ಬ್ರಿಜ್‌ಟೌನ್: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು, ಎರಡು ಸೋಲುಗಳಿಂದ ‘ಹೈರಾಣಾಗಿರುವ’ ಅಮೆರಿಕ ತಂಡವನ್ನು ಭಾನುವಾರ ನಡೆಯುವ ಟಿ20 ವಿಶ್ವಕಪ್ ಸೂಪರ್ ಎಂಟರ ಹಂತ ಪಂದ್ಯದಲ್ಲಿ ಎದುರಿಸಲಿದೆ. ಇಂಗ್ಲೆಂಡ್‌ನ ‘ಪವರ್ ಹಿಟ್ಟರ್’ ಆಟಗಾರರು ಮಿಂಚಿ ನಿರಾಯಾಸ ಗೆಲುವು ಪಡೆದರೆ ಮಾತ್ರ ಆ ತಂಡದ ಸೆಮಿಫೈನಲ್ ಆಸೆ ಜೀವಂತವಾಗುಳಿಯಲಿದೆ.
ದಕ್ಷಿಣ ಆಫ್ರಿಕಾ ಎದುರು ಶುಕ್ರವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 164 ರನ್‌ಗಳನ್ನು ಬೆಂಬತ್ತುವಾಗ ಹೋರಾಟ ತೋರಿದರೂ ಕೊನೆಯಲ್ಲಿ ದೊಡ್ಡಹೊಡೆತಗಳಿಗೆ ವಿಫಲರಾಗಿ ಏಳು ರನ್‌ಗಳ ಸೋಲನುಭವಿಸಿತ್ತು.
ವೆಸ್ಟ್ ಇಂಡೀಸ್ ಶನಿವಾರ ಅಮೆರಿಕ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ನೆಟ್ ರನ್ ರೇಟ್ ಉತ್ತಮಪಡಿಸಿದೆ. ಹೀಗಾಗಿ ಇಂಗ್ಲೆಂಡ್‌ಗೆ ಒತ್ತಡ ಎದುರಾಗಿದೆ.
ದಕ್ಷಿಣ ಆಫ್ರಿಕಾ ಸದ್ಯ ಎರಡನೇ ಗುಂಪಿನಲ್ಲಿ ಎರಡು ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಲಾ ಒಂದು ಗೆದ್ದು, ಒಂದು ಸೋತಿವೆ. ವೆಸ್ಟ್ ಇಂಡೀಸ್ ನೆಟ್‌ರನ್‌ರೇಟ್ ಉತ್ತಮವಾಗಿದೆ. ಸೆಮಿಫೈನಲ್ ಆಸೆ ಉಳಿಸಿಕೊಳ್ಳಬೇಕಾದರೆ ಇಂಗ್ಲೆಂಡ್, ಅಮೆರಿಕ ವಿರುದ್ಧ ಕನಿಷ್ಠ 10 ರನ್‌ಗಳಿಂದ ಅಥವಾ ಕಡೇಪಕ್ಷ ಒಂದು ಓವರ್ ಇರುವಂತೆ ಗೆಲ್ಲಬೇಕಾಗುತ್ತದೆ.
ಫಿಲ್ ಸಾಲ್ಟ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರೇನಾದರೂ ಬೇಗ ನಿರ್ಗಮಿಸಿದರೆ ಇಂಗ್ಲೆಂಡ್‌ಗೆ ಸಮಸ್ಯೆ ಆಗಲಿದೆ. ಬಟ್ಲರ್ ಮತ್ತು ಬೇಸ್ಟೊ ಅವರು ಒಳ್ಳೆಯ ಲಯದಲ್ಲಿಲ್ಲ. ಒಟ್ಟಾರೆ ಇಂಗ್ಲೆಂಡ್ ಬ್ಯಾಟಿಂಗ್ ಬಲಾಢ್ಯವಾಗಿದೆ. ಹೀಗಾಗಿ ಅಮೆರಿಕದ ಪ್ರಮುಖ ಬೌಲರ್‌ಗಳಾದ ಸೌರಭ್ ನೇತ್ರಾವಳ್ಕರ್ ಮತ್ತು ಹರ್ಮೀತ್ ಸಿಂಗ್ ಅವರಿಗೆ ಸವಾಲು ಎದುರಾಗಿದೆ.
ಬೌಲಿಂಗ್‌ನಲ್ಲಿ ಅದಿಲ್ ರಶೀದ್ ಮತ್ತು ಜೋಫ್ರಾ ಆರ್ಚರ್ ಕ್ರಮವಾಗಿ 13 ಮತ್ತು 12 ವಿಕೆಟ್ ಪಡೆದಿದ್ದು ಯಶಸ್ವಿ ಎನಿಸಿದ್ದಾರೆ. ಮಾರ್ಕ್ ವುಡ್ ಅಂಥ ಯಶಸ್ಸು ಪಡೆದಿಲ್ಲ. ಕಡೆಯ 5 ಪಂದ್ಯಗಳಲ್ಲಿ ಅವರಿಗೆ ವಿಕೆಟ್ ಸಿಕ್ಕಿಲ್ಲ.
ಲೀಗ್ ಹಂತದಲ್ಲಿ ಗಮನ ಸೆಳೆದಿದ್ದ ಅಮೆರಿಕ ನಂತರ ಅಂಥ ಆಟ ಆಡಿಲ್ಲ. ಆ ತಂಡ ಸೆಮಿಫೈನಲ್‌ಗೆ ತಲುಪಿದರೆ ಅದು ಪವಾಡವೇ. ಅಮೆರಿಕ ಪರ ಆಂಡ್ರೀಸ್ ಗೌಸ್ ಮತ್ತು ಆರನ್ ಜೋನ್ಸ್ ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ಪಾಕ್ ಎದುರು ಮೂಡಿಬಂದ ಸಾಂಘಿಕ ಆಟ ನಂತರ ಬಂದಿಲ್ಲ.
ಪಂದ್ಯ ಆರಂಭ: ರಾತ್ರಿ 8.00
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.