ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಬುಧಾಬಿಯಲ್ಲಿ ನಡೆದ ರೋಚಕ ಸೆಮಿಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ನ್ಯೂಜಿಲೆಂಡ್ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಕಿವೀಸ್ ಗೆಲುವಿನಲ್ಲಿ ಡ್ಯಾರಿಲ್ಮಿಚೆಲ್ (72*), ಡೆವೊನ್ ಕಾನ್ವೆ (46) ಹಾಗೂ ಜೇಮ್ಸ್ ನಿಶಾಮ್ (27) ಮಹತ್ವದ ಪಾತ್ರ ವಹಿಸಿದರು. ಕೊನೆಯ ಹಂತದಲ್ಲಿ ಕೇವಲ 11 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 27 ರನ್ ಗಳಿಸಿದ ನಿಶಾಮ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು.
ನಿರ್ಣಾಯಕ ಹಂತದಲ್ಲಿ ಔಟ್ ಆದ ನಿಶಾಮ್ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಬಳಿಕ ಮಿಚೆಲ್ ಮಿಂಚಿನ ಆಟದ ನೆರವಿನಿಂದ ಕಿವೀಸ್ ಗೆಲುವು ದಾಖಲಿಸಿದರೂ ಡಗೌಟ್‌ನಲ್ಲಿ ಆಸೀನರಾಗಿದ್ದ ನಿಶಾಮ್ ಸಂಭ್ರಮಿಸಲಿಲ್ಲ. ಕುರ್ಚಿಯಿಂದ ಕದಲಲಿಲ್ಲ.
ಸಹ ಆಟಗಾರರೆಲ್ಲ ಸಂಭ್ರಮಿಸುತ್ತಿರುವಾಗ ನಿಶಾಮ್ ಯಾವುದೇ ರೀತಿಯ ಭಾವೋದ್ವೇಗಕ್ಕೆ ಒಳಗಾಗಿಲ್ಲ. ನಿಶಾಮ್ ಈ ನಡೆಯು ಕ್ರಿಕೆಟ್ ಪ್ರಿಯರಲ್ಲಿ ಅಚ್ಚರಿಯನ್ನು ಮೂಡಿಸಿತ್ತು.
ಮೈದಾನವನ್ನೇ ದಿಟ್ಟಿಸಿ ನೋಡುತ್ತಿದ್ದ ನಿಶಾಮ್ ಕಣ್ಣುಗಳು ಸಾವಿರ ಪದಗಳನ್ನು ಸಾರುತ್ತಿದ್ದವು. ಪಂದ್ಯದ ಬಳಿಕ ಈ ಕುರಿತು ಟ್ವೀಟ್ ಮಾಡಿರುವ ನಿಶಾಮ್, 'ಕರ್ತವ್ಯ ಮುಗಿಯಿತೇ?ನನಗೆ ಹಾಗೇ ಅನಿಸುತ್ತಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.
ಅಂದ ಹಾಗೆ ಟ್ವೆಂಟಿ-20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಇದೇ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.