ADVERTISEMENT

4,9,2,0,4,0,8,4,0,4,1: 36; ಟೀಂ ಇಂಡಿಯಾ ಆಟಗಾರರ ರನ್‌ಗಳಿವು...!

ಏಜೆನ್ಸೀಸ್
Published 19 ಡಿಸೆಂಬರ್ 2020, 7:31 IST
Last Updated 19 ಡಿಸೆಂಬರ್ 2020, 7:31 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಅಡಿಲೇಡ್: ಇಲ್ಲಿ ಮೊಬೈಲ್ ನಂಬರ್ ಉಲ್ಲೇಖಿಸಲಾಗಿದೆ ಎಂದು ಯಾರೂ ಕೂಡಾ ತಪ್ಪಾಗಿ ಭಾವಿಸಬಾರದು. ಹೌದು, ಇದು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಗಳಿಸಿರುವ ಸ್ಕೋರ್ ಕಾರ್ಡ್.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇನ್ನಿಂಗ್ಸ್‌ವೊಂದರಲ್ಲಿ ಭಾರತ ಅತಿ ಕನಿಷ್ಠ ಮೊತ್ತ ಗಳಿಸಿದೆ. ಆಸ್ಟ್ರೇಲಿಯಾ ವಿರುದ್ಧ ಇದೇ ಮೊದಲ ಬಾರಿಗೆ ಪಿಂಕ್ ಬಾಲ್ ಡೇ-ನೈಟ್ ಪಂದ್ಯವನ್ನಾಡುತ್ತಿರುವ ಟೀಮ್ ಇಂಡಿಯಾ ಇಂತಹದೊಂದು ಮುಖಭಂಗಕ್ಕೊಳಗಾಗಿದೆ.

ಬಹುಶ: ಕ್ರಿಕೆಟ್ ಪ್ರೇಮಿಗಳು ಭಾರತೀಯ ತಂಡದ ಇಷ್ಟೊಂದು ಹೀನಾಯ ಪ್ರದರ್ಶನವನ್ನು ಹಿಂದೆಂದು ನೋಡಿರಲಿಕ್ಕಿಲ್ಲ. ಅಡಿಲೇಡ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಅಕ್ಷರಶಃ ಪೆವಿಲಿಯನ್ ಪರೇಡ್ ನಡೆಸಿದರು.

ADVERTISEMENT

ಆಸೀಸ್ ವೇಗಿಗಳಾದ ಜೋಶ್ ಹ್ಯಾಜಲ್‌ವುಡ್ ಹಾಗೂ ಪ್ಯಾಟ್ ಕಮಿನ್ಸ್ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಮಾರಕವಾಗಿ ಕಾಡಿದರು. ಇದರೊಂದಿಗೆ 21.2 ಓವರ್‌ಗಳಲ್ಲೇ 36 ರನ್ನಿಗೆ ಒಂಬತ್ತು ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಕೊನೆಯವರಾಗಿ ಕ್ರೀಸಿಗಳಿದ ಮೊಹಮ್ಮದ್ ಶಮಿ ಗಾಯಕ್ಕೊಳಗಾಗಿ ಬ್ಯಾಟಿಂಗ್ ಮುಂದುವರಿಸಲಾಗದೇ ನಿವೃತ್ತಿ ಪಡೆದರು. ಪರಿಣಾಮ ಭಾರತದ ಇನ್ನಿಂಗ್ಸ್ ಕೊನೆಗೊಳಿಸಲಾಯಿತು.

ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದಿಂದ ಇನ್ನಿಂಗ್ಸ್‌ವೊಂದರಲ್ಲಿ ದಾಖಲಾದ ಕನಿಷ್ಠ ಮೊತ್ತವಾಗಿದೆ. ಈ ಹಿಂದೆ 1974ನೇ ಇಸವಿಯಲ್ಲಿ ಇಂಗ್ಲೆಂಡ್ ವಿರುದ್ಧ 42 ರನ್ನಿಗೆ ಆಲೌಟ್ ಆಗಿತ್ತು.ಅಂದ ಹಾಗೆ 1955ನೇ ಇಸವಿಯಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ 26 ರನ್ನಿಗೆ ಆಲೌಟ್‌ ಆಗಿರುವುದು ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ದಾಖಲಾದ ಅತಿ ಕನಿಷ್ಠ ಮೊತ್ತವಾಗಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತಿ ಕನಿಷ್ಠ ಮೊತ್ತ (ಇನ್ನಿಂಗ್ಸ್‌ವೊಂದರಲ್ಲಿ):
36, ಆಸ್ಟ್ರೇಲಿಯಾ ವಿರುದ್ಧ, ಅಡಿಲೇಡ್, 2020
42, ಇಂಗ್ಲೆಂಡ್ ವಿರುದ್ಧ, ಲಾರ್ಡ್ಸ್, 1974
58, ಆಸ್ಟ್ರೇಲಿಯಾ ವಿರುದ್ಧ, ಬ್ರಿಸ್ಬೇನ್, 1947
58, ಇಂಗ್ಲೆಂಡ್ ವಿರುದ್ಧ, ಮ್ಯಾಚೆಂಸ್ಟರ್ 1952
66, ಆಸ್ಟ್ರೇಲಿಯಾ ವಿರುದ್ಧ, ಡರ್ಬನ್, 1996
67, ಆಸ್ಟ್ರೇಲಿಯಾ ವಿರುದ್ಧ, ಮೆಲ್ಬೋರ್ನ್, 1948

