ADVERTISEMENT

ಟಿ20 ವಿಶ್ವಕಪ್: ಅಭಿಮಾನದ ಸಾಗರದಲ್ಲಿ ಈಜಿದ ವಿಶ್ವ ವಿಜೇತರು

ಮುಂಬೈನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ಅಭೂತಪೂರ್ವ ಸ್ವಾಗತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 13:51 IST
Last Updated 4 ಜುಲೈ 2024, 13:51 IST
   

ಮುಂಬೈ: ಮಹಾರಾಣಿಯ ಕೊರಳಹಾರದಂತೆ ಕಂಗೊಳಿಸುವ ಮರೀನ್ ಡ್ರೈವ್‌ ಪ್ರದೇಶಕ್ಕೆ ಗುರುವಾರ ಸಂಜೆ ‘ನೀಲಿ’ ವರ್ಣ ಆವರಿಸಿತ್ತು. ಅರಬ್ಬೀ ಸಮುದ್ರವೇ ನಾಚಿ ನೀರಾಗುವಷ್ಟು ಕ್ರಿಕೆಟ್‌ ಪ್ರೀತಿಯ ಸಾಗರ ಉಕ್ಕೇರಿತ್ತು.

ಸುರಿಯುತ್ತಿದ್ದ ಮಳೆಯಲ್ಲಿ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ತೊಯ್ದು ತೊಪ್ಪೆಯಾದರೂ ತಮ್ಮ ನೆಚ್ಚಿನ ಕ್ರಿಕೆಟಿಗರನ್ನು  ಕಣ್ತುಂಬಿಕೊಳ್ಳುವ ಕಾತುರ ಮಾತ್ರ ಒಂದಿನಿತೂ ಕಡಿಮೆಯಾಗಲಿಲ್ಲ. ಐದು ದಿನಗಳ ಹಿಂದೆ ಸಪ್ತಸಾಗರದಾಚೆಯ ನಾಡಿನಲ್ಲಿ ಟಿ20 ವಿಶ್ವಕಪ್ ಜಯಿಸಿ ಬಂದ ಭಾರತ ತಂಡದ ಆಟಗಾರರನ್ನು ಕನಸಿನ ನಗರಿಯು ಸ್ವಾಗತಿಸಿದ ಪರಿ ಜಗವೇ ಬೆರಗಾಗುವಂತಿತ್ತು.  

ಬಾರ್ಬಡೋಸ್‌ನಿಂದ ಬುಧವಾರ ಬೆಳಿಗ್ಗೆ ಪ್ರಯಾಣ ಆರಂಭಿಸಿದ್ದ ತಂಡವು ಗುರುವಾರ ನಸುಕಿನಲ್ಲಿ ನವದೆಹಲಿಗೆ ಬಂದಿಳಿದಿತ್ತು.  ಪ್ರಧಾನಿ ನರೇಂದ್ರ ಮೋದಿಯವರ ಆತಿಥ್ಯ ಸ್ವೀಕರಿಸಿದ ನಂತರ ಮಧ್ಯಾಹ್ನ 3.42ಕ್ಕೆ ಮುಂಬೈಗೆ ಪ್ರಯಾಣ ಬೆಳೆಸಿತು. ಸಂಜೆ ಐದು ಗಂಟೆಯ ನಂತರ ವಿಮಾನವು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. 

ADVERTISEMENT

ಏಳು ಗಂಟೆಯ ಸುಮಾರಿಗೆ ನರೀಮನ್ ಪಾಯಿಂಟ್‌ನಲ್ಲಿರುವ ನ್ಯಾಷನಲ್‌ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ (ಎನ್‌ಸಿಪಿಎ)ನಿಂದ  ತೆರೆದ ಛಾವಣಿಯ ಬಸ್‌ನಲ್ಲಿ ವಿಜಯಯಾತ್ರೆ ಆರಂಭವಾಯಿತು. ಭಾರತ ತಂಡದ ಚಿತ್ರದಿಂದ ಬಸ್‌ನ ಇಕ್ಕೆಲಗಳನ್ನು ಸಿಂಗರಿಸಲಾಗಿತ್ತು. ಇದರಿಂದಾಗಿ ಬಸ್‌ ನೀಲಿ ರಥದಂತೆ ಕಂಗೊಳಿಸುತ್ತಿತ್ತು. ಚಾಂಪಿಯನ್ಸ್‌ ಎಂಬ ದಪ್ಪಕ್ಷರದ ಬರಹ ಎದ್ದುಕಾಣುತಿತ್ತು.

ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬೂಮ್ರಾ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜ, ರಿಷಭ್ ಪಂತ್, ಶಿವಂ ದುಬೆ ಮತ್ತು ನೆರವು ಸಿಬ್ಬಂದಿಯು ಬಸ್‌ ಟಾಪ್‌ ಮೇಲೆ ನಿಂತು ಅಭಿಮಾನಿಗಳತ್ತ ವಿಶ್ವಕಪ್ ತೋರಿಸಿ ಸಂಭ್ರಮಿಸಿದರು. ಕೈಬೀಸಿ ಶುಭಕೋರಿದರು. ಕ್ರಿಕೆಟ್‌ಪ್ರೇಮಿಗಳೂ ಕೂಡ ತ್ರಿವರ್ಣ ಧ್ವಜವನ್ನು ಹಾರಿಸುತ್ತ, ಜಯಘೋಷಗಳನ್ನು ಕೂಗಿದರು. 

