ADVERTISEMENT

T20 World Cup: ಅಫ್ಗನ್ ವಿರುದ್ಧ 104 ರನ್ ಜಯ; ದಾಖಲೆ ಬರೆದ ವಿಂಡೀಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜೂನ್ 2024, 4:30 IST
Last Updated 18 ಜೂನ್ 2024, 4:30 IST
<div class="paragraphs"><p>ನಿಕೋಲಸ್ ಪೂರನ್</p></div>

ನಿಕೋಲಸ್ ಪೂರನ್

   

(ಪಿಟಿಐ ಚಿತ್ರ)

ಸೇಂಟ್ ಲೂಸಿಯಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂದು 'ಸಿ' ಗುಂಪಿನಲ್ಲಿ ಅಫ್ಗಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಅತಿಥೇಯ ವೆಸ್ಟ್ ಇಂಡೀಸ್ 103 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ADVERTISEMENT

ಇದರೊಂದಿಗೆ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗೆಲುವಿನ ಓಟ ಮುಂದುವರಿಸಿರುವ ವಿಂಡೀಸ್, ಸತತ ಎಂಟನೇ ಗೆಲುವು ದಾಖಲಿಸಿದೆ.

ಈ ಪೈಕಿ ಪ್ರಸಕ್ತ ಸಾಗುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿರುವ ರೋವ್ಮನ್ ಪೊವೆಲ್ ಬಳಗವು, ಒಟ್ಟು ಎಂಟು ಅಂಕಗಳನ್ನು ಕಲೆ ಹಾಕಿದೆ. ಅಲ್ಲದೆ ಸಿ ಗುಂಪಿನ ಅಗ್ರಸ್ಥಾನಿಯಾಗಿ ಸೂಪರ್ ಎಂಟರ ಹಂತಕ್ಕೆ ಪ್ರವೇಶಿಸಿದೆ.

ಎರಡನೇ ಸ್ಥಾನದಲ್ಲಿರುವ ಅಫ್ಗಾನಿಸ್ತಾನ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವಿನೊಂದಿಗೆ ಒಟ್ಟು ಆರು ಅಂಕ ಗಳಿಸಿದೆ. ಈ ಗುಂಪಿನಲ್ಲಿ ನ್ಯೂಜಿಲೆಂಡ್, ಯುಗಾಂಡ ಹಾಗೂ ಪಾಪುವಾ ನ್ಯೂಗಿನಿ ನಿರ್ಗಮಿಸಿವೆ.

ಒಂದೇ ಓವರ್‌ನಲ್ಲಿ 36 ರನ್...

ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್, ನಿಕೋಲಸ್ ಪೂರನ್ (98) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 218 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಕೇವಲ ಎರಡು ರನ್‌ನಿಂದ ಶತಕ ವಂಚಿತರಾದ ಪೂರನ್ 53 ಎಸೆತಗಳಲ್ಲಿ 98 ರನ್ ಗಳಿಸಿದರು. ಅವರ ಸ್ಫೋಟಕ ಇನಿಂಗ್ಸ್‌ನಲ್ಲಿ ಎಂಟು ಸಿಕ್ಸರ್ ಹಾಗೂ ಆರು ಬೌಂಡರಿಗಳು ಸೇರಿದ್ದವು. ಅಜ್ಮತುಲ್ಲಾ ಅವರ ನೇರ ಥ್ರೋದಿಂದಾಗಿ ರನೌಟ್ ಆಗಿ ಪೆವಿಲಿಯನ್‌ಗೆ ಹಿಂತಿರುಗಿದರು.

ಇದಕ್ಕೂ ಮೊದಲು ಅಜ್ಮತುಲ್ಲಾ ಒಮರ್‌ಝೈ ಓವರ್‌ರೊಂದರಲ್ಲಿ 36 ರನ್ ಸಿಡಿಸುವ ಮೂಲಕ ಪೂರನ್ ಅಬ್ಬರಿಸಿದರು. ಇದರಲ್ಲಿ ತಲಾ ಮೂರು ಸಿಕ್ಸರ್ ಹಾಗೂ ಬೌಂಡರಿ ಒಳಗೊಂಡಿತ್ತು.

2007ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಓವರ್‌ವೊಂದರ ಎಲ್ಲ ಆರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ್ದ ಭಾರತದ ಯುವರಾಜ್ ಸಿಂಗ್ 36 ರನ್ ಗಳಿಸಿದ್ದರು.

ಪವರ್ ಪ್ಲೇನಲ್ಲಿ 92 ರನ್...

ಅಷ್ಟೇ ಯಾಕೆ ಪವರ್ ಪ್ಲೇನಲ್ಲಿ ವಿಂಡೀಸ್ ಒಂದು ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿತು. ಇದು ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪವರ್‌ ಪ್ಲೇನಲ್ಲಿ ತಂಡವೊಂದರಿಂದ ದಾಖಲಾದ ಗರಿಷ್ಠ ಮೊತ್ತವಾಗಿದೆ.

ವಿಂಡೀಸ್ ಪರ ಜಾನ್ಸನ್ ಚಾರ್ಲ್ಸ್ (43), ಶಾಯ್ ಹೋಪ್ (25) ಹಾಗೂ ನಾಯಕ ರೋವ್ಮನ್ ಪೊವೆಲ್ (26) ಉಪಯುಕ್ತ ಕಾಣಿಕೆ ನೀಡಿದರು.

ಈ ಗುರಿ ಬೆನ್ನಟ್ಟಿದ ಅಫ್ಗಾನಿಸ್ತಾನ 16.2 ಓವರ್‌ಗಳಲ್ಲಿ 114 ರನ್ನಿಗೆ ಆಲೌಟ್ ಆಯಿತು. ಇಬ್ರಾಹಿಂ ಜದ್ರಾನ್ ಗರಿಷ್ಠ 38 ರನ್ ಗಳಿಸಿದರು. ವಿಂಡೀಸ್ ಪರ ಒಬೆಡ್ ಮೆಕೋಯ್ ಮೂರು ವಿಕೆಟ್ ಗಳಿಸಿದರು.

ಇದರೊಂದಿಗೆ ಗುಂಪು ಹಂತದ ಪಂದ್ಯಗಳು ಕೊನೆಗೊಂಡಿದ್ದು, ನಾಳೆಯಿಂದ (ಜೂನ್ 19) ಸೂಪರ್ 8ರ ಹಂತದ ಪಂದ್ಯಗಳು ಆರಂಭವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.