ಕೊಲಂಬೊ: ಭಾರತ ಕ್ರಿಕೆಟ್ ತಂಡದ ಆಲ್–ರೌಂಡರ್ ಕೃಣಾಲ್ ಪಾಂಡ್ಯ ಅವರಿಗೆ ಕೋವಿಡ್–19 ದೃಢಪಟ್ಟಿದ್ದು, ಇಂದು ಶ್ರೀಲಂಕಾ ಎದುರು ನಡೆಯಬೇಕಿದ್ದ ಟಿ20 ಪಂದ್ಯವನ್ನು ಮುಂದೂಡಲಾಗಿದೆ.
ಸೋಮವಾರವೇ ಕೃಣಾಲ್ ಅವರಿಗೆ ಕೋವಿಡ್ ದೃಢಪಟ್ಟಿದೆ. ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಟೂರ್ನಿಯಲ್ಲಿ ಭಾಗಿಯಾಗಿರುವ ಎಲ್ಲರ ಆರ್‌ಟಿ–ಪಿಸಿಆರ್ ಫಲಿತಾಂಶಕ್ಕಾಗಿ ಎದುರು ನೋಡಲಾಗುತ್ತಿದೆ.
'ಕೃಣಾಲ್ ಅವರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ ಹಾಗೂ ಇವತ್ತಿನ ಟಿ20 ಅಂತರರಾಷ್ಟ್ರೀಯ ಪಂದ್ಯವನ್ನು ಮುಂದೂಡಲಾಗಿದೆ. ಭಾರತ ತಂಡದಲ್ಲಿರುವ ಇತರರ ಆರ್‌ಟಿ–ಪಿಸಿಆರ್ ಫಲಿತಾಂಶ ಇನ್ನಷ್ಟೇ ಬರಬೇಕಿದೆ' ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಇಂದು ಸಂಜೆ ಕೋವಿಡ್ ಫಲಿತಾಂಶ ಬರಲಿದ್ದು, ಎಲ್ಲರಲ್ಲೂ ಕೋವಿಡ್ ನೆಗೆಟಿವ್ ಇರುವುದಾಗಿ ಬಂದರೆ ಎರಡನೇ ಟಿ20 ಪಂದ್ಯವು ಬುಧವಾರವೇ ನಡೆಯಲಿದೆ ಎಂದು ಹೇಳಿದ್ದಾರೆ.
ಇಲ್ಲಿನ ಆರ್. ಪ್ರೇಮದಾಸಾ ಕ್ರೀಡಾಂಗಣದಲ್ಲಿ ಪಂದ್ಯ ನಿಗದಿಯಾಗಿತ್ತು. ಮೊದಲ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ಎದುರು 38 ರನ್‌ಗಳ ಗೆಲುವು ಸಾಧಿಸಿತು.
ಕಳೆದ ಒಂದು ತಿಂಗಳಿಂದ ಬಯೋ–ಬಬಲ್‌ನಲ್ಲಿರುವ ಕೃಣಾಲ್‌ಗೆ ಹೇಗೆ ಕೊರೊನಾ ವೈರಸ್ ಸೋಂಕು ತಗುಲಿರಬಹುದು ಎಂಬುದು ಚರ್ಚೆಗೆ ಕಾರಣವಾಗಿದೆ.
ಟಿ20 ತಂಡದಲ್ಲಿರುವ ಸೂರ್ಯಕುಮಾರ್ ಯಾದವ್ ಮತ್ತು ಪೃಥ್ವಿ ಶಾ ಇಂಗ್ಲೆಂಡ್‌ನಲ್ಲಿರುವ ಭಾರತ ಟೆಸ್ಟ್ ತಂಡ ಸೇರಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಆದರೆ, ಈಗಿನ ಬೆಳವಣಿಗೆಯಿಂದಾಗಿ ಅವರ ಪ್ರವಾಸದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಮೂರನೇ ಮತ್ತು ಅಂತಿಮ ಟಿ20 ಪಂದ್ಯವು ಗುರುವಾರ ನಿಗದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.