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕನಿಷ್ಠ ಮೊತ್ತ (ಇನ್ನಿಂಗ್ಸ್‌ವೊಂದರಲ್ಲಿ):
ನ್ಯೂಜಿಲೆಂಡ್ 26, ಇಂಗ್ಲೆಂಡ್ ವಿರುದ್ಧ, ಆಕ್ಲೆಂಡ್, 1955
ದ.ಆಫ್ರಿಕಾ 30, ಇಂಗ್ಲೆಂಡ್ ವಿರುದ್ಧ, ಪೋರ್ಟ್ ಎಲಿಜಬೆತ್, 1896
ದ. ಆಫ್ರಿಕಾ 30, ಇಂಗ್ಲೆಂಡ್ ವಿರುದ್ಧ, ಎಡ್ಜ್‌ಬಾಸ್ಟನ್, 1924
ದ.ಆಫ್ರಿಕಾ 35, ಇಂಗ್ಲೆಂಡ್ ವಿರುದ್ಧ, ಕೇಪ್‌ಟೌನ್, 1899
ಆಸ್ಟ್ರೇಲಿಯಾ 36, ಇಂಗ್ಲೆಂಡ್ ವಿರುದ್ಧ, ಎಡ್ಜ್‌ಬಾಸ್ಟನ್, 1902
ದ.ಆಫ್ರಿಕಾ 36, ಆಸ್ಟ್ರೇಲಿಯಾ ವಿರುದ್ಧ, ಮೆಲ್ಬೋರ್ನ್, 1932
ಭಾರತ 36, ಆಸ್ಟ್ರೇಲಿಯಾ ವಿರುದ್ಧ, ಅಡಿಲೇಡ್, 2020
ಐರ್ಲೆಂಡ್ 38, ಇಂಗ್ಲೆಂಡ್ ವಿರುದ್ಧ, ಲಾರ್ಡ್ಸ್, 2019

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಯಾವ ಬ್ಯಾಟ್ಸ್‌ಮನ್ ಎರಡಂಕಿಯನ್ನು ತಲುಪಿರಲಿಲ್ಲ. ಇದು ಟೆಸ್ಟ್ ಕ್ರಿಕೆಟ್‌ನ ಎರಡನೇ ದೃಷ್ಟಾಂತವಾಗಿದೆ. ಟೀಮ್ ಇಂಡಿಯಾ ಪರ ಮಯಂಕ್ ಅಗರವಾಲ್ ಗರಿಷ್ಠ 9 ರನ್ ಗಳಿಸಿದ್ದರು. ಈ ಹಿಂದೆ 1924ನೇ ಇಸವಿಯಲ್ಲಿ ದಕ್ಷಿಣ ಆಫ್ರಿಕಾವು ಇಂಗ್ಲೆಂಡ್ ವಿರುದ್ಧ ಕೇವಲ 30 ರನ್ನಿಗೆ ಆಲೌಟ್ ಆಗಿತ್ತು. ಅಂದು ಹೆಬ್ರಿ ಟೇಲರ್ ಗರಿಷ್ಠ 7 ರನ್ ಗಳಿಸಿದ್ದರು.

ಭಾರತೀಯ ಬ್ಯಾಟ್ಸ್‌ಮನ್‌ಗಳ ಸ್ಕೋರ್ ಪಟ್ಟಿ ಇಂತಿದೆ (ದ್ವಿತೀಯ ಇನ್ನಿಂಗ್ಸ್):
ಪೃಥ್ವಿ ಶಾ: 4
ಮಯಂಕ್ ಅಗರವಾಲ್: 9
ಜಸ್‌ಪ್ರೀತ್ ಬುಮ್ರಾ: 2
ಚೇತೇಶ್ವರ ಪೂಜಾರ: 0
ವಿರಾಟ್ ಕೊಹ್ಲಿ: 4
ಅಜಿಂಕ್ಯ ರಹಾನೆ: 0
ಹನುಮ ವಿಹಾರಿ: 8
ವೃದ್ಧಿಮಾನ್ ಸಹಾ: 4
ರವಿಚಂದ್ರನ್ ಅಶ್ವಿನ್: 0
ಉಮೇಶ್ ಯಾದವ್: 4*
ಮೊಹಮ್ಮದ್ ಶಮಿ: 1 (ನಿವೃತ್ತಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.