ADVERTISEMENT

ಕೋರಿ...ಸಾಮಾನ್ಯಳಲ್ಲ ಈ ಪೋರಿ

ಬಸವರಾಜ ದಳವಾಯಿ
Published 14 ಜುಲೈ 2019, 19:30 IST
Last Updated 14 ಜುಲೈ 2019, 19:30 IST
   

ಕೆಲವೇ ದಿನಗಳ ಹಿಂದೆ ಆ ಬಾಲಕಿಯ ಹೆಸರನ್ನು ಯಾರೂ ಕೇಳಿರಲಿಲ್ಲ. ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಅರ್ಹತಾ ರೌಂಡ್‌ ದಾಟಿ ಬಂದಿದ್ದ ಈ ಶಾಲಾ ವಿದ್ಯಾರ್ಥಿನಿ ಮೊದಲ ಸುತ್ತಿನಲ್ಲೇ ಖ್ಯಾತನಾಮ ಆಟಗಾರ್ತಿಯನ್ನು ಸೋಲಿಸಿ ದಿಢೀರನೇ ಮನೆ ಮಾತಾದಳು. 15 ವರ್ಷದ ಕೋರಿ ಗಫ್‌,ಟೆನಿಸ್‌ ಲೋಕದಲ್ಲಿ ಪ್ರಸಿದ್ಧಿಗೆ ಬಂದಿದ್ದುಐದು ಬಾರಿಯ ಚಾಂಪಿಯನ್‌ ಆಗಿದ್ದ ವೀನಸ್‌ ವಿಲಿಯಮ್ಸ್‌ ಅವರನ್ನು ಸೋಲಿಸುವ ಮೂಲಕ. ಕೋರಿ ಆಟಕ್ಕೆ ಆದರ್ಶವನ್ನಾಗಿಟ್ಟುಕೊಂಡವರು ವೀನಸ್‌ ಮತ್ತು ಸೆರೆನಾ ಸೋದರಿಯರನ್ನೇ!

ಪೀಟ್‌ ಸಾಂಪ್ರಸ್‌, ಜಾನ್‌ ಮೆಕೆನ್ರೊ, ಅಗಾಸ್ಸಿ, ಮಾರ್ಟಿನಾ ನವ್ರಟಿಲೋವಾ, ಕ್ರಿಸ್‌ ಎವರ್ಟ್‌ ಲಾಯ್ಡ್‌ ಮತ್ತಿತರ ದಿಗ್ಗಜ ಆಟಗಾರರ ಹಾದಿಯಲ್ಲಿ ನಡೆಯುವ ಆಶಾಭಾವ ಮೂಡಿಸಿದ್ದಾಳೆ.

