ADVERTISEMENT

ಟೆಸ್ಟ್ ಕ್ರಿಕೆಟ್‌: ಪಂದ್ಯ ಸೋತರೂ ಮನಗೆದ್ದ ಪಂತ್

ಪುನರಾಗಮನದ ನಂತರವೂ ಮಸುಕಾಗದ ಆಟ

ರೋಶನ್‌ ತ್ಯಾಗರಾಜನ್‌
Published 5 ನವೆಂಬರ್ 2024, 0:41 IST
Last Updated 5 ನವೆಂಬರ್ 2024, 0:41 IST
<div class="paragraphs"><p>ರಿಷಭ್ ಪಂತ್</p></div>

ರಿಷಭ್ ಪಂತ್

   

ಮುಂಬೈ: ಸುಮಾರು ಎರಡು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ರಿಷಭ್ ಪಂತ್ ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿ ಕ್ರಿಕೆಟ್‌ಗೆ ಮರಳಿದ್ದೇ ರೋಚಕ. ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಅವರು ಭಾರತ ತಂಡವನ್ನು ಮುಖಭಂಗದಿಂದ ಪಾರು ಮಾಡಲು ತಮ್ಮೆಲ್ಲಾ ಯತ್ನ ನಡೆಸಿದರು. ಸ್ವಲ್ಪದರಲ್ಲಿ ಅವರ ಹೋರಾಟ ವಿಫಲವಾಯಿತು.

ಮುಂಬೈಗೆ ಬರುವ ಮೊದಲೇ ಭಾರತ ತಂಡ ಸರಣಿ ಸೋತಿತ್ತು. ಆದರೆ ಅಲ್ಲೂ ಸೋತು ವೈಟ್‌ವಾಷ್‌ಗೆ ಒಳಗಾಗಿದ್ದು, ಭಾರತ ತಂಡ ಹಿಂದೆಂದೂ ಕಾಣದಷ್ಟು ವೈಫಲ್ಯ ಅನುಭವಿಸಿತು.

ADVERTISEMENT

ಮುಂಬೈ ಟೆಸ್ಟ್‌ ಪಂದ್ಯದ ಮೊದಲ ಎರಡು ದಿನ ಭಾರತ ತಂಡ ಮರಳಿ ಗೆಲುವಿನ ದಾರಿಗೆ ಬರುವಂತೆ ಕಂಡಿತ್ತು. ಮೂರನೇ ದಿನ 147 ರನ್‌ಗಳ ಗುರಿ ಎದುರಿಸಿದ ಭಾರತ 43 ಎಸೆತಗಳ ನಂತರ 29 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿತು. ಈ ವೇಳೆ ಆಡಲಿಳಿದ ಪಂತ್ ಭಾರತದ ಪಾಳಯದಲ್ಲಿ ಮೊದಲ ಬಾರಿ ಆಶಾಕಿರಣ ಮೂಡಿಸಿದ್ದರು.

2022ರ ಡಿಸೆಂಬರ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ಅವರು ಬದುಕುಳಿದಿದ್ದೇ ಪವಾಡ. ಅವರ ಸ್ಥಿತಿ ನೋಡಿ ಒಂದು ಕಾಲನ್ನು ಕತ್ತರಿಸಬೇಕಾಗಬಹುದು ಎಂದು ವೈದ್ಯರೂ ಲೆಕ್ಕಿಸಿದ್ದರು. ಪಂತ್‌ಗೆ ಮುಂದೆ ನಡೆದಾಡಲು ಆಗಬಹುದೇ ಎಂಬ ಸಂದೇಹವೂ ಅವರಲ್ಲಿ ಮೂಡಿತ್ತು. ಆದರೆ ಗಟ್ಟಿ ಮನೋಬಲ ಹೊಂದಿದ್ದ ಅವರು ನಿರೀಕ್ಷೆ ಮೀರಿ ಚೇತರಿಸಿಕೊಂಡರು. ಒಂದೂವರೆ ವರ್ಷ ಆಗುವುದರೊಳಗೆ ಕ್ರೀಡಾಂಗಣಕ್ಕೆ ಇಳಿದರು. ಅಮೆರಿಕದಲ್ಲಿ ಟಿ20 ವಿಶ್ವಕಪ್ ಆಡಲು ವಿಮಾನವೇರಿದರು.  ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಆಡಿದರು. ಪುನರಾಗಮನದ ಬಳಿಕ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್‌ ಸರಣಿ ಆಡಿದರು.

ಅವರ ಅಗತ್ಯ ಏನೆಂದು ಭಾರತ ತಂಡಕ್ಕೆ ತಿಳಿದಿತ್ತು. ಆದರೆ ಎಷ್ಟೊಂದು ಅಗತ್ಯ ಎಂಬುದು ಕಿವೀಸ್ ವಿರುದ್ಧ ಸರಣಿಯಲ್ಲಿ ಜಾಹೀರಾಯಿತು.

