ಕಾನ್ಪುರ: ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಸತತ ಎರಡು ದಿನಗಳ ಆಟ ರದ್ದುಗೊಂಡ ಮೇಲೆ ಭಾರತ ಗೆಲುವಿನ ಪ್ರೇರಣೆ ಉಳಿಸಿಕೊಳ್ಳುವ ಬಗ್ಗೆ ಅನುಮಾನ ಮೂಡಿತ್ತು. ಮೊದಲ ದಿನ ಸಾಧ್ಯವಾಗಿದ್ದು 35 ಓವರುಗಳ ಆಟ. ತವರಿನ ಪಂದ್ಯಗಳಲ್ಲಿ ಭಾರತ ಪ್ರಾಬಲ್ಯ ಮೆರೆದರೂ, ಎರಡು ದಿನಗಳಷ್ಟೇ ಉಳಿದಿದ್ದು, ಫಲಿತಾಂಶ ಕ್ಷೀಣವೆಂದೇ ಭಾವಿಸಲಾಗಿತ್ತು.
ಗ್ರೀನ್‌ಪಾರ್ಕ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ಇನ್ನೂ ಉತ್ತಮವಾಗಿಯೇ ಇತ್ತು. ಬಾಂಗ್ಲಾದೇಶ 3 ವಿಕೆಟ್‌ಗೆ 107 ರನ್ ಗಳಿಸಿ ಆಟ ಮುಂದುವರಿಸಿತು ಕೂಡ. ಆದರೆ ನಾಲ್ಕನೇ ದಿನ ಭಾರತ ತಂಡ ಯಾರೂ ನಿರೀಕ್ಷಿಸದ ಹಾಗೆ ಆಕ್ರಮಣಕಾರಿ ಆಟವಾಡಿ ಬಾಂಗ್ಲಾದೇಶವನ್ನು ಇಕ್ಕಟ್ಟಿಗೆ ಸಿಲುಕಿಸಿತು. ದೂರವಾದಂತೆ ಕಂಡಿದ್ದ ಫಲಿತಾಂಶದ ಸಾಧ್ಯತೆ ಈಗ ದಟ್ಟವಾಗಿದೆ.
ಮೊದಲು ಬೌಲರ್‌ಗಳು ಅಮೋಘ ಪ್ರದರ್ಶನ ನೀಡಿ ಬಾಂಗ್ಲಾದೇಶವನ್ನು 75 ಓವರುಗಳ ಒಳಗೆ 233 ರನ್‌ಗಳಿಗೆ ಉರುಳಿಸಿದರು. ಭೋಜನ ವಿರಾಮ ಕಳೆದು ಒಂದು ಗಂಟೆಯ ನಂತರ ಭಾರತ ಎರಡನೇ ಇನಿಂಗ್ಸ್‌ಗೆ ಸಜ್ಜಾಯಿತು. ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ (50ಕ್ಕೆ3) ಮತ್ತು ಮೊಹಮ್ಮದ್ ಸಿರಾಜ್ (57ಕ್ಕೆ2) ಅವರು ಚೆಂಡಿನಲ್ಲಿ ಕರಾಮತ್ತು ಪ್ರದರ್ಶಿಸಿದರು. ಫೀಲ್ಡಿಂಗ್ ಕೂಡ ಮೆಚ್ಚುವಂತಿತ್ತು. ರೋಹಿತ್ ಶರ್ಮಾ ಮತ್ತು ಸಿರಾಜ್ ಹಿಡಿದ ಕ್ಯಾಚ್‌ಗಳು ಇದಕ್ಕೆ ನಿದರ್ಶನ. ಬಾಂಗ್ಲಾದೇಶ ನಿರೀಕ್ಷೆಗಿಂತ ಬೇಗ ಆಲೌಟ್ ಆಯಿತು. ಇದರ ನಡುವೆಯೂ ಬೆಳ್ಳಿ ರೇಖೆಯಂತೆ ಮೊಮಿನುಲ್ ಹಕ್ (ಔಟಾಗದೇ 107) ಮಾತ್ರ ಸ್ಫೂರ್ತಿಯುತ ಪ್ರದರ್ಶನ ನೀಡಿ ಶತಕ ಬಾರಿಸಿದರು. ಜಡೇಜ ಒಂದು ವಿಕೆಟ್ ಪಡೆದು 300ರ ಮೈಲಿಗಲ್ಲು ತಲುಪಿದರು.
ನಂತರ ಭಾರತದ ಬ್ಯಾಟರ್‌ಗಳದ್ದೇ ಅಬ್ಬರ, ಪ್ರವಾಸಿ ತಂಡವನ್ನು ಕಕ್ಕಾಬಿಕ್ಕಿಗೊಳಿಸಿತು. ಟಿ20 ಇನಿಂಗ್ಸ್ ರೀತಿ ಆಟಗಾರರು ಆಕ್ರಮಣಕ್ಕಿಳಿದರು. ಪಂದ್ಯ ಗೆದ್ದು ಟೆಸ್ಟ್ ಚಾಂಪಿಯನ್‌ಷಿಪ್ ಪಟ್ಟಿಯಲ್ಲಿ ತನ್ನ ಸ್ಥಾನ ಇನ್ನಷ್ಟು ಬಲಪಡಿಸಿಕೊಳ್ಳುವ ಇರಾದೆಯಿಂದ ಭಾರತ ಆಡಿದಂತೆ ಇತ್ತು.
