ADVERTISEMENT

ಕೊಹ್ಲಿ ಸುತ್ತ ಹೇಳಿಕೆಗಳ ಬಾಣ ಬಿರುಸು

ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 22:31 IST
Last Updated 19 ನವೆಂಬರ್ 2024, 22:31 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಸಿಡ್ನಿ : ಬಾರ್ಡರ್ –ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯ ಆರಂಭ ಸಮೀಪಿಸುತ್ತಿದೆ. ಅದರೊಂದಿಗೆ ಆತಿಥೇಯ ಆಸ್ಟ್ರೇಲಿಯಾ ತಂಡದ ಮಾಜಿ ಹಾಗೂ ಹಾಲಿ ಆಟಗಾರರ ಹೇಳಿಕೆಗಳೂ ಕಾವೇರಿಸುತ್ತಿವೆ. ಅದರಲ್ಲೂ ವಿರಾಟ್ ಕೊಹ್ಲಿ ಅವರನ್ನು ಕೇಂದ್ರಿಕರಿಸಿದ ಮಾತಿನ ಬಾಣಗಳು ಹೆಚ್ಚೆಚ್ಚು ತೂರಿಬರುತ್ತಿವೆ. ಈಗ ಈ ಸಾಲಿಗೆ ಆಸ್ಟ್ರೇಲಿಯಾದ ವಿಕೆಟ್‌ಕೀಪಿಂಗ್ ದಂತಕಥೆ ಇಯಾನ್ ಹೀಲಿ ಕೂಡ ಸೇರಿದ್ದಾರೆ.

‘ಬೌಲರ್‌ಗಳು ಕೊಹ್ಲಿಯ ದೇಹ ಮತ್ತು ಫ್ರಂಟ್‌ಫುಟ್ ಪ್ಯಾಡ್‌ ಗುರಿಯಾಗಿಸಿಕೊಂಡು ಎಸೆತಗಳನ್ನು ಹಾಕಬೇಕು. ಅದರೊಂದಿಗೆ ಕೊಹ್ಲಿ ಬ್ಯಾಕ್‌ಫುಟ್‌ನಲ್ಲಿ ಆಡುವಂತೆ ಮಾಡಬೇಕು. ಆದರೆ ಪ್ರತಿಯೊಂದು ಎಸೆತವನ್ನೂ ಅದೇ ರೀತಿ ಪ್ರಯೋಗಿಸಬಾರದು. ಕೊಹ್ಲಿ ಅದಕ್ಕೆ ಕೂಡಲೇ ಒಗ್ಗಿಕೊಳ್ಳುತ್ತಾರೆ’ ಎಂದು ಹೀಲಿ ಸಲಹೆ ನೀಡಿದ್ದಾರೆ. 

119 ಟೆಸ್ಟ್ ಪಂದ್ಯಗಳಿಂದ 4500 ರನ್ ಗಳಿಸಿರುವ ಹೀಲಿ ಅವರು ಎಸ್‌.ಇ. ಎನ್‌ ರೇಡಿಯೊಗೆ ನೀಡಿರುವ ಸಂದರ್ಶನದಲ್ಲಿ  ಹೇಳಿದ್ದಾರೆ.

ADVERTISEMENT

‘ಒಂದೊಮ್ಮೆ ಫ್ರಂಟ್‌ ಫುಟ್ ತಂತ್ರಗಾರಿಕೆ ಫಲಿಸದಿದ್ದರೆ ಕೊಹ್ಲಿಯ ದೇಹವನ್ನು ಗುರಿಯಿಟ್ಟುಕೊಳ್ಳಿ. ವಿಶೇಷವಾಗಿ ಅವರ  ಕಂಕುಳದ ಸಮೀಪದಲ್ಲಿ ಹಾದುಹೋಗುವಂತೆ ಎಸೆತಗಳಿರಲಿ. ಅವರು ಬಲಗೈ ಬ್ಯಾಟರ್ ಆಗಿರುವುದರಿಂದ ಇಂತಹ ಎಸೆತಗಳನ್ನು ಆಡುವಾಗ ತಪ್ಪು ಮಾಡುವ ಸಾಧ್ಯತೆ ಇದೆ. ಡಕಿಂಗ್, ವೇವಿಂಗ್ ಮತ್ತು ಬ್ಯಾಕ್‌ವರ್ಡ್ ಬೆಂಡಿಂಗ್ ಮಾಡುತ್ತಿದ್ದರೆ ಅವರ ಮುಂದೆ ಶಾರ್ಟ್ ಲೆಗ್ ಫೀಲ್ಡರ್ ಇರಲಿ. ಅವರು ಹುಕ್ ಮತ್ತು ಪುಲ್ ಶಾಟ್‌ಗಳನ್ನು ಆಡುವುದನ್ನು ತಡೆಯಲು ಬ್ಯಾಡ್ಜ್ ಎತ್ತರಕ್ಕೆ ಎಸೆತ ಹಾಕಿ’ ಎಂದು ಸಲಹೆ ನೀಡಿದ್ದಾರೆ. 