2004ರ ಮಾರ್ಚ್‌ 13ರಂದು ಜಾರ್ಜಿಯಾದಲ್ಲಿ ಜನಿಸಿದವರು ಗಫ್‌. ಮನೆಯಲ್ಲಿ ಅಥ್ಲೆಟಿಕ್ಸ್‌ಗೆ ಪೂರಕವಾದ ವಾತಾವರಣ. ತಂದೆ ಕೋರಿ ಬ್ಯಾಸ್ಕೆಟ್‌ಬಾಲ್‌ ಆಟಗಾರ; ತಾಯಿ ಕ್ಯಾಂಡಿ ಅವರು ಅಥ್ಲೀಟ್‌. ಆದರೆ ಗಫ್‌ ಅವರನ್ನು ಸೆಳೆದದ್ದು ಟೆನಿಸ್‌. ಅದು 2009ರ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿ. ಸೆರೆನಾ ವಿಲಿಯಮ್ಸ್ ಮಹಿಳಾ ಸಿಂಗಲ್ಸ್ ಚಾಂಪಿಯನ್‌ ಪಟ್ಟ ಧರಿಸಿದ್ದರು. ಅವರ ಆಟವನ್ನು ಟಿವಿಯಲ್ಲಿ ಕಣ್ತುಂಬಿಕೊಂಡಿದ್ದ ಗಫ್‌ಳ ಆಸೆಗೆ ರೆಕ್ಕೆ ಮೂಡಿತು. ಎಂಟು ವರ್ಷದವರಿದ್ದಾಗ ‘ಲಿಟಲ್‌ ಮೊ’ ಎಂಬ ಟ್ರೋಫಿಯನ್ನು ಕೋರಿ ಗಫ್‌ ಗೆದ್ದುಕೊಂಡಳು. ಅಲ್ಲಿಗೆ ಟೆನಿಸ್‌ನ್ನೇ ವೃತ್ತಿಯನ್ನಾಗಿಸಿಕೊಳ್ಳುವ ಕನಸಿನ ಬೀಜ ಮೊಳಕೆಯೊಡೆಯಿತು. 10ನೇ ವಯಸ್ಸಿನಲ್ಲಿ ಖ್ಯಾತ ಕೋಚ್‌ ಪ್ಯಾಟ್ರಿಕ್‌ ಮೌರಾಟೊಗ್ಲು ಅವರು ನಡೆಸುತ್ತಿದ್ದ ಅಕಾಡೆಮಿ ಸೇರಿಕೊಂಡು ತರಬೇತಿ ಆರಂಭಿಸಿದಳು.

ADVERTISEMENT

‘ 2014ರಲ್ಲಿ ಗಫ್‌ ಅಕಾಡೆಮಿ ಸೇರಿಕೊಂಡಳು. ಆಕೆಗಿರುವ ಆಟದ ಮೇಲಿನ ಬದ್ಧತೆ, ಕ್ರೀಡಾಪ್ರೀತಿ, ಹೋರಾಟದ ಹುರುಪು ನನ್ನನ್ನು ತುಂಬಾ ಪ್ರಭಾವಿಸಿತ್ತು’ ಎಂದು ಕೋಚ್‌ ಪ್ಯಾಟ್ರಿಕ್‌ ನುಡಿಯುತ್ತಾರೆ. ‘ಕೊಕೊ ಗಫ್‌’ ಎಂಬ ನಿಕ್‌ ನೇಮ್‌ ಹೊಂದಿರುವ ಗಫ್‌ ಜುಲೈ 2014ರಲ್ಲಿ ಅಮೆರಿಕ ಟೆನಿಸ್‌ ಅಸೋಸಿಯೇಷನ್‌ನ ಕ್ಲೇ ಕೋರ್ಟ್‌ ರಾಷ್ಟ್ರೀಯ ಚಾಂಪಿಯನ್‌ ಪಟ್ಟ ಧರಿಸಿದಳು. ಈ ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ್ತಿ (10 ವರ್ಷ, ನಾಲ್ಕು ತಿಂಗಳು) ಎಂಬ ಹಿರಿಮೆ ಅವಳದ್ದಾಗಿದೆ. ಅಲ್ಲಿಂದ ಅವರ ಆಟದ ವೇಗಕ್ಕೆ ಪ್ರಶಸ್ತಿಗಳು ಒಲಿಯಲಾರಂಭಿಸಿದವು.

2017ರ ಅಮೆರಿಕಓಪನ್‌ ಜೂನಿಯರ್‌ ಸಿಂಗಲ್ಸ್ ಫೈನಲ್‌ ತಲುಪಿದ್ದ ಗಫ್‌, ಅಮಂಡಾ ಅನಿಸಿಮೊವಾ ವಿರುದ್ಧ ಸೋಲು ಕಂಡಿದ್ದಳು. ಆದರೆ ಟೂರ್ನಿಯ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿನಲ್ಲೇ ಜೂನಿಯರ್‌ ಸಿಂಗಲ್ಸ್ ಫೈನಲ್‌ ತಲುಪಿದ ಆಟಗಾರ್ತಿ ಎಂಬ ದಾಖಲೆ ಅವಳದ್ದಾಯಿತು. 2018ರ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಜೂನಿಯರ್‌ ಸಿಂಗಲ್ಸ್ ಪ್ರಶಸ್ತಿ ಅವರ ಕೈತಪ್ಪಲಿಲ್ಲ. ಆ ಬಳಿಕ ಆಕೆಗೆ ವಿಶ್ವದ ಜೂನಿಯರ್‌ ಸಿಂಗಲ್ಸ್ ಕ್ರಮಾಂಕದಲ್ಲಿ ಮೊದಲ ಸ್ಥಾನ ದಕ್ಕಿತು.

