ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್‌ಗೆ ಪ್ರವೇಶಿಸಲಿದೆಯೇ ಎಂಬುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಸ್ಕಾಟ್ಲೆಂಡ್ ವಿರುದ್ಧ ದಾಖಲಾದ ಭರ್ಜರಿ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಪಂದ್ಯಶ್ರೇಷ್ಠ ಪುರಸ್ಕೃತ ರವೀಂದ್ರ ಜಡೇಜ ಅವರಿಗೆ ಇದಕ್ಕೆ ಸಮಾನವಾದ ಪ್ರಶ್ನೆಯೊಂದು ಎದುರಾಗಿತ್ತು.
ನ್ಯೂಜಿಲೆಂಡ್ ವಿರುದ್ಧ ಅಫ್ಗಾನಿಸ್ತಾನ ಗೆದ್ದರೆ ಭಾರತಕ್ಕೆ ಅವಕಾಶ ಸಿಗಲಿದೆ. ಹಾಗೊಂದು ವೇಳೆ ನ್ಯೂಜಿಲೆಂಡ್ ಸೋಲದಿದ್ದರೆ ಏನು ಮಾಡುತ್ತೀರಿ? ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿರುವ ಜಡೇಜ, 'ಹಾಗಾದರೆ ನಾವು ಬ್ಯಾಗ್ ಪ್ಯಾಕ್ ಮಾಡಿ ಮನೆಗೆ ಹೋಗುತ್ತೇವೆ' ಎಂದು ಹೇಳಿದ್ದಾರೆ.
ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಸ್ಕಾಟ್ಲೆಂಡ್ ಒಡ್ಡಿದ 86 ರನ್‌ಗಳ ಗುರಿಯನ್ನು ಭಾರತ ಕೇವಲ 6.3 ಓವರ್‌ಗಳಲ್ಲಿ ತಲುಪಿತ್ತು. ಈ ಮೂಲಕ ನ್ಯೂಜಿಲೆಂಡ್ ಹಾಗೂ ಅಫ್ಗಾನಿಸ್ತಾನಗಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಂಡಿದೆ.
ಪಂದ್ಯದಲ್ಲಿ ಜಡೇಜ 15 ರನ್ ತೆತ್ತು ಮೂರು ವಿಕೆಟ್ ಕಬಳಿಸಿದ್ದರು. ಕೆ.ಎಲ್. ರಾಹುಲ್ ಕೇವಲ 18 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿದ್ದರು.
ಇನ್ನು ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿರುವ ಜಡೇಜ, ಒಂದೆರಡು ಕೆಟ್ಟ ಪ್ರದರ್ಶನಗಳಿಂದತೀರ್ಪು ಕಲ್ಪಿಸಬಾರದು ಎಂದು ಹೇಳಿದ್ದಾರೆ.
'ಹಾಗೆ ನೋಡಿದರೆ ಕಳೆದ ಎರಡು ಮೂರು ವರ್ಷಗಳಲ್ಲಿ ಭಾರತ ಹಾಗೂ ವಿದೇಶ ನೆಲದಲ್ಲೂ ಉತ್ತಮ ಕ್ರಿಕೆಟ್ ಆಡಿದ್ದೇವೆ. ಹಾಗಾಗಿ ಒಂದೆರಡು ಕೆಟ್ಟ ಪ್ರದರ್ಶನದಿಂದ ನಿರ್ಣಯಿಸುವುದು ಸಮಂಜಸವಲ್ಲ. ಅಲ್ಲದೆ ಕೆಟ್ಟ ಪ್ರದರ್ಶನದ ಬಗ್ಗೆ ಚಿಂತಿಸದೆ ಮುಂದಿನ ಅವಕಾಶದತ್ತ ಎದುರು ನೋಡಬೇಕಿದೆ. ನಾವು ಉತ್ತಮ ಕ್ರಿಕೆಟ್ ಆಡುವುದರತ್ತ ಗಮನ ಕೇಂದ್ರಿಕರಿಸಿದ್ದೇವೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.