ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವಪಂದ್ಯದಲ್ಲಿ ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯುವ ಸಾಧ್ಯತೆಯಿದೆ.
ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದ ಹಾರ್ದಿಕ್ ಪಾಂಡ್ಯ, ಹಲವು ತಿಂಗಳುಗಳ ಬಳಿಕ ಈಗ ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸವನ್ನು ಆರಂಭಿಸಿದ್ದಾರೆ.
ನೆಟ್ಸ್‌ಗಿಳಿದ ಪಾಂಡ್ಯ, ದೈಹಿಕ ಕಸರತ್ತಿನ ಜೊತೆಗೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಅಭ್ಯಾಸವನ್ನು ನಡೆಸಿದ್ದಾರೆ. ಈ ಸಂಬಂಧ ಬಿಸಿಸಿಐ ಚಿತ್ರವನ್ನು ಹಂಚಿಕೊಂಡಿದೆ.
ಹಾಗಿದ್ದರೂ ಪಾಂಡ್ಯ ಫಾರ್ಮ್ ಚಿಂತೆಗೆ ಕಾರಣವಾಗಿದೆ. ಆರನೇ ಬೌಲರ್ ಹಾಗೂ ಫಿನಿಶಿಂಗ್ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಹಾಗಾಗಿ ಹಳೆಯ ಲಯಕ್ಕೆ ಮರಳಲು ಸಾಧ್ಯವೇ ಎಂಬುದು ಕುತೂಹಲವೆನಿಸಿದೆ.
ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಪಾಂಡ್ಯ ಭುಜ ನೋವಿಗೊಳಗಾಗಿದ್ದರು. ಎಂಟು ಎಸೆತಗಳಲ್ಲಿ ಎರಡು ಬೌಂಡರಿ ನೆರವಿನಿಂದ 11 ರನ್ ಗಳಿಸಿದ್ದರು. ಬಳಿಕ ಫೀಲ್ಡಿಂಗ್ ಮಾಡಲು ಮೈದಾನಕ್ಕಿಳಿದಿರಲಿಲ್ಲ. ಅಲ್ಲದೆ ಸ್ಕ್ಯಾನಿಂಗ್‌ಗೆ ಒಳಪಟ್ಟಿದ್ದರು.
ಸೆಮಿಫೈನಲ್ ಪ್ರವೇಶಿಸಲು ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಗೆಲುವು ಅನಿವಾರ್ಯವೆನಿಸಿದೆ. ಹಾಗಾಗಿ ಶೇಕಡಾ 100ರಷ್ಟು ಫಿಟ್ ಆದರೆ ಮಾತ್ರ ಪಾಂಡ್ಯಗೆ ಅವಕಾಶ ನೀಡಬೇಕು ಎಂಬುದು ಕ್ರಿಕೆಟ್ ಪಂಡಿತರ ಅಭಿಮತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.