ಗುವಾಹಟಿ: ಹೊಸ ವರ್ಷದಲ್ಲಿ ತಾವು ಆಡಿದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ದಾಖಲಿಸಿದರು.
87 ಎಸೆತಗಳಲ್ಲಿ 113 ರನ್ ಗಳಿಸಿದ ಅವರ ಬ್ಯಾಟಿಂಗ್‌ನಿಂದ ಭಾರತ ತಂಡವು ಶ್ರೀಲಂಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ 67 ರನ್‌ಗಳಿಂದ ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ಟಾಸ್ ಗೆದ್ದ ಶ್ರೀಲಂಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ರೋಹಿತ್ ಶರ್ಮಾ ಮತ್ತು ಯುವ ಆಟಗಾರ ಶುಭಮನ್ ಗಿಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 143 ರನ್ ಸೇರಿ ಅಮೋಘ ಆರಂಭ ನೀಡಿದರು.
ಈ ಬುನಾದಿಯ ಮೇಲೆ ಬೃಹತ್ ಮೊತ್ತ ಪೇರಿಸಲು ವಿರಾಟ್ ಕಾರಣರಾದರು. ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 373 ರನ್ ಗಳಿಸಿತು. ಅದಕ್ಕುತ್ತರವಾಗಿ ಲಂಕಾ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 306 ರನ್ ಗಳಿಸಿತು. ನಾಯಕ ದಸುನ್ ಶನಕಾ (108; 88ಎ, 4X12, 6X3) ಶತಕ ಗಳಿಸಿದರು.
ಭಾರತದ ವೇಗಿ ಉಮ್ರಾನ್ ಮಲಿಕ್ ಮತ್ತು ಮೊಹಮ್ಮದ್ ಸಿರಾಜ್ ಅವರ ದಾಳಿಯ ಮುಂದೆ ಲಂಕಾ ಬ್ಯಾಟಿಂಗ್ ಪಡೆ ಕುಸಿಯಿತು.
ಕೊಹ್ಲಿ 45ನೇ ಶತಕ
ಏಕದಿನ ಕ್ರಿಕೆಟ್‌ನಲ್ಲಿ 45ನೇ ಶತಕ ದಾಖಲಿಸಿದರು. ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ (49) ದಾಖಲೆ ಸರಿಗಟ್ಟಲು ಇನ್ನೂ ನಾಲ್ಕು ಶತಕಗಳ ಅಗತ್ಯವಿದೆ. ಒಟ್ಟಾರೆ ಮೂರು ಮಾದರಿಗಳಲ್ಲಿಯೂ ಸೇರಿ 73 ಶತಕಗಳನ್ನು ಕೊಹ್ಲಿ ಗಳಿಸಿದ್ದಾರೆ.
ಅಲ್ಲದೇ ಈ ಮಾದರಿಯಲ್ಲಿ ಅವರು ಸತತ ಎರಡನೇ ಬಾರಿ ನೂರರ ಗಡಿ ದಾಟಿದರು. ಹೋದ ತಿಂಗಳು ಛತ್ತೋಗ್ರಾಮ್‌ನಲ್ಲಿ ನಡೆದಿದ್ದ ಬಾಂಗ್ಲಾ ಎದುರಿನ ಪಂದ್ಯದಲ್ಲಿ ಶತಕ ಗಳಿಸಿದ್ದರು. ಈ ಪಂದ್ಯದಲ್ಲಿ ತಮಗೆ ಲಭಿಸಿದ ಎರಡು ಜೀವದಾನಗಳನ್ನು ಕೊಹ್ಲಿ ಸಮರ್ಥವಾಗಿ ಬಳಸಿಕೊಂಡರು. ಅವರು 51 ರನ್ ಗಳಿಸಿದ್ದಾಗ ಕುಶಾಲ ಮೆಂಡಿಸ್ ಮತ್ತು 81 ರನ್ ಗಳಿಸಿದ್ದಾಗ ದಸುನ್ ಶನಕಾ ಕ್ಯಾಚ್ ಕೈಚೆಲ್ಲಿದರು. ಕೊಹ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರು.
ಕೊಹ್ಲಿ ಅವರು ರೋಹಿತ್ ಜೊತೆಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 40 ರನ್, ಮೂರನೇ ವಿಕೆಟ್ ಪಾಲುದಾರಿಕೆಯಲ್ಲಿ ಶ್ರೇಯಸ್ ಜೊತೆಗೆ 40 ರನ್ ಸೇರಿಸಿದರು. ಅಲ್ಲದೇ ಕನ್ನಡಿಗ ಕೆ.ಎಲ್. ರಾಹುಲ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 90 ರನ್ ಸೇರಿಸಿದರು. ರಾಹುಲ್ 29 ಎಸೆತಗಳಲ್ಲಿ 39 ರನ್ ಗಳಿಸಿದರು.
ರಜಿತಾ ಹಾಕಿದ 49ನೇ ಓವರ್‌ನಲ್ಲಿ ಕೊಹ್ಲಿ, ವಿಕೆಟ್‌ಕೀಪರ್ ಕುಶಾಲ ಮೆಂಡಿಸ್‌ಗೆ ಕ್ಯಾಚಿತ್ತರು.
ಟೀಕೆಗಳಿಗೆ ಉತ್ತರ: ಕಳೆದ ಏಕದಿನ ಪಂದ್ಯದಲ್ಲಿ ಬಾಂಗ್ಲಾ ಎದುರು ದ್ವಿಶತಕ ಬಾರಿಸಿದ್ದ ಇಶಾನ್ ಕಿಶನ್ ಮತ್ತು ಇತ್ತೀಚೆಗೆ ಟಿ20 ಪಂದ್ಯದಲ್ಲಿ ಶತಕ ಗಳಿಸಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ಈ ಪಂದ್ಯದಲ್ಲಿ ಕಣಕ್ಕಿಳಿಸಲಿಲ್ಲ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಟೀಕೆಗಳು ವ್ಯಕ್ತವಾದವು.
ಆದರೆ, ಟೀಕೆಗಳಿಗೆ ತಮ್ಮ ಬ್ಯಾಟಿಂಗ್ ಮೂಲಕ ಉತ್ತರ ಕೊಟ್ಟರು. ರೋಹಿತ್ ಶರ್ಮಾ 67 ಎಸೆತಗಳಲ್ಲಿ 83 ರನ್ ಗಳಿಸಿದರು. ಮೂರು ಸಿಕ್ಸರ್ ಸಿಡಿಸಿದರು. ಬಹುದಿನಗಳ ನಂತರ ಲಯ ಕಂಡುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.