ADVERTISEMENT

ಟೆಸ್ಟ್ ಕ್ರಿಕೆಟ್ ಈಗ ಬೌಲರ್‌ಗಳ ಆಟ

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅಭಿಮತ

ಗಿರೀಶ ದೊಡ್ಡಮನಿ
Published 15 ಅಕ್ಟೋಬರ್ 2024, 0:20 IST
Last Updated 15 ಅಕ್ಟೋಬರ್ 2024, 0:20 IST
ನ್ಯೂಜಿಲೆಂಡ್ ತಂಡದ ರಚಿನ್ ರವೀಂದ್ರ
ನ್ಯೂಜಿಲೆಂಡ್ ತಂಡದ ರಚಿನ್ ರವೀಂದ್ರ   

ಬೆಂಗಳೂರು: ದಶಕಗಳ ಹಿಂದೆ ಭಾರತ ಕ್ರಿಕೆಟ್ ತಂಡವು ಹಲವಾರು ಅಂತರರಾಷ್ಟ್ರೀಯ ಪಂದ್ಯಗಳನ್ನು ಜಯಿಸಲು ಮಹತ್ವದ ಕಾಣಿಕೆ ನೀಡಿದವರು ಎಡಗೈ ಬ್ಯಾಟರ್ ಗೌತಮ್ ಗಂಭೀರ್. ಇನಿಂಗ್ಸ್ ಆರಂಭಿಸುತ್ತಿದ್ದ ಅವರು 2011ರ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಮಾಡಿದ್ದ ಬ್ಯಾಟಿಂಗ್ ಇಂದಿಗೂ ಕ್ರಿಕೆಟ್‌ಪ್ರಿಯರ ಮನದಲ್ಲಿ ಹಸಿರಾಗಿದೆ. ಅಂದು ಶತಕ ತಪ್ಪಿಸಿಕೊಂಡರೂ ಪಂದ್ಯದ ಜಯದಲ್ಲಿ ಮಹತ್ವದ ಕಾಣಿಕೆ ಕೊಟ್ಟಿದ್ದರು. 

ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಅವರ ಸಾಧನೆಗಳು ಕಮ್ಮಿಯೇನಲ್ಲ. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಅವರಂತಹ ದಿಗ್ಗಜರೊಂದಿಗೆ ಇನಿಂಗ್ಸ್ ಆರಂಭಿಸಿದ ಶ್ರೇಯ ಕೂಡ ದೆಹಲಿಯ ಬ್ಯಾಟರ್‌ ಅವರದ್ದು.  ತಮ್ಮ ನಿಷ್ಠುರ ನಡೆ, ನುಡಿಗಳಿಂದ ಸದಾ ಚರ್ಚೆಯಲ್ಲಿದ್ದವರು. ಇದೀಗ ಭಾರತ ತಂಡದ ಮುಖ್ಯ ಕೋಚ್ ಆದ ನಂತರವೂ ಅವರ ಅಕ್ರಮಣಶೀಲ ಗುಣ ಒಂಚೂರು ಕಡಿಮೆಯಾಗಿಲ್ಲ. ಅದು ಆಟವಿರಲಿ ಅಥವಾ ಮಾತಿರಲಿ ನೇರಾನೇರ.

ರಾಷ್ಟ್ರೀಯ ತಂಡದ ಕೋಚ್ ಆದ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದಾರೆ. ಬುಧವಾರ ಇಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ತಂಡದ ಎದುರಿನ ಮೊದಲ ಟೆಸ್ಟ್‌ನಲ್ಲಿ ಗಂಭೀರ್ ಮಾರ್ಗದರ್ಶನದ ಭಾರತ ತಂಡ ಕಣಕ್ಕಿಳಿಯಲಿದೆ. ಇದೇ ಉದ್ಯಾನನಗರಿಯ ರಾಹುಲ್ ದ್ರಾವಿಡ್ ಅವರ ನಂತರ ಗಂಭೀರ್ ಕೋಚ್ ಸ್ಥಾನ ಪಡೆದಿದ್ದಾರೆ. ಅದಕ್ಕಾಗಿಯೇ ಅವರ ಮೇಲೆ ಕ್ರಿಕೆಟ್ ಪ್ರಿಯರ ಗಮನ ನೆಟ್ಟಿದೆ. ಈಚೆಗೆ ಬಾಂಗ್ಲಾದೇಶ ಎದುರಿನ ಸರಣಿಯಲ್ಲಿ ಭಾರತ ತಂಡವು ಅಮೋಘ ಜಯ ಸಾಧಿಸಿತ್ತು.

ADVERTISEMENT

ಸೋಮವಾರ ರೋಹಿತ್ ಶರ್ಮಾ ಬಳಗವು ಇಲ್ಲಿ ಅಭ್ಯಾಸ ನಡೆಸಿತ್ತು. ಇದೇ ಸಂದರ್ಭದಲ್ಲಿ ಗಂಭೀರ್ ಪತ್ರಕರ್ತರೊಂದಿಗೆ ಮಾತಿಗೆ ಕುಳಿತಿದ್ದರು.  

