ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ಬುಧವಾರ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಎರಡು ದಶಕಗಳ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿರಾಮ ಹಾಕಿದ್ದಾರೆ.
ಮಿಥಾಲಿ ಅವರು ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು 2005 ಮತ್ತು 2017ರಲ್ಲಿ ಫೈನಲ್‌ವರೆಗೂ ಮುನ್ನಡೆಸಿದ್ದರು.
16ನೇ ವಯಸ್ಸಿನಲ್ಲಿ ಮಿಥಾಲಿ ಮೊದಲ ಬಾರಿಗೆ ಭಾರತ ತಂಡದ ಪರವಾಗಿ ಕಣಕ್ಕಿಳಿದಿದ್ದರು. 1999ರಲ್ಲಿ ಐರ್ಲೆಂಡ್ ವಿರುದ್ಧ ನಡೆದ ಪಂದ್ಯವು ಅವರ ಮೊದಲ ಅಂತರರಾಷ್ಟ್ರೀಯ ಪಂದ್ಯ ಹಾಗೂ ಈ ವರ್ಷ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯವು ಕೊನೆಯ ಪಂದ್ಯ. ಆ ಪಂದ್ಯದಲ್ಲಿ ಮಿಥಾಲಿ 68 ರನ್ ಗಳಿಸಿದ್ದರು.
39 ವರ್ಷ ವಯಸ್ಸಿನ ಆಟಗಾರ್ತಿ ಮಿಥಾಲಿ ಅವರು 232 ಏಕದಿನ ಪಂದ್ಯಗಳಲ್ಲಿ ಒಟ್ಟು 7,805 ರನ್ ದಾಖಲಿಸಿದ್ದಾರೆ. ಭಾರತ ತಂಡದಲ್ಲಿ 12 ಟೆಸ್ಟ್‌ಗಳು ಹಾಗೂ 89 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ಅವರು 12 ಟೆಸ್ಟ್ ಪಂದ್ಯಗಳಲ್ಲಿ 699 ರನ್ ಗಳಿಸಿದ್ದಾರೆ. 2002ರಲ್ಲಿ ಇಂಗ್ಲೆಂಡ್ ವಿರುದ್ಧ ದಾಖಲಿಸಿದ 214 ರನ್, ಅವರ ವೃತ್ತಿ ಜೀವನದ ಗರಿಷ್ಠ ರನ್ ಸಾಧನೆಯಾಗಿದೆ.
ಏಕದಿನ ವಿಶ್ವಕಪ್ ಟೂರ್ನಿಯ ಬೆನ್ನಲ್ಲೇ ಮಿಥಾಲಿ ನಿವೃತ್ತಿ ಘೋಷಿಸುವ ಸಾಧ್ಯತೆ ದಟ್ಟವಾಗಿತ್ತು. ಅವರು ಟಿ20 ಮಾದರಿಯ ಕ್ರಿಕೆಟ್‌ನಿಂದ ಈಗಾಗಲೇ ನಿವೃತ್ತರಾಗಿದ್ದಾರೆ. ಈಗ ಜೀವನದ ಎರಡನೇ ಇನಿಂಗ್ಸ್ ಆರಂಭಕ್ಕೆ ಶುಭ ಹಾರೈಕೆಗಳನ್ನು ಕೋರಿದ್ದಾರೆ.
'ಭಾರತದ ನೀಲಿ ಜೆರ್ಸಿ ಧರಿಸಿ ದೇಶವನ್ನು ಪ್ರತಿನಿಧಿಸುವುದು ಅತಿ ದೊಡ್ಡ ಗೌರವವೆಂಬುದು ಚಿಕ್ಕಂದಿನಿಂದಲೂ ನನ್ನೊಳಗೆ ಬೆಳೆಯಿತು. ಈ ಪಯಣದ ತುಂಬೆಲ್ಲ ಏಳು ಮತ್ತು ಕೆಲವು ಕಡೆ ಬೀಳುಗಳನ್ನು ಕಂಡಿದ್ದೇನೆ. ಪ್ರತಿಯೊಂದು ಘಟನೆಯೂ ನನಗೆ ಹೊಸದನ್ನು ಕಲಿಸಿದೆ ಹಾಗೂ ಕಳೆದ 23 ವರ್ಷಗಳು ನನ್ನ ಜೀವಮಾನದ ಸವಾಲಿನ ಮತ್ತು ಸಂಭ್ರದ ವಸಂತಗಳಾಗಿವೆ' ಎಂಬ ಸಾಲುಗಳ ಜೊತೆಗೆ ಮಿಥಾಲಿ ರಾಜ್ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ.
'ಎಲ್ಲ ಪಯಣಗಳ ರೀತಿಯಲ್ಲೇ ಇದೂ ಸಹ ಕೊನೆಯಾಗಲೇ ಬೇಕಿದೆ. ಈ ದಿನ ನಾನು ಎಲ್ಲ ಮಾದರಿಗಳ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಳಾಗುತ್ತಿದ್ದೇನೆ' ಎಂದು ಪ್ರಕಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.