ADVERTISEMENT

IND vs AUS T20 | ಭಾರತಕ್ಕೆ ಆರು ವಿಕೆಟ್‌ಗಳ ಜಯ, ಸರಣಿ ಸಮಬಲ

ಪಿಟಿಐ
Published 24 ಸೆಪ್ಟೆಂಬರ್ 2022, 7:50 IST
Last Updated 24 ಸೆಪ್ಟೆಂಬರ್ 2022, 7:50 IST
ರೋಹಿತ್ ಶರ್ಮಾ ಬ್ಯಾಟಿಂಗ್‌ ವೈಖರಿ –ಪಿಟಿಐ ಚಿತ್ರ
ರೋಹಿತ್ ಶರ್ಮಾ ಬ್ಯಾಟಿಂಗ್‌ ವೈಖರಿ –ಪಿಟಿಐ ಚಿತ್ರ   

ನಾಗಪುರ: ರೋಹಿತ್‌ ಶರ್ಮಾ ಅವರ ಬಿರುಸಿನ ಆಟದ ಬಲದಿಂದ ಭಾರತ ತಂಡವು ಶುಕ್ರವಾರ ಇಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಆರು ವಿಕೆಟ್‌ಗಳ ಜಯ ಸಾಧಿಸಿತು.

ವಿಸಿಎ ಕ್ರೀಡಾಂಗಣದಲ್ಲಿ ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಇನಿಂಗ್ಸ್‌ಗೆ 8 ಓವರ್‌ಗಳನ್ನು ನಿಗದಿಪಡಿಸಲಾಯಿತು. ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 8 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 90 ರನ್ ಗಳಿಸಿದರೆ, ಭಾರತ 7.2 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 92 ರನ್‌ ಗಳಿಸಿ ಗೆದ್ದಿತು. ಮೂರು ಪಂದ್ಯಗಳ ಸರಣಿ ಇದೀಗ 1–1 ರಲ್ಲಿ ಸಮಬಲದಲ್ಲಿದೆ.

ಮಿಂಚಿನ ಆಟವಾಡಿದ ರೋಹಿತ್‌ (ಔಟಾಗದೆ 46, 20 ಎ., 4X4, 6X4) ಅವರು ಆತಿಥೇಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ರೋಹಿತ್‌ ಮತ್ತು ರಾಹುಲ್‌ (10 ರನ್‌, 6ಎ) ಮೊದಲ ವಿಕೆಟ್‌ಗೆ 2.5 ಓವರ್‌ಗಳಲ್ಲಿ 39 ರನ್‌ ಸೇರಿಸಿದರು. ವಿರಾಟ್‌ ಕೊಹ್ಲಿ (11 ರನ್‌, 6 ಎ) ಉತ್ತಮ ಆರಂಭ ಪಡೆದರೂ ಬೇಗನೇ ಔಟಾದರು.

ADVERTISEMENT

ಭಾರತದ ಗೆಲುವಿಗೆ ಕೊನೆಯ ಎರಡು ಓವರ್‌ಗಳಲ್ಲಿ 22 ರನ್‌ಗಳು ಬೇಕಿದ್ದವು. ಪ್ಯಾಟ್‌ ಕಮಿನ್ಸ್‌ ಬೌಲ್‌ ಮಾಡಿದ ಏಳನೇ ಓವರ್‌ನಲ್ಲಿ 13 ರನ್‌ಗಳು ಬಂದವು. ಕೊನೆಯ ಓವರ್‌ನಲ್ಲಿ 9 ರನ್‌ಗಳ ಅವಶ್ಯಕತೆಯಿತ್ತು. ಡೇನಿಯಲ್‌ ಸ್ಯಾಮ್ಸ್‌ ಬೌಲ್‌ ಮಾಡಿದ ಓವರ್‌ನ ಮೊದಲ ಎರಡು ಎಸೆತಗಳನ್ನು ಕ್ರಮವಾಗಿ ಸಿಕ್ಸರ್‌ ಹಾಗೂ ಬೌಂಡರಿಗೆ ಅಟ್ಟಿದ ದಿನೇಶ್‌ ಕಾರ್ತಿಕ್‌, ತಂಡಕ್ಕೆ ಗೆಲುವು ತಂದುಕೊಟ್ಟರು.