ಆಪತ್ಬಾಂಧವ:

ಮೂರನೇ ಟೆಸ್ಟ್‌ನ ಎರಡನೇ ದಿನ ಮೊದಲ ಇನಿಂಗ್ಸ್‌ನಲ್ಲಿ ಪಂತ್ ಆಡಲು ಇಳಿದಾಗ, ಭಾರತ ನ್ಯೂಜಿಲೆಂಡ್‌ (235) ಮೊತ್ತಕ್ಕಿಂತ 149 ರನ್ ಹಿಂದಿತ್ತು. ಹಿಂದಿನ ದಿನ ಕೇವಲ ಒಂದು ಎಸೆತ ಆಡಿದ್ದರು. ಅವರು ಮರುದಿನ ತಮ್ಮದೇ ಲಹರಿಯಲ್ಲಿ ಆಡತೊಡಗಿದರು. ತಿರುಗಿದ, ನೇರವಾಗಿ ಬಂದ ಎಸೆತಗಳು ಅವರ ಆಟಕ್ಕೆ ಭಂಗ ತರಲಿಲ್ಲ. ಎದುರಾಳಿಗಳ ಪ್ರಮುಖ ಅಸ್ತ್ರ ಎಜಾಜ್‌ ಪಟೇಲ್ ಅವರನ್ನೂ ಲೆಕ್ಕಿಸಲಿಲ್ಲ. ಅವರ 60 ರನ್‌ಗಳ ನೆರವಿನಿಂದ ಭಾರತಕ್ಕೆ ಇನಿಂಗ್ಸ್‌ ಮುನ್ನಡೆ ದೊರೆಯಿತು.

ಭಾನುವಾರ, ಎರಡನೇ ಇನಿಂಗ್ಸ್‌ನಲ್ಲಿ ಭಾರತ ಗೆಲುವಿಗೆ 147 ರನ್‌ಗಳ ಸಣ್ಣ ಗುರಿ ಎದುರಿಸಿತ್ತು. ಭಾರತ 18 ರನ್‌ಗಳಾಗುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡಿತ್ತು. ಆದರೆ ಇಂಥ ಪರಿಸ್ಥಿತಿ ಅವರನ್ನು ವಿಚಲಿತಗೊಳಿಸಲಿಲ್ಲ. ಎದುರಿಸಿದ ಮೂರನೇ ಎಸೆತವನ್ನು (ಎಜಾಜ್‌ ಆಗ ಬೌಲರ್‌) ಸಿಕ್ಸರ್‌ಗೆತ್ತಿದರು. ಇನ್ನೊಂದು ಕಡೆಯಿಂದ ಒತ್ತಡ ಹೆಚ್ಚುತಿತ್ತು. ಜೈಸ್ವಾಲ್‌, ಪಂತ್‌ ಮೂರು ಎಸೆತಗಳ ಅಂತರದಲ್ಲಿ ವಾಪಸಾಗಿದ್ದರು. ಸ್ಕೋರ್‌ 5ಕ್ಕೆ 29.

ಜಡೇಜ ಅವರಲ್ಲಿ ಸೂಕ್ತ ಜೊತೆಗಾರರನ್ನು ಕಂಡ ಪಂತ್, ತಂಡವನ್ನು ಗೆಲುವಿನ ದಾರಿಯಲ್ಲಿ ಮುನ್ನಡೆಸುವಂತೆ ಕಂಡಿತು. ಆದರೆ ಈ ಹಂತದಲ್ಲಿ ಜಡೇಜ ಶಾರ್ಟ್‌ಲೆಗ್‌ನಲ್ಲಿ ಕ್ಯಾಚಿತ್ತರು. ಇದು ಇನ್ನೊಂದು ತುದಿಯಲ್ಲಿದ್ದ ಪಂತ್ ಅವರನ್ನು ಹತಾಶೆಗೆ ದೂಡಿತು. ಮತ್ತೆ 35 ಎಸೆತಗಳನ್ನು ಆಡಿದ ಪಂತ್‌, ಕೊನೆಗೂ ಔಟ್‌ ಆದರು. ಅದೂ ವಿವಾದಾತ್ಮಕ ತೀರ್ಪಿಗೆ. ಅಂಥ ಸಂದರ್ಭದಲ್ಲೂ ಅವರು ಪೆವಿಲಿಯನ್‌ಗೆ ಮರಳುವಾಗ ಪ್ರೇಕ್ಷಕರು ಕರತಾಡನದ ಮೆಚ್ಚುಗೆ ನೀಡಿದರು.

ಭಾರತ ಸೋತಿತು. ಆದರೆ ಪಂತ್ ಆಟ ಸೋಲಲಿಲ್ಲ. ಅವರು ಭಾರತದ ಕ್ರಿಕೆಟ್‌ನ ಭವಿಷ್ಯ ಎಂಬುದು ಮತ್ತೆ ಸಾಬೀತಾಯಿತು. ಬಿಕ್ಕಟ್ಟಿನಲ್ಲೂ ತಮ್ಮ ಸಹಜ ಆಟದಿಂದ ಪಂತ್‌ ದೂರ ಸರಿಯಲಿಲ್ಲ.

ಪಂತ್ ಕೊನೆಯ ಐದು ಟೆಸ್ಟ್‌ಗಳಲ್ಲಿ ಒಂದು ಶತಕ, ಮೂರು ಅರ್ಧ ಶತಕ ಸೇರಿದಂತೆ 422 ರನ್ ಪೇರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.