ನವದೆಹಲಿ: ಭಾರತೀಯ ಸಂಘಟಿತ ಸಂಸ್ಥೆಯಾದ ಟಾಟಾ ಗ್ರೂಪ್ 2024-28ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಶೀರ್ಷಿಕೆ ಪ್ರಾಯೋಜಕತ್ವವನ್ನು ದಾಖಲೆಯ ₹ 2,500 ಕೋಟಿಗಳಿಗೆ ($300 ಮಿಲಿಯನ್) ಪಡೆದುಕೊಂಡಿದೆ ಎಂದು ಲೀಗ್ ಸಂಘಟಕರು ಶನಿವಾರ ತಿಳಿಸಿದ್ದಾರೆ.
ಸೆಲೆಬ್ರಿಟಿ ಫ್ರಾಂಚೈಸಿ ಮಾಲೀಕರ ಬೆಂಬಲದೊಂದಿಗೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟಗಾರರನ್ನು ಒಳಗೊಂಡ ಐಪಿಎಲ್ ಅಂದಾಜು ₹ 69 ಸಾವಿರ ಕೋಟಿ( $8.4 ಬಿಲಿಯನ್) ಬ್ರಾಂಡ್ ಮೌಲ್ಯದೊಂದಿಗೆ ವಿಶ್ವದ ಶ್ರೀಮಂತ ಟಿ20 ಪಂದ್ಯಾವಳಿಯಾಗಿದೆ.
ಟಾಟಾ ಗ್ರೂಪ್ ಕಳೆದ ವರ್ಷ ಆರಂಭವಾದ ಪುರುಷರ ಐಪಿಎಲ್ ಮತ್ತು ಮಹಿಳೆಯರ ಪ್ರೀಮಿಯರ್ ಲೀಗ್ ಎರಡಕ್ಕೂ ಶೀರ್ಷಿಕೆ ಪ್ರಾಯೋಜಕತ್ವ ಹೊಂದಿದೆ. ಅಭೂತಪೂರ್ವ ಆರ್ಥಿಕ ಬದ್ಧತೆಯು ಅಂತರರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ಐಪಿಎಲ್‌ನ ಅಪಾರ ಪ್ರಮಾಣದ ಮತ್ತು ಜಾಗತಿಕ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಾಖಲೆಯ ಮೊತ್ತ: ಟಾಟಾ ಗ್ರೂಪ್ ₹2500 ಕೋಟಿ ದಾಖಲೆ ಬೆಲೆಗೆ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದೆ. ಐಪಿಎಲ್ ಕ್ರೀಡಾ ಜಗತ್ತಿನಲ್ಲಿ ಹೊಂದಿರುವ ಅಪಾರ ಮೌಲ್ಯ ಮತ್ತು ಆಕರ್ಷಣೆಗೆ ಇದು ಸಾಕ್ಷಿಯಾಗಿದೆ ಎಂದು ಲೀಗ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಹೇಳಿದ್ದಾರೆ. ಈ ಅಭೂತಪೂರ್ವ ಮೊತ್ತವು ಲೀಗ್‌ನ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಎಂದು ಅವರು ಬಣ್ಣಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.