ADVERTISEMENT

IND vs AUS: ಗಾಯದ ಸಮಸ್ಯೆ ನಡುವೆ ಪಂದ್ಯ ಗೆಲ್ಲುವ ಹುಮ್ಮಸ್ಸಿನಲ್ಲಿ ಟೀಮ್ ಇಂಡಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2021, 4:10 IST
Last Updated 15 ಜನವರಿ 2021, 4:10 IST
ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯ
ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯ   

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದ ಪಂದ್ಯ ಶುಕ್ರವಾರ ಆರಂಭವಾಗಿದೆ. ಒಟ್ಟು ನಾಲ್ಕು ಪಂದ್ಯಗಳ ಪೈಕಿ, ಆಸ್ಟ್ರೇಲಿಯಾ ಮತ್ತು ಭಾರತ ತಲಾ 1 ಪಂದ್ಯ ಗೆದ್ದು 1-1 ಸಮಬಲ ಸಾಧಿಸಿವೆ. ಮೂರನೇ ಸಿಡ್ನಿ ಟೆಸ್ಟ್ ಅನ್ನು ಭಾರತ ತಂಡ ಡ್ರಾ ಮಾಡಿಕೊಂಡಿದೆ. ಗಾಯಾಳುಗಳ ತೀವ್ರ ಸಮಸ್ಯೆ ಮಧ್ಯೆ ಭಾರತದ ಈ ನಿರ್ಧಾರ ಪ್ರಶಂಸೆಗೂ ಪಾತ್ರವಾಗಿದೆ. ಆದರೆ ಕೊನೆಯ ಟೆಸ್ಟ್ ಪಂದ್ಯವನ್ನು ಮಾತ್ರ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಟೀಮ್ ಇಂಡಿಯಾ ಸಿಲುಕಿದೆ.

ಯಾರೆಲ್ಲ ಆಟಗಾರರು ಇದ್ದಾರೆ?

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ, ಮಯಾಂಕ್ ಅಗರ್‌ವಾಲ್, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ರಿಷಬ್ ಪಂತ್, ಶಾರ್ದೂಲ್ ಠಾಕೂರ್ ಮತ್ತು ಟಿ ನಟರಾಜನ್ ಆಡುತ್ತಿದ್ದಾರೆ. ಈ ಪೈಕಿ ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಭರವಸೆಯ ಬ್ಯಾಟ್ಸ್‌ಮನ್‌ಗಳಾಗಿ ಮಿಂಚುವವರು. ಉಳಿದಂತೆ ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್, ಶಾರ್ದೂಲ್ ಮತ್ತು ನವದೀಪ್ ಸೈನಿ ಬಗ್ಗೆ ಹೆಚ್ಚು ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ADVERTISEMENT

ಗಾಯಾಳುಗಳದ್ದೇ ಸಮಸ್ಯೆ..

ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಈ ಬಾರಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಆಸ್ಟ್ರೇಲಿಯಾಗೂ ತಕ್ಕಮಟ್ಟಿಗೆ ಗಾಯಾಳುಗಳ ತೊಂದರೆಯಿದ್ದರೂ, ಟೀಮ್ ಇಂಡಿಯಾ ಮಾದರಿಯಲ್ಲಿ ಹೆಚ್ಚೇನು ಸಮಸ್ಯೆಯಾಗಿಲ್ಲ. ಹೀಗಾಗಿ ಆಸ್ಟ್ರೇಲಿಯಾ ತಂಡದ ನಿರ್ವಹಣೆ ಉತ್ತಮವಾಗಿದೆ. ಜತೆಗೆ ತವರಿನಲ್ಲಿಯೇ ಪಂದ್ಯ ನಡೆಯುತ್ತಿರುವುದು ಕೂಡ ಆಸ್ಟ್ರೇಲಿಯಾಗೆ ಪ್ರಯೋಜನ ನೀಡಿದೆ. ಆದರೆ ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್‌ಗಳಿಗೆ ಮಾತ್ರ ಗಾಯದ ತೊಂದರೆ ಕಾಡುತ್ತಿದ್ದು, ಅಳೆದೂ ತೂಗಿ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಪ್ರಮುಖ ಆಟಗಾರರೇ ಇಲ್ಲ..

ಪ್ರಮುಖ ಆಟಗಾರರಾದ ಜಸ್ಪ್ರೀತ್ ಬೂಮ್ರಾ, ಮಹಮ್ಮದ್ ಶಮಿ, ಉಮೇಶ್ ಯಾದವ್, ಕೆ ಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಮತ್ತು ಹನುಮ ವಿಹಾರಿ ಗಾಯದ ಸಮಸ್ಯೆಯಿಂದಾಗಿ ಅಂತಿಮ ಟೆಸ್ಟ್ ಪಂದ್ಯಕ್ಕೆ ಲಭ್ಯರಿಲ್ಲ.

ಗೆಲ್ಲಲೇಬೇಕಾದ ಅನಿವಾರ್ಯತೆ

ಟೆಸ್ಟ್ ಶ್ರೇಯಾಂಕ ಬಲಪಡಿಸುವ ಜತೆಗೆ, ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಗೆದ್ದು ತೋರಿಸುವ ತವಕದಲ್ಲಿದೆ ಟೀಮ್ ಇಂಡಿಯಾ. ಅಲ್ಲದೆ, ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾ ಕ್ರೀಡಾಂಗಣದಲ್ಲಿ ಜನಾಂಗೀಯ ನಿಂದನೆ ಎದುರಿಸಿದ್ದು ಮತ್ತು ಪ್ರೇಕ್ಷಕರ ಅಸಹಕಾರವೂ ಕಿರಿಕಿರಿಯುಂಟುಮಾಡಿದೆ. ಜತೆಗೆ ಹೋಟೆಲ್‌ನಲ್ಲಿ ಕೂಡ ಸೌಲಭ್ಯಗಳ ಕೊರತೆ ಆಟಗಾರರ ನೆಮ್ಮದಿಗೆ ಭಂಗ ತಂದಿದೆ. ಹೀಗಾಗಿ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ತಕ್ಕ ಉತ್ತರ ನೀಡಲು ಟೀಮ್ ಇಂಡಿಯಾ ಹವಣಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.