ದುಬೈ: ರನ್ ಬರದಿಂದ ಬಳಲುತ್ತಿದ್ದ ಟೀಮ್ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ, ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ದುಬೈ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸೂಪರ್ ಫೋರ್ ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಅರ್ಧಶತಕ ಗಳಿಸಿದ ಅವರು, ತಮಗೀಗ ಉತ್ಸಾಹ ಮರಳಿದೆ ಎಂದು ಹೇಳಿಕೊಂಡಿದ್ದಾರೆ.
44 ಎಸೆತ ಎದುರಿಸಿದ ಕೊಹ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 60 ರನ್ ಗಳಿಸಿ ಕೊನೆಯ ಓವರ್ ತನಕ ಆಡಿದ್ದರು.
ಗುಂಪು ಹಂತದ ಎರಡು ಪಂದ್ಯಗಳಲ್ಲಿ ಅವರು 35 ಹಾಗೂ ಅಜೇಯ 59 ರನ್ ಗಳಿಸಿದ್ದರು.
ಪಂದ್ಯದ ಬಳಿಕ ಮಾತನಾಡಿದ ಅವರು, ‘ಟೀಕೆಗಳ ಬಗ್ಗೆ ನಾನೆಂದಿಗೂ ತಲೆ ಕೆಡಿಸಿಕೊಂಡಿಲ್ಲ. 14 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ಇದು ಆಕಸ್ಮಿಕವಲ್ಲ. ಜನರಿಗೆ ಅವರದ್ದೇ ಆದ ಅಭಿಪ್ರಾಯಗಳಿವೆ. ಆದರೆ ಅದು ನನ್ನ ಸಂತಸಕ್ಕೆ ಅಡ್ಡಿಯಾಗುವುದಿಲ್ಲ’ ಎಂದು ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದಿದ್ದ ಅವರು ಏಷ್ಯಾ ಕಪ್ ಟೂರ್ನಿಯಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ.
‘ತಂಡದಿಂದ ಕೆಲ ಕಾಲ ಹೊರಗುಳಿದಿದ್ದು ವಿಶ್ರಾಂತಿಯನ್ನು ನೀಡಿತು. ಅದರ ಅರ್ಥ ಜೀವನ ಅಲ್ಲಿಗೆ ಕೊನೆಯಾಯಿತು ಎಂದಲ್ಲ. ನಾನು ತಂಡಕ್ಕೆ ಮರಳಿದಾಗ ಇಲ್ಲಿನ ಪರಿಸರ ಅದ್ಭುತವಾಗಿ ಕಾಣಿಸಿತು. ಇದು ನನ್ನಲ್ಲಿ ಉತ್ಸಾಹವನ್ನು ಮರಳಿಸಿತು. ನಾನು ಈ ಕ್ಷಣ ಮತ್ತೊಮ್ಮೆ ಆಡಲು ಇಷ್ಟಪಡುತ್ತೇನೆ. ಬ್ಯಾಟಿಂಗ್ ಅನ್ನು ಇಷ್ಟಪಡುತ್ತಿದ್ದೇನೆ’ ಎಂದು ಕೊಹ್ಲಿ ಹೇಳಿದ್ದಾರೆ.
ಭಾನುವಾರ ರಾತ್ರಿ ನಡೆದ ರೋಚಕ ಪಂದ್ಯದಲ್ಲಿ ಪಾಕಿಸ್ತಾನ 5 ವಿಕೆಟ್‌ಗಳಿಂದ ಜಯ ಗಳಿಸಿದೆ. ವಿರಾಟ್ ಕೊಹ್ಲಿ ಅರ್ಧಶತಕದ (60; 44ಎ) ಬಲದಿಂದ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 181 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಾಕ್ ತಂಡವು 19.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 182 ರನ್ ಗಳಿಸಿ ಗೆದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.