ಮಾಂತ್ರಿಕ ಬ್ಯಾಟಿಂಗ್ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿದ್ದ ಸಚಿನ್ ತೆಂಡೂಲ್ಕರ್ ಮಾನವೀಯ ಕಾರ್ಯಗಳಿಗೂ ಹೆಸರಾದವರು. ಇದೇಕಾರಣಕ್ಕಾಗಿ ಅವರುಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಧ್ಯಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಬುಡಕಟ್ಟು ಜನಾಂಗದ ಸುಮಾರು 560 ಮಕ್ಕಳಿಗೆ ನೆರವಾಗುತ್ತಿದ್ದಾರೆ.
‘ಎನ್‌ಜಿಒ ಪರಿವಾರ್’ ಎಂಬ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಸಚಿನ್ ಅವರ ‘ತೆಂಡೂಲ್ಕರ್ ಫೌಂಡೇಷನ್‘ ಕೈಜೋಡಿಸಿದೆ.‘ಎನ್‌ಜಿಒ ಪರಿವಾರ‘ ಸಂಸ್ಥೆಯು ಮಧ್ಯಪ್ರದೇಶದ ಸೆಹೊರ್ ಜಿಲ್ಲೆಯ ಕುಗ್ರಾಮಗಳಲ್ಲಿ ‘ಸೇವಾ ಕುಟೀರ’ಗಳನ್ನು ನಿರ್ಮಿಸಿದೆ. ಜಿಲ್ಲೆಯ ಸೇವಾನಿಯಾ, ಬೀಲ್‌ಪಟ್ಟಿ, ಖಾಪಾ, ನಯಾಪುರ ಹಾಗೂ ಜಮುನ್‌ಜೀಲ್ ಗ್ರಾಮಗಳ ಮಕ್ಕಳು ತೆಂಡೂಲ್ಕರ್ ಫೌಂಡೇಶನ್ ನೆರವಿನಿಂದ ಪೌಷ್ಟಿಕ ಆಹಾರ ಹಾಗೂ ಶಿಕ್ಷಣದ ಸೌಲಭ್ಯ ಪಡೆಯುತ್ತಿದ್ದಾರೆ. ಇಲ್ಲಿಯ ಬಹುತೇಕ ಮಕ್ಕಳು ಬರೇಲಾ ಭಿಲ್ ಮತ್ತು ಗೊಂಡ್ ಸಮುದಾಯಕ್ಕೆ ಸೇರಿದವರು.
‘ಸಚಿನ್ ಅವರ ಈ ಉಪಕ್ರಮವು ಅಪೌಷ್ಟಿಕತೆ ಮತ್ತು ಅನಕ್ಷರತೆಯಿಂದ ಬಳಲುತ್ತಿರುವ ಮಧ್ಯಪ್ರದೇಶದ ಬುಡಕಟ್ಟು ಮಕ್ಕಳ ಬಗ್ಗೆ ಅವರ ಕಾಳಜಿಗೆ ಸಾಕ್ಷಿಯಾಗಿದೆ‘ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಮಕ್ಕಳ ಉದ್ದೇಶಕ್ಕಾಗಿ ಸಚಿನ್ ಮಾಡಿರುವ ಕಾರ್ಯ, ಅದರಲ್ಲೂ ವಿಶೇಷವಾಗಿ ಹಿಂದುಳಿದ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವವರಿಗಾಗಿ ನೆರವಿನ ಹಸ್ತ ಚಾಚಿರುವುದು ಶ್ಲಾಘನೀಯ ಎಂದು‘ಎನ್‌ಜಿಒ ಪರಿವಾರ್’ ಅಭಿಪ್ರಾಯಪಟ್ಟಿದೆ.
ವಿಶ್ವಸಂಸ್ಥೆಯ ಮಕ್ಕಳ ನಿಧಿಯ(ಯುನಿಸೆಫ್) ಸದ್ಭಾವನಾ ರಾಯಭಾರಿಯಾಗಿ ಸಚಿನ್ ‘ಪ್ರಾಥಮಿಕ ಬಾಲ್ಯದ ಬೆಳವಣಿಗೆ’ಯಂತಹ ವಿಷಯಗಳ ಕುರಿತು ಮಾತನಾಡುತ್ತಲೇ ಬಂದಿದ್ದಾರೆ.
ಬಡ ಮಕ್ಕಳ ವಿಷಯದಲ್ಲಿ ಸಚಿನ್ ಅವರು ಸ್ಪಂದಿಸಿದಹಲವು ಉದಾಹರಣೆಗಳಿವೆ. ಇತ್ತೀಚೆಗೆ ಮುಂಬೈನ ಮಕ್ಕಳ ಆಸ್ಪತ್ರೆಯಲ್ಲಿ ಆರ್ಥಿಕವಾಗಿ ಹಿಂದುಳಿದವರ ಮಕ್ಕಳ ಚಿಕಿತ್ಸೆಗೆ ನೀಡಿದ ಹಣಕಾಸು ನೆರವೂ ಅದರಲ್ಲಿ ಒಂದು.
2019ರ ಡಿಸೆಂಬರ್‌ನಲ್ಲಿ ಸಚಿನ್ ಅವರು ‘ಸ್ಪ್ರೆಡ್ಡಿಂಗ್ ಹ್ಯಾಪಿನೆಸ್ ಇಂಡಿಯಾ ಫೌಂಡೇಶನ್’ ಮೂಲಕ ಡಿಜಿಟಲ್ ತರಗತಿಗಳನ್ನು ನಡೆಸಲು, ಆಧುನಿಕ ಕಲಿಕಾ ಸೌಲಭ್ಯಗಳನ್ನು ಒದಗಿಸಲು ಮುಂಬೈನ ಶ್ರೀ ಗಾಡಗೆ ಮಹಾರಾಜ ಆಶ್ರಮ ಶಾಲೆಯಲ್ಲಿ ಸೌರ ಬೆಳಕಿನ (ಸೋಲಾರ್) ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.