ನ್ಯೂಯಾರ್ಕ್: ವೇಗದ ಬೌಲರ್‌ಗಳ ಪರಿಣಾಮಕಾರಿ ದಾಳಿ ಮತ್ತು ನಾಯಕ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡವು ಟಿ20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿತು.
ನಾಸೌ ಕೌಂಟಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ತಂಡದ ವಿರುದ್ಧ ಭಾರತ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಟಿ20 ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಐರ್ಲೆಂಡ್‌ಗೆ ಸತತ ಎಂಟನೇ ಸೋಲು ಇದಾಗಿದೆ.
ಐರ್ಲೆಂಡ್ ನೀಡಿದ್ದ 97 ರನ್‌ಗಳ ಅಲ್ಪ ಮೊತ್ತದ ಗುರಿಯನ್ನು ಬೆನ್ನತ್ತಿದ ಭಾರತ ತಂಡಕ್ಕೆ ಎದುರಾಳಿ ತಂಡದ ಮಾರ್ಕ್ ಅಡೇರ್ ಆರಂಭದಲ್ಲೇ ಪೆಟ್ಟು ನೀಡಿದರು. ಆರಂಭಿಕ ಆಟಗಾರನಾಗಿ ಬಂದಿದ್ದ ವಿರಾಟ್ ಕೊಹ್ಲಿ (1) ಕ್ರೀಸ್‌ನಿಂದ ಮುಂದೆ ಬಂದು ಹೊಡೆದ ಚೆಂಡನ್ನು ಬೌಂಡರಿ ಲೈನ್‌ನಲ್ಲಿ ಬೆನ್ ವೈಟ್ ಕ್ಯಾಚ್ ಹಿಡಿದರು.
ಆದರೆ, ನಾಯಕ ರೋಹಿತ್ ಶರ್ಮಾ (ಗಾಯಾಳಾಗಿ ನಿವೃತ್ತಿ 52; 37ಎ, 4x4, 6x3) ನಿಧಾನಗತಿಯ ಪಿಚ್‌ನಲ್ಲಿ ಸಂಯಮದಿಂದ ಆಡಿದರು. ಎರಡನೇ ವಿಕೆಟ್‌ಗೆ ರಿಷಭ್ ಪಂತ್ (ಔಟಾಗದೇ 36) ಅವರೊಂದಿಗೆ 54 ರನ್‌ಗಳ ಜೊತೆಯಾಟವಾಡಿದರು.
ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ಆಡಿದ್ದ ವೇಗಿ ಜೋಶುವಾ ಲಿಟಲ್ ಅವರ ಶಾರ್ಟ್ ಪಿಚ್ ಎಸೆತವು ಭುಜಕ್ಕೆ ಬಡಿದು ನೋವುಂಟಾದ ಕಾರಣ ರೋಹಿತ್ ಮೈದಾನದಿಂದ ನಿರ್ಗಮಿಸಿದರು. ಈ ವೇಳೆ ತಂಡವು ಗೆಲುವಿನ ಸನಿಹ ಬಂದಿತ್ತು. ನಂತರ ಬಂದ ಸೂರ್ಯಕುಮಾರ್ ಯಾದವ್ (2) ನಿರಾಸೆ ಮೂಡಿಸಿದರೂ, ಪಂತ್ ಸಿಕ್ಸರ್‌ನೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ 12.2 ಓವರ್ ಗಳಲ್ಲಿ 2 ವಿಕೆಟ್‌ಗೆ 97 ರನ್ ಗಳಿಸಿತು.
ಇದಕ್ಕೂ ಮೊದಲು ಟಾಸ್ ಗೆದ್ದ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಾಲ್ವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದ ಅವರ ಯೋಜನೆ ಫಲ ನೀಡಿತು.
ಎಡಗೈ ವೇಗಿ ಅರ್ಷದೀಪ್ ಸಿಂಗ್ (35ಕ್ಕೆ2), ಜಸ್‌ಪ್ರೀತ್ ಬೂಮ್ರಾ (6ಕ್ಕೆ2) ಹಾಗೂ ಹಾರ್ದಿಕ್ ಪಾಂಡ್ಯ (27ಕ್ಕೆ3) ಅವರು ಐರ್ಲೆಂಡ್ ತಂಡವನ್ನು ಕಟ್ಟಿ ಹಾಕಿದರು. ಇದರಿಂದಾಗಿ ಐರ್ಲೆಂಡ್ ತಂಡವು 50 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿತು.
ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ನಾಯಕ ಪಾಲ್ ಸ್ಟರ್ಲಿಂಗ್ ವಿಕೆಟ್ ಕಬಳಿಸಿದ ಆರ್ಷದೀಪ್ ಸಿಂಗ್ ಮೊದಲ ಪೆಟ್ಟುಕೊಟ್ಟರು. ಅದೇ ಓವರ್‌ನಲ್ಲಿ ಆ್ಯಂಡ್ರ್ಯೂ ಬಾಲ್‌ಬಿರ್ನಿ ವಿಕೆಟ್ ಕೂಡ ಸಿಂಗ್ ಅವರ ಖಾತೆ ಸೇರಿತು. ಐರ್ಲೆಂಡ್ ತಂಡಕ್ಕೆ ಅರ್ಷದೀಪ್ ಮಾಡಿದ ಈ ಗಾಯಕ್ಕೆ ಉಳಿದ ಬೌಲರ್‌ಗಳು ಉಪ್ಪು ಸವರಿದರು.
ಮಧ್ಯಮವೇಗಿ ಹಾರ್ದಿಕ್ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವಿಕೆಟ್ ಕಬಳಿಸಿದರು. ಇನ್ನೊಂದು ತುದಿಯಿಂದ ಜಸ್‌ಪ್ರೀತ್ ಬೂಮ್ರಾ ಅವರ ಬಿರುಗಾಳಿ ವೇಗದ ಎಸೆತಗಳಿಗೆ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು. ಅವರು 3 ಓವರ್‌ಗಳಲ್ಲಿ ಕೊಟ್ಟಿದ್ದು ಕೇವಲ 6 ರನ್ ಮಾತ್ರ. ಅಲ್ಲದೇ ಎರಡು ವಿಕೆಟ್ ಕಬಳಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟರ್ ಗರೆತ್ ಡೆಲನಿ (26; 14ಎ, 4X2, 6X2) ಅವರ ದಿಟ್ಟ ಬ್ಯಾಟಿಂಗ್ ಗಮನ ಸೆಳೆಯಿತು. ಅದರಿಂದಾಗಿ ತಂಡದ ಮೊತ್ತ ಸ್ವಲ್ಪ ಬೆಳೆಯಿತು. ಜೋಶುವಾ ಲಿಟಲ್ (14; 13ಎ) ಅವರೂ ಮಹತ್ವದ ಕಾಣಿಕೆ ನೀಡಿದರು.
ಭಾರತ ಶನಿವಾರ ನ್ಯೂಯಾರ್ಕ್‌ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದ್ದು, ಈ ಪಂದ್ಯಕ್ಕೆ ರೋಹಿತ್ ಶರ್ಮಾ ಲಭ್ಯವಾಗುವರೇ ಎಂಬ ಮಾಹಿತಿಯಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.