ ಪ್ರತಿಕ್ರಿಯಿಸಿದರು. ‘ನಮಗೆ ಸಾಕಷ್ಟು ಪಾಠಗಳಿದ್ದವು’ ಎಂದೂ ಹೇಳಿದರು.

ಲೆಗ್‌ಬ್ರೇಕ್ ಬೌಲರ್ ಕುಶಲ್ ಭುರ್ತೆಲ್ (19ಕ್ಕೆ4) ಮತ್ತು ಆಫ್‌ ಸ್ಪಿನ್ನರ್‌ ಪೇಂದ್ರ ಸಿಂಗ್ ಐರೀ (21ಕ್ಕೆ3) ಅವರು ಪರಿಣಾಮಕಾರಿ ದಾಳಿಯಿಂದ ಹರಿಣಗಳ ಓಟಕ್ಕೆ ಲಗಾಮುಹಾಕಿ 7 ವಿಕೆಟ್‌ಗೆ 115 ರನ್‌ಗಳಿಗೆ ಸೀಮಿತಗೊಳಿಸಿದರು. ಆಸಿಫ್‌ ಶೇಖ್ (42) ಮತ್ತು ಅನಿಲ್ ಸಹ್ (27) ಅವರು ಮೂರನೇ ವಿಕೆಟ್‌ಗೆ 50 ರನ್ ಸೇರಿಸಿ ನೇಪಾಳ ತಂಡವನ್ನು ಗೆಲುವಿನ ದಾರಿಯಲ್ಲಿ ಮುನ್ನಡೆಸಿದ್ದರು. 

ಎರಡನೇ ಸ್ಪೆಲ್‌ನಲ್ಲಿ ದಾಳಿಗಿಳಿದ ಎಡಗೈ ಸ್ಪಿನ್ನರ್ ತಬ್ರೇಜ್ ಸಂಶಿ (19ಕ್ಕೆ4) 18ನೇ ಓವರಿನಲ್ಲಿ ಆಸಿಫ್ ಮತ್ತು ಅನಿಲ್ ಅವರ ವಿಕೆಟ್‌ಗಳನ್ನು ಪಡೆದರು. 19ನೇ ಓವರಿನಲ್ಲಿ ಆನ್ರಿಚ್  ನಾಕಿಯಾ ಅವರು ಕುಶಲ್ ಮಲ್ಲ ಅವರನ್ನು ಬೌಲ್ಡ್ ಮಾಡಿದರು. ಹೀಗಾಗಿ ಪಂದ್ಯ ರೋಚಕ ಸ್ಥಿತಿಗೆ ತಲುಪಿತು. ಈ ವಿಶ್ವಕಪ್‌ನಲ್ಲಿ ತಂಡವನ್ನು ಸೇರಿಕೊಂಡ ಸಂದೀಪ್ ಲಾಮಿಚಾನೆ ಅವರ ಉಪಸ್ಥಿತಿ ತಂಡದ ಮನೋಬಲವನ್ನು ಹೆಚ್ಚಿಸಿದಂತೆ ಕಂಡಿತು.

ಮೊದಲು ಆಡಿದ ಹರಿಣಗಳ ಪ್ರಮುಖ ಬ್ಯಾಟರ್‌ಗಳು ನೇಪಾಳದ ಸ್ಪಿನ್ ದಾಳಿಯೆದುರು ಪರದಾಡಿದರು. ಹೆಂಡ್ರಿಕ್ಸ್‌, ಒಂದು ಸಿಕ್ಸರ್‌, ಐದು ಬೌಂಡರಿಗಳಿದ್ದ 43 ರನ್ (49 ಎ) ಹೊಡೆದು ‘ಟಾಪ್ ಸ್ಕೋರರ್‌’ ಎನಿಸಿದರು. ಕೊನೆಯಲ್ಲಿ ಟ್ರಿಸ್ಟನ್ ಸ್ಟಬ್ಸ್‌ ಲಗುಬಗನೇ 18 ಎಸೆತಗಳಲ್ಲಿ 27 ರನ್‌ ಹೊಡೆದರು. ಭುರ್ತೆಲ್‌ ಸತತ ಎರಡು ಎಸೆತಗಳಲ್ಲಿ

ದಕ್ಷಿಣ ಆಫ್ರಿಕಾ

20 ಓವರುಗಳಲ್ಲಿ 7 ವಿಕೆಟ್‌ಗೆ 115 (ರೀಝಾ ಹೆಂಡ್ರಿಕ್ಸ್‌ 43, ಟ್ರಿಸ್ಟನ್‌ ಸ್ಟಬ್ಸ್‌ ಔಟಾಗದೇ 27; ಕುಶಲ್ ಭುರ್ತೆಲ್ 19ಕ್ಕೆ4, ದೀಪೇಂದ್ರ ಸಿಂಗ್ ಐರಿ 21ಕ್ಕೆ3)

ನೇಪಾಳ: 20 ಓವರುಗಳಲ್ಲಿ 7 ವಿಕೆಟ್‌ಗೆ 114 (ಆಸಿಫ್‌ ಶೇಖ್‌ 42, ಅನಿಲ್‌ ಸಹ 27; ತಬ್ರೇಜ್ ಸಂಶಿ 19ಕ್ಕೆ4, ಏಡನ್ ಮರ್ಕರಂ 8ಕ್ಕೆ1, ಆ್ಯನ್ರಿಚ್ ನಾಕಿಯಾ 27ಕ್ಕೆ1).

ಪಂದ್ಯದ ಆಟಗಾರ: ತಬ್ರೇಜ್ ಸಂಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.