2018ರ ಮೇ ತಿಂಗಳಲ್ಲಿ ನಡೆದ ಆಸ್ಪ್ರೇಲಿಯಾ ಓಪನ್‌ ಟೂರ್ನಿಯ ಮೂಲಕ ಐಟಿಎಫ್‌ ಮಹಿಳಾ ಸರ್ಕೀಟ್‌ಗೆ ಅವರು ಕಾಲಿಟ್ಟರು. ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಅರ್ಹತಾ ಸುತ್ತಿನಲ್ಲೇ ಹೊರಬಿದ್ದಿದ್ದ ಗಫ್‌ ಅವರು 2019ರ ವಿಂಬಲ್ಡನ್‌ ಟೂರ್ನಿಯ ಮುಖ್ಯ ಸುತ್ತಿಗೆ ಅರ್ಹತೆ ಗಳಿಸುವಲ್ಲಿ ಸಫಲಳಾದಳು. ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ್ತಿ ಆಕೆ. ವಿಶ್ವದ 313ನೇ ಕ್ರಮಾಂಕದ ಆಟಗಾರ್ತಿ, ಎರಡು ಮತ್ತು ಮೂರನೇ ಸುತ್ತುಗಳಲ್ಲಿ ಎದುರಾಳಿಗಳನ್ನು ಸದೆಬಡಿದ ಚಾಕಚಕ್ಯತೆಗೆ ಜಗತ್ತು ನಿಬ್ಬೆರಗಾಯಿತು. ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸಿಮೊನಾ ಹಲೆಪ್‌ (ಅಂತಿಮವಾಗಿ ಫೈನಲ್‌ಗೇರಿದ ಆಟಗಾರ್ತಿ) ಅವರಿಗೆ ಸೋತರೂ ಗಫ್‌ ಅಷ್ಟರೊಳಗೆ ಪ್ರಸಿದ್ಧಿ ಪಡೆದಳು. ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಳು.

1991ರಲ್ಲಿ ಸ್ವದೇಶದ ಆಟಗಾರ್ತಿ ಜೆನಿಫರ್‌ ಕ್ಯಾಪ್ರಿಯಾಟಿ ಬಳಿಕ ವಿಂಬಲ್ಡನ್‌ ಟೂರ್ನಿಯಲ್ಲಿ ಪಂದ್ಯವೊಂದನ್ನು ಗೆದ್ದ ಅತಿ ಕಿರಿಯ ಆಟಗಾರ್ತಿ ಕೋರಿ. ಕ್ಯಾಪ್ರಿಯಾಟಿ ಅವರು 15ನೇ ವಯಸ್ಸಿನಲ್ಲೇ ಮಾರ್ಟಿನಾ ನವ್ರಾಟಿಲೊವಾ ಅವರನ್ನು ಮಣಿಸಿದ್ದರು.