ಕೊಹ್ಲಿಯನ್ನು ಕೆಣಕಬೇಡಿ: ಶೇನ್

‘ವಿರಾಟ್ ಕೊಹ್ಲಿ ಅವರನ್ನು ಕೆಣಕಬೇಡಿ. ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಅವರನ್ನು ಕೆಣಕಿದಾಗಲೆಲ್ಲ ಅತ್ಯುತ್ತಮವಾಗಿ ಆಡಿದ ಉದಾಹರಣೆಗಳು ಬಹಳಷ್ಟಿವೆ. ಅವರು ಅಕ್ರಮಣಶೀಲರಾಗಿಬಿಟ್ಟರೆ ನಿಯಂತ್ರಿಸುವುದು ಕಷ್ಟ’ ಎಂದು ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವಾಟ್ಸನ್ ಹೇಳಿದ್ದಾರೆ. 

‘ವಿರಾಟ್ ಬಗ್ಗೆ ನನಗೆ ಗೊತ್ತಿರುವ ಪ್ರಕಾರ ಅವರಲ್ಲಿ ಆ ಸಾಧನೆಯ ಹಸಿವು ಆಗಾಧವಾಗಿದೆ. ಸದಾಕಾಲ ಅವರು ಪ್ರಜ್ವಲಿಸಲು ಪ್ರಯತ್ನಿಸುತ್ತಾರೆ. ತಾವು ಎದುರಿಸುವ ಪ್ರತಿಯೊಂದು ಎಸೆತಕ್ಕೂ ತಕ್ಕ ಉತ್ತರ ನೀಡುತ್ತಾರೆ. ಅವರು ಅತಿಮಾನವ ಶಕ್ತಿಯುಳ್ಳವರು’ ಎಂದು ವಾಟ್ಸನ್  ‘ವಿಲ್ಲೊ ಟಾಕ್’ ಪಾಡ್‌ಕಾಸ್ಟ್‌ನಲ್ಲಿ ಬಣ್ಣಿಸಿದ್ದಾರೆ.

ವಿರಾಟ್ ಚಾಂಪಿಯನ್: ಲಯನ್ 

ಪ್ರಸಕ್ತ ವರ್ಷದಲ್ಲಿ ವಿರಾಟ್ ಕೊಹ್ಲಿ ಅವರು ರನ್‌ ಗಳಿಸಲು ಪರದಾಡುತ್ತಿದ್ದಾರೆ. ಫಾರ್ಮ್‌ ಮರಳುವ ಪ್ರಯತ್ನಗಳಲ್ಲಿ ಎಡವುತ್ತಿದ್ದಾರೆ. ಆಡಿರುವ 6 ಟೆಸ್ಟ್‌ಗಳಲ್ಲಿ 22.72ರ ಸರಾಸರಿಯಲ್ಲಿ ರನ್‌ ಗಳಿಸಿದ್ಧಾರೆ. ಇದರಿಂದಾಗಿ ಹಲವರು ಅವರನ್ನು ಟೀಕಿಸುತ್ತಿದ್ದಾರೆ. ಆದರೆ ಆಸ್ಟ್ರೇಲಿಯಾದ ಸ್ಪಿನ್ ತಾರೆ ನೇಥನ್ ಲಯನ್, ‘ವಿರಾಟ್ ಅವರು ಎಂದಿದ್ದರೂ ಚಾಂಪಿಯನ್‌ ಆಟಗಾರ’ ಎಂದಿದ್ದಾರೆ. 

‘ಅವರ ಸಮಗ್ರ ದಾಖಲೆಗಳನ್ನು ನೋಡಿ. ಅವರನ್ನು ನೀವು ಚಾಂಪಿಯನ್‌ ಅನ್ನದೇ ಇರಲು ಸಾಧ್ಯವೇ ಇಲ್ಲ. ಅವರ ಬಗ್ಗೆ ನನ್ನ ಮನದಲ್ಲಿ ಅಪಾರ ಗೌರವ ಭಾವನೆ ಬಿಟ್ಟು ಮತ್ತೇನೂ ಇಲ್ಲ’ ಎಂದು ಲಯನ್ ಹೇಳಿದ್ದಾರೆ.

‘ನಾನು ಅವರ ವಿಕೆಟ್ ಗಳಿಸಲು ಉತ್ಸುಕನಾಗಿದ್ದೇನೆ. ಅದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಆದರೆ ಅದೆಷ್ಟು ಕಠಿಣ ಸವಾಲು ಎಂಬುದೂ ನನಗೆ ಗೊತ್ತಿದೆ. ಅವರಂತಹ ಆಟಗಾರನೊಂದಿಗೆ ಸ್ಪರ್ಧಿಸುವುದು ಅಮೋಘವಾದ ಅನುಭವ’ ಎಂದು ಕ್ರಿಕೆಟ್ ಡಾಟ್ ಕಾಮ್ ಡಾಟ್ ಎಯು ವೆಬ್‌ಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.