ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಟ್ವೆಂಟಿ-20 ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ವಿಶ್ವದ ನಂ.1 ಟ್ವೆಂಟಿ-20 ಬ್ಯಾಟರ್ ಸೂರ್ಯಕುಮಾರ್ ಯಾದವ್, ಇನ್ನಷ್ಟೇ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕಿದೆ. ಇದರಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನವೆನಿಸಿದೆ.
ಅಗ್ರಸ್ಥಾನದಲ್ಲಿರುವ ಸೂರ್ಯಕುಮಾರ್ ಒಟ್ಟು 861 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ. ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಎರಡು ಮತ್ತು ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಮೂರನೇ ಸ್ಥಾನದಲ್ಲಿದ್ದಾರೆ.
ಭಾರತದ ಯುವ ಭರವಸೆಯ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಗ್ರ 10ರ ಪಟ್ಟಿಯಲ್ಲಿದ್ದಾರೆ. 714 ರೇಟಿಂಗ್ ಪಾಯಿಂಟ್ ಹೊಂದಿರುವ ಜೈಸ್ವಾಲ್ 6ನೇ ಸ್ಥಾನದಲ್ಲಿದ್ದಾರೆ.
ಟಾಪ್ 10ರ ಪಟ್ಟಿಗೆ ರಶೀದ್ ಖಾನ್ ಲಗ್ಗೆ...
ಅಫ್ಗಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್, ಬೌಲಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟಾಪ್ 10 ಪಟ್ಟಿಗೆ ಲಗ್ಗೆ ಇಟ್ಟಿದ್ದಾರೆ. ನಾಲ್ಕು ಸ್ಥಾನಗಳ ಬಡ್ತಿ ಪಡೆದಿರುವ ರಶೀದ್, ಒಂಬತ್ತನೇ ಸ್ಥಾನದಲ್ಲಿದ್ದಾರೆ.
ಐರ್ಲೆಂಡ್ ವಿರುದ್ಧದ ಸರಣಿ ಗೆಲುವಿನಲ್ಲಿ ರಶೀದ್ ಖಾನ್ ಪ್ರಮುಖ ಪಾತ್ರ ವಹಿಸಿದ್ದರು.
ಈ ವಿಭಾಗದಲ್ಲಿ ಇಂಗ್ಲೆಂಡ್‌ನ ಸ್ಪಿನ್ನರ್ ಅದಿಲ್ ರಶೀದ್ (726) ಅಗ್ರಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗ ಎರಡು ಹಾಗೂ ವೆಸ್ಟ್‌ಇಂಡೀಸ್‌ನ ಅಕೀಲ್ ಹೊಸೈನ್ ಮೂರನೇ ಸ್ಥಾನದಲ್ಲಿದ್ದಾರೆ.
ಭಾರತದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ 660 ರೇಟಿಂಗ್ ಅಂಕಗಳೊಂದಿಗೆ ನಾಲ್ಕು ಮತ್ತು ರವಿ ಬಿಷ್ಣೋಯಿ (659) ಐದನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.