ADVERTISEMENT

T20 World Cup: ಬಾಂಗ್ಲಾ ವಿರುದ್ಧ ಗೆದ್ದು ಸೆಮಿಫೈನಲ್ ತಲುಪಿದ ಪಾಕಿಸ್ತಾನ

ಪಿಟಿಐ
Published 6 ನವೆಂಬರ್ 2022, 16:02 IST
Last Updated 6 ನವೆಂಬರ್ 2022, 16:02 IST
   

ಅಡಿಲೇಡ್‌: ಟಿ20 ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದಲ್ಲೇ ಹೊರಬೀಳುವ ಆತಂಕದಲ್ಲಿದ್ದ ಪಾಕಿಸ್ತಾನ ತಂಡ, ಅದೃಷ್ಟದ ನೆರವಿನೊಂದಿಗೆ ಸೆಮಿಫೈನಲ್‌ ಪ್ರವೇಶಿಸಿತು.

ಅಡಿಲೇಡ್‌ ಓವಲ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಾಬರ್‌ ಅಜಂ ಬಳಗ ಬಾಂಗ್ಲಾದೇಶ ತಂಡವ‌ನ್ನು ಐದು ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ ಆರು ಪಾಯಿಂಟ್ಸ್‌ ಕಲೆಹಾಕಿ ‘ಗುಂಪು 2’ ರಲ್ಲಿ ಎರಡನೇ ಸ್ಥಾನ ಪಡೆದು ನಾಲ್ಕರಘಟ್ಟಕ್ಕೆ ಲಗ್ಗೆಯಿಟ್ಟಿತು.

ಇದೇ ತಾಣದಲ್ಲಿ ಬೆಳಿಗ್ಗೆ ನಡೆದಿದ್ದ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್‌ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿದ್ದು ಕೂಡಾ, ಪಾಕ್‌ ಸೆಮಿ ಹಾದಿಯನ್ನು ಸುಗಮಗೊಳಿಸಿತು. ಮೊದಲ ಪಂದ್ಯದ ಫಲಿತಾಂಶದಿಂದ ಪಾಕ್‌– ಬಾಂಗ್ಲಾ ಹಣಾಹಣಿ ‘ಕ್ವಾರ್ಟರ್‌ ಫೈನಲ್‌’ ಎನಿಸಿಕೊಂಡಿತ್ತು. ಗೆದ್ದ ತಂಡಕ್ಕೆ ಸೆಮಿಯಲ್ಲಿ ಸ್ಥಾನ ಖಚಿತವಾಗಿತ್ತು.

ADVERTISEMENT

ಮೊದಲು ಬ್ಯಾಟ್‌ ಮಾಡಿದ ಶಕೀಬ್‌ ಅಲ್‌ ಹಸನ್‌ ಬಳಗವನ್ನು 8 ವಿಕೆಟ್‌ಗಳಿಗೆ 127 ರನ್‌ಗಳಿಗೆ ನಿಯಂತ್ರಿಸಿದ ಪಾಕ್‌, ಬಳಿಕ 18.1 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು. 22 ರನ್‌ಗಳಿಗೆ ನಾಲ್ಕು ವಿಕೆಟ್‌ ಪಡೆದು ಎದುರಾಳಿ ಬ್ಯಾಟಿಂಗ್‌ನ ಬೆನ್ನೆಲುಬು ಮುರಿದ ವೇಗಿ ಶಾಹೀನ್‌ ಶಾ ಆಫ್ರಿದಿ, ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಸುಲಭ ಗುರಿ ಬೆನ್ನಟ್ಟಿದ ಪಾಕ್‌ ತಂಡಕ್ಕೆ ಮೊಹಮ್ಮದ್‌ ರಿಜ್ವಾನ್‌ (32 ರನ್‌, 32 ಎ.) ಮತ್ತು ಬಾಬರ್‌ (25 ರನ್‌, 33 ಎ.) ಮೊದಲ ವಿಕೆಟ್‌ಗೆ 57 ರನ್‌ ಸೇರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್‌ ಹ್ಯಾರಿಸ್‌ (31 ರನ್‌, 18 ಎ.) ಹಾಗೂ ಶಾನ್ ಮಸೂದ್ (ಔಟಾಗದೆ 24, 14 ಎ.) ಜವಾಬ್ದಾರಿಯುತ ಆಟವಾಡಿ ಗೆಲುವಿಗೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್‌
ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 127
(ನಜ್ಮುಲ್‌ ಹೊಸೇನ್‌ ಶಾಂತೊ 54, ಸೌಮ್ಯ ಸರ್ಕಾರ್‌ 20, ಅಫೀಫ್‌ ಹೊಸೇನ್‌ ಔಟಾಗದೆ 24, ಶಾಹೀನ್‌ ಶಾ ಅಫ್ರಿದಿ 22ಕ್ಕೆ 4, ಶಾದಾಬ್‌ ಖಾನ್‌ 30ಕ್ಕೆ 2, ಇಫ್ತಿಕಾರ್‌ ಅಹ್ಮದ್‌ 15ಕ್ಕೆ 1)

ಪಾಕಿಸ್ತಾನ 18.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 128 (ಮೊಹಮ್ಮದ್ ರಿಜ್ವಾನ್‌ 32, ಬಾಬರ್‌ ಅಜಂ 25, ಮೊಹಮ್ಮದ್‌ ಹ್ಯಾರಿಸ್‌ 31, ಶಾನ್ ಮಸೂದ್‌ ಔಟಾಗದೆ 24, ಮುಸ್ತಫಿಜುರ್‌ ರಹ್ಮಾನ್‌ 21ಕ್ಕೆ 1, ನಸುನ್‌ ಅಹ್ಮದ್‌ 14ಕ್ಕೆ 1) ಫಲಿತಾಂಶ: ಪಾಕಿಸ್ತಾನಕ್ಕೆ 5 ವಿಕೆಟ್‌ ಗೆಲುವು

ಸೆಮಿಫೈನಲ್‌ ಹಣಾಹಣಿ
ಈ ಬಾರಿಯ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ 'ಎ' ಗುಂಪಿನಿಂದ ನ್ಯೂಜಿಲೆಂಡ್, ಇಂಗ್ಲೆಂಡ್‌ ಹಾಗೂ 'ಬಿ' ಗುಂಪಿನಿಂದ ಭಾರತ, ಪಾಕಿಸ್ತಾನ ಸೆಮಿಫೈನಲ್ಸ್‌ಗೆ ಲಗ್ಗೆ ಇಟ್ಟಿವೆ.

ಸೆಮಿಫೈನಲ್‌ ಪಂದ್ಯಗಳು ನವೆಂಬರ್‌ 9 ಮತ್ತು 10 ರಂದು ನಡೆಯಲಿವೆ.'ಎ' ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್‌ ಮತ್ತು'ಬಿ' ಗುಂಪಿನ ಎರಡನೇ ಸ್ಥಾನಿ ಪಾಕಿಸ್ತಾನಮೊದಲ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಅದೇರೀತಿ,'ಬಿ' ಗುಂಪಿನಲ್ಲಿ ಮೊದಲ ಸ್ಥಾನದಲ್ಲಿರುವ ಭಾರತಕ್ಕೆ, 'ಎ' ಗುಂಪಿನ ಎರಡನೇ ಸ್ಥಾನಿ ಇಂಗ್ಲೆಂಡ್‌ ಎರಡನೇ ಸೆಮಿಫೈನಲ್‌ನಲ್ಲಿ ಸವಾಲು ಹಾಕಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.