ವೇಡ್‌ ಅಬ್ಬರ: ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೆಲಿಯಾ ತಂಡ, ನಾಯಕ ಆ್ಯರನ್ ಫಿಂಚ್ (31) ಹಾಗೂ ಮ್ಯಾಥ್ಯೂ ವೇಡ್ (ಔಟಾಗದೆ 43; 20ಎ, 4X4, 6X3) ಅಬ್ಬರದ ಆಟದಿಂದಾಗಿ 90 ರನ್ ಗಳಿಸಿತು.

ಅಕ್ಷರ್ ಪಟೇಲ್ ಹಾಗೂ ಜಸ್‌ಪ್ರೀತ್ ಬೂಮ್ರಾ ಉತ್ತಮ ದಾಳಿಯಿಂದಾಗಿ ತಂಡವು ಐದು ಓವರ್‌ಗಳಲ್ಲಿ 46 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಆದರೆ ಕ್ರೀಸ್‌ಗೆ ಬಂದಮ್ಯಾಥ್ಯೂ ವೇಡ್ ಆಟ ರಂಗೇರಿತು. ಇದರಿಂದಾಗಿ ಉಳಿದ ಮೂರು ಓವರ್‌ಗಳಲ್ಲಿ ಒಟ್ಟು 44 ರನ್‌ಗಳು ಸೇರಿದವು.

ಪಂದ್ಯ ವಿಳಂಬ: ವಿಸಿಎ ಕ್ರೀಡಾಂಗಣ ಇರುವ ಜಮ್ತಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಸುರಿದಿದೆ. ಬುಧವಾರ ರಾತ್ರಿ ಹಾಗೂ ಗುರುವಾರ ಮಧ್ಯರಾತ್ರಿಯೂ ಮಳೆ ಬಂದಿದ್ದ ಕಾರಣ ಮೈದಾನದ ಬೌಂಡರಿ ಬಳಿಯ ಸ್ಥಳವು ಒದ್ದೆಯಾಗಿತ್ತು. ಇದರಿಂದ 7 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ ರಾತ್ರಿ 9.30ಕ್ಕೆ ಶುರುವಾಯಿತು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 8 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 90 (ಆ್ಯರನ್ ಫಿಂಚ್ 31, ಮ್ಯಾಥ್ಯೂ ವೇಡ್ ಔಟಾಗದೆ 43, ಅಕ್ಷರ್ ಪಟೇಲ್ 13ಕ್ಕೆ2, ಜಸ್‌ಪ್ರೀತ್ ಬೂಮ್ರಾ 23ಕ್ಕೆ1)

ಭಾರತ: 7.2 ಓವರ್‌ಗಳಲ್ಲಿ 4 ವಿಕೆಟ್‌ಗೆ 92 (ಕೆ.ಎಲ್‌.ರಾಹುಲ್‌ 10, ರೋಹಿತ್ ಶರ್ಮಾ ಔಟಾಗದೆ 46, ವಿರಾಟ್‌ ಕೊಹ್ಲಿ 11, ಹಾರ್ದಿಕ್‌ ಪಾಂಡ್ಯ 9, ದಿನೇಶ್‌ ಕಾರ್ತಿಕ್‌ ಔಟಾಗದೆ 10, ಆ್ಯಡಂ ಜಂಪಾ 16ಕ್ಕೆ 3) ಫಲಿತಾಂಶ: ಭಾರತಕ್ಕೆ 6 ವಿಕೆಟ್‌ ಗೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.