ADVERTISEMENT

T20 World Cup | ಪಂತ್‌ಗೆ ಭಾರತದ ಪೋಷಾಕು ಧರಿಸುವ ತವಕ

ಪಿಟಿಐ
Published 30 ಮೇ 2024, 9:52 IST
Last Updated 30 ಮೇ 2024, 9:52 IST
<div class="paragraphs"><p>ರಿಷಭ್ ಪಂತ್</p></div>

ರಿಷಭ್ ಪಂತ್

   

(ಚಿತ್ರ ಕೃಪೆ: X/@BCCI)

ನ್ಯೂಯಾರ್ಕ್:  ರಸ್ತೆ ಅಪಘಾತದಿಂದಾಗಿ ಸುಮಾರು 527 ದಿನ ಮೈದಾನದಿಂದ ಹೊರಗುಳಿದಿದ್ದ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಎಡಗೈ ಬ್ಯಾಟರ್ ರಿಷಭ್ ಪಂತ್ ಮತ್ತೆ ಪುನರಾಗಮನದ ಹೊಸ್ತಿಲಲ್ಲಿದ್ದಾರೆ. 

ADVERTISEMENT

ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಪಂತ್, ಜೂನ್ 5 ರಂದು ನಸ್ಸೌ ಕೌಂಟಿ ಮೈದಾನದಲ್ಲಿ ಐರ್ಲೆಂಡ್ ವಿರುದ್ಧ ನಡೆಯುವ ಮೊದಲ ಪಂದ್ಯಕ್ಕೆ ಭಾರತದ ಪೋಷಾಕು ಧರಿಸಿ ಆಟವಾಡಲು ಕಾತರದಿಂದ ಇದ್ದಾರೆ.  2022ರ ಮಾರ್ಚ್‌ 23ರಂದು ಸಂಭವಿಸಿದ ಕಾರು ಅಪಘಾತದಲ್ಲಿ ಪಂತ್ ತೀವ್ರವಾಗಿ ಗಾಯಗೊಂಡಿದ್ದರು.  ಗಾಯದಿಂದ ಸಂಪೂರ್ಣ ಚೇತರಿಸಿಕೊಂಡು ಚುಟುಕು ಕ್ರಿಕೆಟ್ ಮೂಲಕ ಪುನರಾಗಮನ ಮಾಡಿದ್ದಾರೆ. ಇತ್ತೀಚೆಗೆಷ್ಟೇ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದ ಅವರು, ನೀಲಿ ಪೋಷಾಕು ಧರಿಸಿ ಆಟವಾಡಿದ್ದರು. ಈಗ ‘ಇಂಡಿಯಾ ಬ್ಲೂ’ ಧರಿಸಲು ಹೆಚ್ಚು ಉತ್ಸುಕರಾಗಿದ್ದಾರೆ.

ಈ ಕುರಿತು ಬಿಸಿಸಿಐ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಪ್ರತಿಕ್ರಿಯಿಸಿರುವ ಪಂತ್, ‘ಭಾರತದ ಜೆರ್ಸಿ ಧರಿಸಿ ಆಡುವುದೇ ವಿಭಿನ್ನ ಅನುಭವ. ಈ ಕ್ಷಣವನ್ನು ತುಂಬಾ ಮಿಸ್ ಮಾಡಿಕೊಂಡಿದ್ದೆ. ಉತ್ತಮ ಪ್ರದರ್ಶನ ನೀಡುವ ಭರವಸೆಯಿದೆ. ತಂಡವನ್ನು ಮತ್ತೆ ಸೇರಿಕೊಂಡಿರುವುದು, ಸಹ ಆಟಗಾರರೊಂದಿಗೆ ಸಮಯ ಕಳೆಯಲು ಸಾಧ್ಯವಾಗಿರುವುದು, ಪರಸ್ಪರ ತಮಾಷೆ, ಸಂಭಾಷಣೆ, ನಿಜಕ್ಕೂ ಈ ಎಲ್ಲ ಕ್ಷಣಗಳನ್ನು ಆನಂದಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ. 

ಅಮೆರಿಕದಲ್ಲಿ ಕ್ರಿಕೆಟ್ ಬೆಳವಣಿಗೆ ಕುರಿತು ಮಾತನಾಡಿದ ಅವರು, ‘ಟ್ವೆಂಟಿ-20 ವಿಶ್ವಕಪ್ ಆಯೋಜನೆಯ ಮೂಲಕ ಅಮೆರಿಕದಲ್ಲಿ ಕ್ರಿಕೆಟ್ ಹೆಚ್ಚು ಜನಪ್ರಿಯತೆ ಗಳಿಸುವ ನಂಬಿಕೆಯಿದೆ’ ಎಂದಿದ್ದಾರೆ.

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದ ಪಂತ್ 13 ಪಂದ್ಯಗಳಲ್ಲಿ 446 ರನ್ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.