ಬೌಲರ್‌ಗಳ ಪರ ಬ್ಯಾಟ್ ಬೀಸಿದ ಗಂಭೀರ್, ‘ಈಗ ಕಾಲ ಬದಲಾಗಿದೆ. ಇಂದಿನ ಟೆಸ್ಟ್ ಕ್ರಿಕೆಟ್ ಮಾದರಿಯು  ಬೌಲರ್‌ಗಳದ್ದು. ಅವರು 20 ವಿಕೆಟ್ ಗಳಿಸಿದರೆ ತಂಡವು  ಪಂದ್ಯ ಜಯಿಸುತ್ತದೆ. ಬ್ಯಾಟರ್‌ಗಳು ಪಂದ್ಯದಲ್ಲಿ ಲಯ ತರುತ್ತಾರೆ. ಒಂದು ವೇದಿಕೆ ನಿರ್ಮಿಸುತ್ತಾರಷ್ಟೇ. ಬ್ಯಾಟರ್‌ಗಳು ಪಾರಮ್ಯ ಮೆರೆದ ಪಂದ್ಯಗಳ ಫಲಿತಾಂಶ ಹೊರಹೊಮ್ಮದಿರಬಹುದು. ಆದರೆ ಬೌಲರ್‌ಗಳು ಮಿಂಚಿದ ಪಂದ್ಯಗಳ ಫಲಿತಾಂಶ ಖಚಿತ’ ಎಂದರು.

‘ನಮ್ಮ ತಂಡದಲ್ಲಿ ಒಂದೇ ದಿನದಲ್ಲಿ 400ಕ್ಕೂ ಹೆಚ್ಚು ರನ್‌ ಗಳಿಸಬಲ್ಲ ಬ್ಯಾಟರ್‌ಗಳಿದ್ದಾರೆ. ಎರಡು ದಿನಪೂರ್ತಿ ಆಡಿ ಡ್ರಾ ಮಾಡಿಕೊಡುವ ಆಟ ಬಲ್ಲವರೂ ಇದ್ದಾರೆ. ಆದರೆ ತಂಡವಾಗಿ ಮತ್ತು ತಂಡಕ್ಕಾಗಿ ಆಡುವ ತುಡಿತ ಎಲ್ಲರಲ್ಲೂ ಇರುವುದು ನಮ್ಮ ಶಕ್ತಿ. ಯಾರೇ ಅವಕಾಶ ಪಡೆದರೂ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವ ಸಮರ್ಥರು. ಆದ್ದರಿಂದ ಅವರನ್ನು ತಡೆಯಲಾಗದು. ಅವರು ಆಕ್ರಮಣಶೀಲರಾಗಿ ಆಡುತ್ತಾರೆಂದರೆ ಆಡಲಿ. ಅದರಿಂದ ತಂಡಕ್ಕೇ  ಲಾಭ’ ಎಂದು ಗೌತಮ್ ಹೇಳಿದರು. 

‘ಪಿಚ್ ಸ್ಥಿತಿ, ಹವಾಮಾನ ಮತ್ತು ಎದುರಾಳಿ ತಂಡದ ಸಾಮರ್ಥ್ಯಗಳ ಅವಲೋಕನದ ನಂತರವೇ ಅಂತಿಮ ಹನ್ನೊಂದರ ಬಳಗದ ತೀರ್ಮಾನವಾಗುತ್ತದೆ. ನಮ್ಮ ತಂಡದಲ್ಲಿ ಶ್ರೇಷ್ಠ ದರ್ಜೆಯ ಆಟಗಾರರು ಎಲ್ಲ ವಿಭಾಗಗಳಲ್ಲಿದ್ದಾರೆ. ಅವರಲ್ಲಿ ಯಾರನ್ನೇ ಆಯ್ಕೆ ಮಾಡಿದರೂ ಉತ್ತಮ ಫಲ ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿರಾಟ್ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ಗಳ ಮೈಲಿಗಲ್ಲಿನ ಹೊಸ್ತಿಲಲ್ಲಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ವಿರಾಟ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ನೋಡಿದ್ದೇನೆ. ಅವರೊಬ್ಬ ಶ್ರೇಷ್ಠ ಬ್ಯಾಟರ್. ಅದಕ್ಕೆ ಕಾರಣ ಅವರ ರನ್‌ ಗಳಿಕೆಯ ಹಸಿವು. ಆಟದ ಕುರಿತ ಶ್ರದ್ಧೆ ಮತ್ತು ಬದ್ಧತೆಗಳು. ಅವರು ಇನ್ನೂ ಇಂತಹ ಹಲವು ಸಾಧನೆ ಮಾಡುವ ಸಮರ್ಥರು’ ಎಂದರು.

ರಚಿನ್‌ ರವೀಂದ್ರಗೆ ಬೆಂಗಳೂರು ಟೆಸ್ಟ್

ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್ ರಚಿನ್ ರವೀಂದ್ರ ಅವರು ಬೆಂಗಳೂರು ಮೂಲದವರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಅವರು ಇದೇ ಮೊದಲ ಸಲ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ. ಆದರೆ ಅವರಿಗೆ ಚಿನ್ನಸ್ವಾಮಿ ಅಂಗಳ ಹೊಸದಲ್ಲ. ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಏಕದಿನ ಪಂದ್ಯಗಳನ್ನು ಇಲ್ಲಿ ಆಡಿದ್ದಾರೆ. ಹೋದ ಸಲದ ಐಪಿಎಲ್ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ್ದಾರೆ. ‘ನನ್ನ ಕುಟುಂಬದ ಮೂಲ ಬೆಂಗಳೂರು. ವೆಲಿಂಗ್ಟನ್‌ನಲ್ಲಿ ನಾನು ಹುಟ್ಟಿ ಬೆಳೆದೆ. ನಾನು ಕಿವೀಸ್ ಪ್ರಜೆ. ಆದರೂ ಭಾರತೀಯ ಮೂಲದ ಬಗ್ಗೆ ನನಗೆ ಅಪಾರ ಹೆಮ್ಮೆಯಿದೆ. ಇಲ್ಲಿ ಟೆಸ್ಟ್ ಆಡುತ್ತಿರುವುದು ವಿಶೇಷ ಅನುಭವ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.