ADVERTISEMENT

ಆಸ್ಟ್ರೇಲಿಯಾ ಎದುರಿನ ಕ್ರಿಕೆಟ್‌ ಸರಣಿಗಳಿಗೆ ತಂಡ ಪ್ರಕಟ: ರಾಹುಲ್‌ಗೆ ಸ್ಥಾನ

ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌

ಪಿಟಿಐ
Published 15 ಫೆಬ್ರುವರಿ 2019, 14:04 IST
Last Updated 15 ಫೆಬ್ರುವರಿ 2019, 14:04 IST
ಕೆ.ಎಲ್‌.ರಾಹುಲ್‌
ಕೆ.ಎಲ್‌.ರಾಹುಲ್‌    

ಮುಂಬೈ: ಇಂಗ್ಲೆಂಡ್‌ ಲಯನ್ಸ್‌ ಎದುರಿನ ಎರಡು ‘ಟೆಸ್ಟ್‌’ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಕರ್ನಾಟಕದ ಕೆ.ಎಲ್‌.ರಾಹುಲ್‌, ತವರಿನಲ್ಲಿ ನಡೆಯುವ ಆಸ್ಟ್ರೇಲಿಯಾ ಎದುರಿನ ಏಕದಿನ ಮತ್ತು ಟ್ವೆಂಟಿ–20 ಸರಣಿಗಳಿಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಎಂ.ಎಸ್‌.ಕೆ.ಪ್ರಸಾದ್‌ ನೇತೃತ್ವದ ರಾಷ್ಟ್ರೀಯ ಸೀನಿಯರ್‌ ಆಯ್ಕೆ ಸಮಿತಿಯು ಶುಕ್ರವಾರ ಟ್ವೆಂಟಿ–20 ಸರಣಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಮುಂಬೈನ ಮಯಂಕ್‌ ಮಾರ್ಕಂಡೆಗೆ ಮೊದಲ ಬಾರಿಗೆ ಅವಕಾಶ ನೀಡಿದೆ.

ಏಕದಿನ ಸರಣಿಯ ಮೊದಲ ಎರಡು ಮತ್ತು ನಂತರದ ಮೂರು ಪಂದ್ಯಗಳಿಗೆ ಪ್ರತ್ಯೇಕ ತಂಡಗಳನ್ನು ಆಯ್ಕೆ ಮಾಡಲಾಗಿದೆ.

ADVERTISEMENT

ಅನುಭವಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಅವರನ್ನು ಏಕದಿನ ತಂಡದಿಂದ ಕೈ ಬಿಡಲಾಗಿದೆ.

‘ಕಾಫಿ ವಿತ್‌ ಕರಣ್‌’ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ರಾಹುಲ್‌, ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಅವರನ್ನು ಬಿಸಿಸಿಐ, ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಿಂದ ಅಮಾನತು ಮಾಡಿತ್ತು. ಬೇಷರತ್‌ ಕ್ಷಮೆ ಕೇಳಿದ ಮೇಲೆ ನಿಷೇಧ ರದ್ದುಪಡಿಸಲಾಗಿತ್ತು. ಬಳಿಕ ಇಂಗ್ಲೆಂಡ್‌ ಲಯನ್ಸ್‌ ಎದುರಿನ ಸರಣಿಯಲ್ಲಿ ಆಡಿದ್ದ ರಾಹುಲ್‌ ಎರಡೂ ಪಂದ್ಯಗಳಲ್ಲಿ ಮಿಂಚಿದ್ದರು. ಹೀಗಾಗಿ ಅವಕಾಶ ಒಲಿದಿದೆ.

21 ವರ್ಷದ ಲೆಗ್‌ ಸ್ಪಿನ್ನರ್‌ ಮಾರ್ಕಂಡೆ, ಇಂಗ್ಲೆಂಡ್‌ ಲಯನ್ಸ್‌ ಎದುರಿನ ಎರಡನೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ ಕಬಳಿಸಿ ಭಾರತ ‘ಎ’ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಲೆಗ್‌ ಸ್ಪಿನ್ನರ್‌ ಮಾರ್ಕಂಡೆ, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡಿದ್ದಾರೆ.

