ADVERTISEMENT

ಭಾರತ– ಪಾಕಿಸ್ತಾನ ಮ್ಯಾಚ್: ಶಾಂತಚಿತ್ತರಾಗಿರಲು ಪಾಕ್‌ ಆಟಗಾರರಿಗೆ ಬಾಬರ್ ಸಲಹೆ

ಆಟದ ಮೂಲಭೂತ ಅಂಶಗಳ ಕಡೆಗಷ್ಟೇ ಗಮನಹರಿಸಬೇಕು ಎಂದು ಪಾಕಿಸ್ತಾನ ನಾಯಕ ಆಜಂ ಭಾನುವಾರ ಸಲಹೆ ನೀಡಿದ್ದಾರೆ.

ಪಿಟಿಐ
Published 2 ಜೂನ್ 2024, 13:29 IST
Last Updated 2 ಜೂನ್ 2024, 13:29 IST
ಬಾಬರ್ ಆಜಂ
ಎಎಫ್‌ಪಿ ಚಿತ್ರ
ಬಾಬರ್ ಆಜಂ ಎಎಫ್‌ಪಿ ಚಿತ್ರ   

ನ್ಯೂಯಾರ್ಕ್: ಭಾರತ– ಪಾಕಿಸ್ತಾನ ಪಂದ್ಯಗಳಿಗೆ ಇರುವ ಅತಿಯಾದ ಪ್ರಚಾರ, ನಿರೀಕ್ಷೆ ಮತ್ತು ಒತ್ತಡಗಳು ಆಟಗಾರರಲ್ಲಿ ನರ್ವಸ್‌ (ಅಧೀರತೆ) ಉಂಟುಮಾಡುತ್ತದೆ ಎಂದು ಬಾಬರ್‌ ಆಜಂ ಹೇಳಿದ್ದಾರೆ. ತಮ್ಮ ತಂಡದ ಆಟಗಾರರು ಶಾಂತಚಿತ್ತರಾಗಿದ್ದುಕೊಂಡು, ಆಟದ ಮೂಲಭೂತ ಅಂಶಗಳ ಕಡೆಗಷ್ಟೇ ಗಮನಹರಿಸಬೇಕು ಎಂದು ಪಾಕಿಸ್ತಾನ ನಾಯಕ ಆಜಂ ಭಾನುವಾರ ಸಲಹೆ ನೀಡಿದ್ದಾರೆ.

ಟಿ20 ವಿಶ್ವಕಪ್‌ನ ಏಳು ಮುಖಾಮುಖಿಗಳಲ್ಲಿ ಭಾರತ ಒಮ್ಮೆ ಮಾತ್ರ ನೆರೆಯ ದೇಶದ ತಂಡಕ್ಕೆ ಮಣಿದಿದೆ. 2021ರ ವಿಶ್ವಕಪ್‌ ಸೂಪರ್‌ 12 ಹಂತದ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳಿಂದ ವಿರಾಟ್‌ ಕೊಹ್ಲಿ ನೇತೃತ್ವದ ತಂಡವನ್ನು ಸೋಲಿಸಿತ್ತು.

‘ಭಾರತ– ಪಾಕಿಸ್ತಾನ ಪಂದ್ಯ ಬೇರಾವುದೇ ಪಂದ್ಯಗಳಿಗಿಂತ ಹೆಚ್ಚು ಚರ್ಚೆಗೆ ಒಳಗಾಗುತ್ತದೆ. ಈ ಹಣಾಹಣಿಗೆ ಹೆಚ್ಚಿನ ತೂಕವಿರುತ್ತದೆ. ಆಟಗಾರರಲ್ಲಿ ಅಷ್ಟೇ ಅಲ್ಲ, ಅಭಿಮಾನಿಗಳಲ್ಲೂ ಕುತೂಹಲ ಮನೆಮಾಡಿರುತ್ತದೆ’ ಎಂದು ಬಾಬರ್‌ ಪಿಸಿಬಿ ಪಾಡ್‌ಕಾಸ್ಟ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ನೀವು ಎಲ್ಲಿಗಾದರೂ ಹೋಗಿ, ಅಲ್ಲಿ ಭಾರತ– ಪಾಕಿಸ್ತಾನ ಪಂದ್ಯದ ಬಗ್ಗೆ ಜನ ಮಾತನಾಡುತ್ತಾರೆ. ಎಲ್ಲರೂ ಈ ಪಂದ್ಯಕ್ಕೆ ಕಾತರದಿಂದ ಕಾಯುತ್ತಾರೆ. ಎಲ್ಲರ ಗಮನ ನಿರ್ದಿಷ್ಟವಾಗಿ ಈ ಪಂದ್ಯದ ಮೇಲೆಯೇ ಇರುತ್ತದೆ. ಸಹಜವಾಗಿ ನಿರೀಕ್ಷೆ ಮತ್ತು ಪ್ರಚಾರ ಹೆಚ್ಚು ಇರುತ್ತದೆ. ಇದು ಆಟಗಾರರಲ್ಲಿ ಸ್ವಲ್ಪ ಅಧೀರತೆ ಉಂಟುಮಾಡುತ್ತದೆ’ ಎಂದರು ಬಾಬರ್‌.

‘2022ರಲ್ಲಿ ಭಾರತದ ಎದುರಿನ ಸೋಲು ನೋವು ಉಂಟುಮಾಡಿತ್ತು. ನಾವು ಚೆನ್ನಾಗಿ ಆಡಿದ್ದರೂ ಅವರು ನಮ್ಮಿಂದ ಪಂದ್ಯ ಕಿತ್ತುಕೊಂಡರು. ಆದರೆ ಅದಕ್ಕಿಂತ ಹೆಚ್ಚಿನ ನೋವು ತರಿಸಿದ್ದು ಜಿಂಬಾಬ್ವೆ ಎದುರಿನ ಸೋಲು. ನಾವು ಭಾರತ ಎದುರು ಹೋರಾಟ ನೀಡಿದಾಗ ಜನರು ಖುಷಿಪಟ್ಟು ನಮ್ಮಿಂದ ಹೆಚ್ಚಿನದನ್ನು ನಿರೀಕ್ಷಿಸಿದ್ದರು’ ಎಂದು ಬಾಬರ್‌ ನೆನಪಿಸಿಕೊಂಡರು.

ಪಾಕಿಸ್ತಾನ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ತೋರಿದೆ. 2009ರಲ್ಲಿ ಚಾಂಪಿಯನ್ ಆಗಿದ್ದ ತಂಡ, 2007 ಮತ್ತು 2022ರಲ್ಲಿ ರನ್ನರ್ ಅಪ್ ಆಗಿತ್ತು. ಒಟ್ಟು ಎಂಟು ಆವೃತ್ತಿಗಳಲ್ಲಿ ಆರು ಬಾರಿ ಸೆಮಿಫೈನಲ್ ತಲುಪಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಮಣಿದಿತ್ತು.

‘ಫೈನಲ್‌ನಲ್ಲಿ ಶಹೀನ್ ಗಾಯಗೊಂಡಿದ್ದು ನಮಗೆ ಹಿನ್ನಡೆ ತಂದಿತು. ಇಂಗ್ಲೆಂಡ್ ಆಗ ಒತ್ತಡದಲ್ಲಿತ್ತು. ನಾವು ಒಂದು ಓವರ್ ಸ್ಪಿನ್ನರ್‌ಗೆ ನೀಡಬೇಕಾಯಿತು. ಇದೇ ಪಂದ್ಯದ ಗತಿಯನ್ನು ಬದಲಾಯಿಸಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.