ಸನ್ಮಾನ ಸಮಾರಂಭ ನಡೆದ ಕ್ರೀಡಾಂಗಣಕ್ಕೆ ಜನರಿಗೆ ಉಚಿತ ಪ್ರವೇಶ ನೀಡಲಾಗಿತ್ತು. ಇದರಿಂದಾಗಿ ಕೆಲವೇ ಕ್ಷಣಗಳೊಳಗೆ ಕ್ರೀಡಾಂಗಣ ಜನರಿಂದ ಭರ್ತಿಯಾಯಿತು. ಮೈದಾನದ ಹೊರಗೂ ಜನಸಾಗರ ಸೇರಿತ್ತು.

ಜೂನ್ 29ರಂದು ಬಾರ್ಬಾಡೋಸ್‌ನಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಜಯಿಸಿತ್ತು. ಆದರೆ ಕೆರೀಬಿಯನ್ ದ್ವೀಪದಲ್ಲಿ ಚಂಡಮಾರುತ ಬೀಸಿದ್ದ ಕಾರಣ ವಿಮಾನಯಾನ ಸೌಲಭ್ಯ ರದ್ದಾಗಿತ್ತು. ಆದ್ದರಿಂದ ಬುಧವಾರದವರೆಗೂ ತಂಡವು ಬಾರ್ಬಾಡೋಸ್‌ನಲ್ಲಿಯೇ ಉಳಿದಿತ್ತು.

ಜಲ ವಂದನೆ ಗೌರವ

ಭಾರತ ತಂಡವು ದೆಹಲಿಯಿಂದ ವಿಸ್ತಾರ ಏರ್‌ಲೈನ್ಸ್‌ ವಿಮಾನದಲ್ಲಿ ಮುಂಬೈಗೆ ಬಂದಿಳಿಯಿತು. 

ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ವಿಮಾನವು ಬಂದು ನಿಂತಾಗ  ವಾಟರ್‌ ಸೆಲ್ಯೂಟ್ (ಜಲವಂದನೆ) ನೀಡಿ ಗೌರವಿಸಲಾಯಿತು. 

ವಿಮಾನದ ಸುತ್ತಲೂ ನಿಂತ ನಾಲ್ಕು  ಅಗ್ನಿಶಾಮಕ ವಾಹನಗಳ ಸಿಬ್ಬಂದಿಯು ವಿಮಾನಕ್ಕೆ ಜಲಾಭಿಷೇಕ ಮಾಡಿದವು. ತದನಂತರ ಆಟಗಾರರನ್ನು ವಿಮಾನದಿಂದ ಇಳಿಸಲಾಯಿತು. ನಂತರ  ಏರ್‌ಪೋರ್ಟ್‌ನೊಳಗೆ ಸಿಬ್ಬಂದಿಯು ಆಟಗಾರರನ್ನು ಗೌರವಿಸಿದರು.

ಪ್ರಧಾನಿ ಮೋದಿ ಉಪಾಹಾರ ಕೂಟ
ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಭಾರತ ತಂಡಕ್ಕೆ ಉಪಾಹಾರ ಕೂಟವನ್ನು ಏರ್ಪಡಿಸಲಾಗಿತ್ತು.  ಈ ಸಂದರ್ಭದಲ್ಲಿ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಆಟಗಾರರು ಮೋದಿಯವರಿಗೆ ವಿಶ್ವಕಪ್ ನೀಡಿದರು. ಪ್ರಧಾನಿಯವರು ಎಲ್ಲರನ್ನೂ ಅಭಿನಂದಿಸಿದರು. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ,  ಕಾರ್ಯದರ್ಶಿ ಜಯ್ ಶಾ ಅವರೂ ಈ ಸಂದರ್ಭದಲ್ಲಿದ್ದರು.

ಮುಂಬೈಚಾ ರಾಜಾ ರೋಹಿತ್ ಶರ್ಮಾ

ವಾಂಖೆಡೆ ಕ್ರೀಡಾಂಗಣದಲ್ಲಿ ಸೇರಿದ್ದ  ಜನಸ್ತೋಮವು ಎಂದಿನಂತೆ ‘ಸಚಿನ್‌..ಸಚಿನ್‌..‘  ಎಂದು ಕೂಗುತ್ತಲೇ ಇದ್ದರು. 

ಅದರೊಂದಿಗೆ ‘ಮುಂಬೈಚಾ ರಾಜಾ ರೋಹಿತ್ ಶರ್ಮಾ‘ ಮತ್ತು ‘ಇಂಡಿಯಾ..ಇಂಡಿಯಾ‘ ಎಂಬ ಘೋಷಣೆಗಳೂ ಮೊಳಗಿದವು. ‘ಚಕ್‌ ದೇ ಇಂಡಿಯಾ..‘ ಹಾಡಿನ ಸಾಲುಗಳೂ ಪ್ರತಿಧ್ವನಿಸಿದವು.

2011ರಲ್ಲಿ ಇದೇ ಕ್ರೀಡಾಂಗಣದಲ್ಲಿ ಏಕದಿನ ವಿಶ್ವಕಪ್ ಫೈನಲ್‌ ನಡೆದಿತ್ತು. ಆ ಪಂದ್ಯದಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಭಾರತ ತಂಡವು ಜಯಭೇರಿ ಬಾರಿಸಿತ್ತು. 

₹ 125 ಕೋಟಿ ನಗದು
ವಾಂಖೆಡೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ವಿಜೇತ ತಂಡಕ್ಕೆ ₹ 125 ಕೋಟಿ ಚೆಕ್ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.