ಎಜ್‌ಬಾಸ್ಟನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯಕ್ಕೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಸ್ಥಾನ ನೀಡದಿರುವ ಭಾರತ ತಂಡದ ನಿರ್ಧಾರವನ್ನುಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಪ್ರಶ್ನಿಸಿದ್ದಾರೆ.
ಮೊದಲ ಮೂರು ದಿನ ಭಾರತದ ಹಿಡಿತದಲ್ಲಿದ್ದ ಪಂದ್ಯವನ್ನು, ಇಂಗ್ಲೆಂಡ್ ಬ್ಯಾಟರ್‌ಗಳು ನಾಲ್ಕನೇ ದಿನ ತಮ್ಮ ವಶಕ್ಕೆ ತೆಗೆದುಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ವಿಕೆಟ್ ಕೀಪರ್–ಬ್ಯಾಟರ್ ರಿಷಭ್ ಪಂತ್ (146) ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜ (104) ಅವರ ಸಾಹಸಮಯ ಬ್ಯಾಟಿಂಗ್ ಬಲದಿಂದ 416 ರನ್ ಕಲೆಹಾಕಿ ಆಲೌಟ್ ಆಗಿತ್ತು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಜಾನಿ ಬೆಸ್ಟೋ (106) ಶತಕ ಗಳಿಸಿದ್ದರ ಹೊರತಾಗಿಯೂ, 284 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಎರಡನೇ ಇನಿಂಗ್ಸ್‌ನಲ್ಲಿ 245 ರನ್ ಗಳಿಸಲಷ್ಟೇ ಶಕ್ತವಾದ ಭಾರತ, ಇಂಗ್ಲೆಂಡ್‌ಗೆ 378 ರನ್‌ಗಳ ಗುರಿ ನೀಡಿತ್ತು.
ಸವಾಲಿನ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ತಂಡ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು 259 ರನ್ ಗಳಿಸಿದೆ. ಅರ್ಧಶತಕ ಗಳಿಸಿರುವ ಜೋ ರೂಟ್ (76) ಮತ್ತು ಜಾನಿ ಬೆಸ್ಟೋ (72*) ಕ್ರೀಸ್‌ನಲ್ಲಿದ್ದಾರೆ. ಗೆಲ್ಲಲು ಕೊನೆಯ ದಿನ 119 ರನ್ ಗಳಿಸಬೇಕಿದ್ದು, ಇನ್ನೂ ಏಳು ವಿಕೆಟ್‌ಗಳು ಕೈಯಲ್ಲಿವೆ.
ಭಾರತ ತಂಡ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಔಟ್ ಮಾಡಲು ತಿಣುಕಾಡುತ್ತಿದ್ದು, ತಂಡದ ಆಯ್ಕೆ ಕುರಿತು ಕನೇರಿಯಾ ಸಾಮಾಜಿಕ ಮಾಧ್ಯಮ ವೇದಿಕೆ 'ಕೂ'ನಲ್ಲಿ ಪ್ರಶ್ನಿಸಿದ್ದಾರೆ.
ಎಜ್‌ಬಾಸ್ಟನ್‌ನಲ್ಲಿ ಭಾರತ ತಂಡವು ಗೆಲುವಿನ ಸ್ಥಿತಿಯಿಂದ ಸೋಲಿನತ್ತ ಸಾಗುತ್ತಿದೆ. ರವಿಚಂದ್ರನ್ ಅಶ್ವಿನ್ ಹನ್ನೊಂದರ ಬಳಗದಲ್ಲಿ ಏಕೆ ಆಡುತ್ತಿಲ್ಲ. ಯಾರು ಈ ನಿರ್ಧಾರವನ್ನು ಮಾಡಿದರು? ಸ್ವತಃ ಕೋಚ್ ಆಗಿರುವ ದ್ರಾವಿಡ್‌ಇಂಗ್ಲೆಂಡ್‌ನಲ್ಲಿ ಹಲವು ಪಂದ್ಯಗಳನ್ನು ಆಡಿದ್ದಾರೆ. ಇಂಗ್ಲೆಂಡ್‌ನ ಪರಿಸ್ಥಿತಿ ಹೇಗಿರುತ್ತದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಬೇಸಿಗೆಯಲ್ಲಿ ಇಲ್ಲಿನ ವಿಕೆಟ್‌ಗಳು ಒಣಗಿರುತ್ತವೆ ಮತ್ತು 3ನೇ ದಿನದಿಂದ ಚೆಂಡು ತಿರುವು ಪಡೆಯುತ್ತದೆ ಎಂಬುದರ ಅರಿವಿದೆ. ಬೂಮ್ರಾ ಮಾತ್ರವೇ ಅದ್ಭುತವಾಗಿ ಬೌಲ್ ಮಾಡಬಲ್ಲರು. ತಂಡದ ಆಯ್ಕೆ ವಿಚಾರದಲ್ಲಿ ಭಾರತ ತಪ್ಪು ಮಾಡಿದ್ದು, ಅದಕ್ಕೆ ತಕ್ಕ ಬೆಲೆ ತೆರುತ್ತಿದೆಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.