ಬೆನ್ನುಬಿದ್ದಿರುವ ಜಾಹೀರಾತು ಕಂಪನಿಗಳು

ಕೋರಿಯ ಈ ಪ್ರಭಾವಳಿಗೆ ಬೆರಗಾಗಿರುವ ಜಾಹೀರಾತು ಕಂಪೆನಿಗಳು ಅವಳ ಬೆನ್ನು ಬಿದ್ದಿವೆ. ಆಕೆಯ ಸದ್ಯದ ನಿವ್ವಳ ಆದಾಯ ₹ 3 ಕೋಟಿ 50 ಲಕ್ಷ (500 ಸಾವಿರ ಡಾಲರ್‌) ಎಂದು ಹೇಳಲಾಗಿದೆ. ನ್ಯೂ ಬ್ಯಾಲನ್ಸ್, ಟೆನಿಸ್ ರಾಕೆಟ್‌ ಉತ್ಪಾದನಾ ಕಂಪನಿ ‘ಹೆಡ್‌’ ಹಾಗೂ ಇಟಲಿಯ ಆಹಾರೋತ್ಪನ್ನ ಕಂಪನಿ ‘ಬ್ಯಾರಿಲ್ಲಾ’ ಜೊತೆ ಹಲವು ವರ್ಷಗಳ ಒಪ್ಪಂದಕ್ಕೆ ಕೋರಿ ಸಹಿ ಹಾಕಿದ್ದಾಳೆ. ‘ಫೋರ್ಬ್ಸ್’ ನಿಯತಕಾಲಿಕೆ ಪ್ರಕಾರಈ ಎಲ್ಲ ಒಪ್ಪಂದಗಳಿಂದ 2019ರಲ್ಲಿ ಕೋರಿ ಅವರು ₹ 7 ಕೋಟಿ (1 ಮಿಲಿಯನ್‌ ಡಾಲರ್‌) ಆದಾಯ ಗಳಿಸಿದ್ದಾಳೆ. ಬರುವ ವರ್ಷದಲ್ಲಿ ಇದು ದ್ವಿಗುಣಗೊಳ್ಳುವುದರಲ್ಲಿ ಅನುಮಾನವಿಲ್ಲ.

‘20ರ ವಯಸ್ಸಿಗೆ ಈ ಆಟಗಾರ್ತಿ ವಿಶ್ವದ ನಂ.1 ಪಟ್ಟ ಧರಿಸದಿದ್ದರೆ ಅದೊಂದು ಅಚ್ಚರಿಯ ವಿಷಯ’ ಎಂದು ಹಿರಿಯ ಆಟಗಾರ ಜಾನ್‌ ಮೆಕೆನ್ರೊ ಭವಿಷ್ಯ ನುಡಿದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಆಟದ ಪಕ್ವತೆಯನ್ನು ಮೈಗೂಡಿಸಿಕೊಂಡಿರುವ ಕೋರಿ ಗಫ್‌, ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಹಾದಿಯಲ್ಲಿ ದಿಟ್ಟ ಹೆಜ್ಜೆಯಿಟ್ಟಿದ್ದಾಳೆ.

ಪ್ರಮುಖ ಸಾಧನೆಗಳು

l ವಿಶ್ವ ಜೂನಿಯರ್‌ ಮಹಿಳಾ ಸಿಂಗಲ್ಸ್ ಕ್ರಮಾಂಕದಲ್ಲಿ ಅಗ್ರಸ್ಥಾನ

l ಎರಡು ಬಾರಿ ಜೂನಿಯರ್‌ ಗ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತೆ (2018ರ ಫ್ರೆಂಚ್‌ ಮತ್ತು ಅಮೆರಿಕಾ ಓಪನ್‌)

l 2017ರ ಅಮೆರಿಕಾ ಓಪನ್‌ ಟೂರ್ನಿಯ ಜೂನಿಯರ್‌ ಸಿಂಗಲ್ಸ್ ರನ್ನರ್‌ ಅಪ್‌

l ವಿಂಬಲ್ಡನ್‌ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಿದ ವಿಶ್ವದ ಅತಿ ಕಿರಿಯ ಆಟಗಾರ್ತಿ.

l 2018ರ ಅಮೆರಿಕಾ ಓಪನ್‌ ಮಿಶ್ರ ಡಬಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ಪ್ರವೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.