ಯಶಸ್ವಿ ಜೈಸ್ವಾಲ್ (72, 51ಎ, 4x12, 6x2) ಮತ್ತು ಕೆ.ಎಲ್.ರಾಹುಲ್ (68, 43ಎ, 4x7, 6x2) ಮಿಂಚಿನ ಅರ್ಧ ಶತಕಗಳನ್ನು ಬಾರಿಸಿದರು. ರೋಹಿತ್ ಶರ್ಮಾ (23), ಶುಭಮನ್ ಗಿಲ್ (39) ಮತ್ತು ವಿರಾಟ್ ಕೊಹ್ಲಿ (47) ಅವರೂ ಆಕ್ರಮಣಕಾರಿ ಆಟದ ಲಹರಿಯಲ್ಲಿದ್ದು ಭಾರತದ ಸಾಂಘಿಕ ಪ್ರದರ್ಶನಕ್ಕೆ ಅಡಿಗೆರೆ ಎಳೆಯಿತು. ಭಾರತ ಬರೇ 34.4 ಓವರುಗಳಲ್ಲಿ 9 ವಿಕೆಟ್‌ಗೆ 285 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ಡ್ ಮಾಡಿಕೊಂಡಿತು. ಆಗ 45 ನಿಮಿಷಗಳ ಆಟ ಉಳಿದಿತ್ತು.
ಫಲಿತಾಂಶಕ್ಕೆ ತಂಡವೊಂದು ಎರಡನೇ ಇನಿಂಗ್ಸ್‌ನಲ್ಲಿ ವೇಗದ ಆಟವಾಡುವುದು ಮಾಮೂಲು. ಆದರೆ ಫಲಿತಾಂಶ ಪಡೆಯಲು ಮೊದಲ ಇನಿಂಗ್ಸ್‌ನಲ್ಲೇ ಬಿರುಸಿನ ಆಟಕ್ಕಿಳಿದು ಓವರಿನಲ್ಲಿ ಎಂಟು ರನ್‌ಗೂ ಹೆಚ್ಚು ವೇಗದಲ್ಲಿ ಆಡುವುದು ಅತ್ಯಪರೂಪ.
ಜೈಸ್ವಾಲ್ ಮತ್ತು ರೋಹಿತ್ ಅವರಿಂದ ಶುರುವಾದ ಆಕ್ರಮಣದ ಆಟವನ್ನು ಉಳಿದವರು ಎಗ್ಗಿಲ್ಲದೇ ಮುಂದುವರಿಸಿದ್ದು ಎದ್ದುಕಂಡಿತು. ಏಳನೇ ಕ್ರಮಾಂಕದಲ್ಲಿ ಆಡಿದ ಆಕಾಶ್ ದೀಪ್ ಎರಡು ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದ್ದು ಗಮನಾರ್ಹ. ಜೈಸ್ವಾಲ್, ಮೊದಲ ಓವರ್‌ನಲ್ಲೇ– ಹಸನ್ ಮೆಹಮೂದ್ ಬೌಲಿಂಗ್‌ನಲ್ಲಿ ಸತತ ಮೂರು ಬೌಂಡರಿಗಳನ್ನು ಹೊಡೆದರು. ಸ್ಪಿನ್ನರ್‌ಗಳನ್ನು ದಂಡಿಸುವ ರೀತಿಯಲ್ಲೇ ರೋಹಿತ್ ವೇಗದ ಬೌಲರ್‌ಗಳನ್ನೂ ಆಡಿದರು. ಖಾಲಿದ್ ಅಹ್ಮದ್ ಬೌಲಿಂಗ್‌ನಲ್ಲಿ ಅವರು ಎರಡು ಸತತ ಭರ್ಜರಿ ಸಿಕ್ಸರ್‌ಗಳನ್ನು ಎತ್ತಿದರು.
ಭಾರತ ದಾಖಲೆ ವೇಗದಲ್ಲಿ 50, 100, 150, 200 ಮತ್ತು 250 ರನ್‌ಗಳನ್ನು ದಾಟಿತು. ಈ ಸುಂಟರಗಾಳಿಯ ಆಟಕ್ಕೆ ತತ್ತರಿಸಿದ ಬಾಂಗ್ಲಾದೇಶ ಆರು ಮಂದಿ ಫೀಲ್ಡರ್‌ಗಳನ್ನು ಸೀಮಾರೇಖೆಯಲ್ಲಿ ನಿಯೋಜಿಸಬೇಕಾಯಿತು.
ಬಾಂಗ್ಲಾದೇಶ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 26 ರನ್ ಗಳಿಸಿದೆ. ಭಾರತ 26 ರನ್ ಮುಂದಿದ್ದು, 2–0 ಸರಣಿ ಗೆಲುವಿನ ಸುವಾಸನೆ ಕಾಣುತ್ತಿದೆ.
ಟೆಸ್ಟ್‌ನಲ್ಲಿ 3000 ರನ್ ಮತ್ತು 300 ವಿಕೆಟ್ ಗಳಿಸಿದ ಎರಡನೇ ಅತಿ ವೇಗದ ಆಲ್‌ರೌಂಡರ್ ಜಡೇಜ. ಇಂಗ್ಲೆಂಡ್‌ನ ಇಯಾನ್ ಬೋಥಂ (72 ಟೆಸ್ಟ್) ಮೊದಲನೆ ಯವರು. ಭಾರತದಲ್ಲಿ ಜಡೇಜಗಿಂತ ಮೊದಲು ಕಪಿಲ್ ದೇವ್ ಮತ್ತು ಅಶ್ವಿನ್ ಈ ‘ಡಬಲ್ ಮೈಲಿಗಲ್ಲು’ ದಾಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.