ನ್ಯೂಜಿಲೆಂಡ್‌ ಎದುರಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ನಾಯಕ ವಿರಾಟ್‌ ಕೊಹ್ಲಿ ಮತ್ತು ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ತಂಡಕ್ಕೆ ಮರಳಿದ್ದಾರೆ. ಚೈನಾಮನ್‌ ಶೈಲಿಯ ಬೌಲರ್‌ ಕುಲದೀಪ್‌ ಯಾದವ್‌, ಟ್ವೆಂಟಿ–20 ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ.

ಮಧ್ಯಮ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ಗೆ ಟ್ವೆಂಟಿ–20 ಸರಣಿ ಮತ್ತು ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ನೀಡಿಲ್ಲ. ಅವರು ಮೂರು, ನಾಲ್ಕು ಮತ್ತು ಐದನೇ ಪಂದ್ಯಗಳಲ್ಲಿ ಆಡಲಿದ್ದಾರೆ.

ಕರ್ನಾಟಕದ ಮನೀಷ್‌ ಪಾಂಡೆ ಮತ್ತು ಮಯಂಕ್‌ ಅಗರವಾಲ್‌ ಅವರಿಗೂ ಅವಕಾಶ ನಿರಾಕರಿಸಲಾಗಿದೆ.

ಭಾರತ ತಂಡ ಆಸ್ಟ್ರೇಲಿಯಾ ಎದುರು ಎರಡು ಪಂದ್ಯಗಳ ಟ್ವೆಂಟಿ–20 ಮತ್ತು ಐದು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಚುಟುಕು ಮಾದರಿಯ ಮೊದಲ ಪಂದ್ಯ ಫೆಬ್ರುವರಿ 24ರಂದು ನಡೆಯಲಿದೆ.

ತಂಡ ಇಂತಿದೆ: ಟ್ವೆಂಟಿ–20: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆ.ಎಲ್‌.ರಾಹುಲ್‌, ಶಿಖರ್‌ ಧವನ್‌, ರಿಷಭ್‌ ಪಂತ್‌, ದಿನೇಶ್‌ ಕಾರ್ತಿಕ್‌, ಮಹೇಂದ್ರ ಸಿಂಗ್‌ ಧೋನಿ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ಕೃಣಾಲ್‌ ಪಾಂಡ್ಯ, ವಿಜಯ್‌ ಶಂಕರ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬೂಮ್ರಾ, ಉಮೇಶ್‌ ಯಾದವ್‌, ಸಿದ್ದಾರ್ಥ್‌ ಕೌಲ್‌ ಮತ್ತು ಮಯಂಕ್‌ ಮಾರ್ಕಂಡೆ.

ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಿಗೆ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪ ನಾಯಕ), ಶಿಖರ್‌ ಧವನ್‌, ಅಂಬಟಿ ರಾಯುಡು, ಕೇದಾರ್‌ ಜಾಧವ್‌, ಮಹೇಂದ್ರ ಸಿಂಗ್‌ ಧೋನಿ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್‌ ಶಮಿ, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌, ವಿಜಯ್‌ ಶಂಕರ್‌, ರಿಷಭ್‌ ಪಂತ್‌, ಸಿದ್ದಾರ್ಥ್‌ ಕೌಲ್‌ ಮತ್ತು ಕೆ.ಎಲ್‌.ರಾಹುಲ್‌.

ಮೂರು, ನಾಲ್ಕು ಮತ್ತು ಐದನೇ ಪಂದ್ಯಗಳಿಗೆ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪ ನಾಯಕ), ಶಿಖರ್‌ ಧವನ್‌, ಅಂಬಟಿ ರಾಯುಡು, ಕೇದಾರ್‌ ಜಾಧವ್‌, ಮಹೇಂದ್ರ ಸಿಂಗ್‌ ಧೋನಿ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ವಿಜಯ್‌ ಶಂಕರ್‌, ಕೆ.ಎಲ್‌.ರಾಹುಲ್‌ ಮತ್ತು ರಿಷಭ್‌ ಪಂತ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.