ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌: ಭಾರತಕ್ಕೆ ವಿಶ್ವದಾಖಲೆಯ ಗುರಿ

ರೋಚಕ ಘಟ್ಟದಲ್ಲಿ ಡಬ್ಲ್ಯುಟಿಸಿ ಫೈನಲ್‌: ವಿರಾಟ್, ಅಜಿಂಕ್ಯ ಮೇಲೆ ನಿರೀಕ್ಷೆಯ ಭಾರ

ಪಿಟಿಐ
Published 11 ಜೂನ್ 2023, 3:25 IST
Last Updated 11 ಜೂನ್ 2023, 3:25 IST
   

ಲಂಡನ್ : ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ದ ಒವಲ್ ಕ್ರೀಡಾಂಗಣದಲ್ಲಿ ಎರಡು ‘ವಿಶ್ವ’ ದಾಖಲೆ ಬರೆಯುವ ಅವಕಾಶ ಇದೆ. 

ಇಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ  ಆಸ್ಟ್ರೇಲಿಯಾ ತಂಡವು ಒಡ್ಡಿರುವ 444 ರನ್‌ಗಳ ಗುರಿ ಬೆನ್ನಟ್ಟಿರುವ ಭಾರತವು ಗೆದ್ದರೆ ಐತಿಹಾಸಿಕ ಸಾಧನೆಯಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟದ ಜೊತೆಗೆ ಟೆಸ್ಟ್ ಇತಿಹಾಸದ ಅತ್ಯಂತ ದೊಡ್ಡ ಗುರಿಯನ್ನು ಸಾಧಿಸಿದ ದಾಖಲೆಯ ಒಡೆಯನಾಗಲಿದೆ. 

ತಂಡವು ಈ ಹಾದಿಯಲ್ಲಿ ಶನಿವಾರ  40 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 164 ರನ್‌ ಗಳಿಸಿದೆ. ಅನುಭವಿಗಳಾದ ವಿರಾಟ್ ಕೊಹ್ಲಿ (ಬ್ಯಾಟಿಂಗ್ 44) ಹಾಗೂ ಅಜಿಂಕ್ಯ ರಹಾನೆ (ಬ್ಯಾಟಿಂಗ್ 20) ಕ್ರೀಸ್‌ನಲ್ಲಿದ್ದಾರೆ. ಕೊನೆಯ ದಿನವಾದ ಭಾನುವಾರ ಗೆಲುವಿನ ದಡ ಮುಟ್ಟಲು 280 ರನ್‌ ಗಳಿಸಬೇಕಿದ್ದು, ಇವರಿಬ್ಬರ ಪಾತ್ರ ಮಹತ್ವದ್ದಾಗಲಿದೆ. 

ADVERTISEMENT

ಏಕೆಂದರೆ; ಈ ಕ್ರೀಡಾಂಗಣದಲ್ಲಿ ನಾಲ್ಕನೇ ಇನಿಂಗ್ಸ್‌ನಲ್ಲಿ ಚೇಸಿಂಗ್ ಮಾಡಿರುವ ಮೊತ್ತವು 263 ರನ್‌ಗಳು ಮಾತ್ರ. ಅಲ್ಲದೇ ಇಡೀ ಟೆಸ್ಟ್ ಇತಿಹಾಸದಲ್ಲಿ 418 ರನ್‌ಗಳನ್ನು ಬೆನ್ನಟ್ಟಿ ಜಯಿಸಿದ್ದು ಇದುವರೆಗಿನ ದಾಖಲೆಯಾಗಿದೆ. ಆದ್ದರಿಂದ ಹೊಸ ಇತಿಹಾಸ ಬರೆಯಲು ಈಗ ಅವಕಾಶವಿದೆ. ಆದರೆ ತಾಳ್ಮೆ ಹಾಗೂ ಏಕಾಗ್ರತೆಯ ಆಟವಾಡುವ ಸವಾಲು ಇದೆ. ಕೊಹ್ಲಿ ಮತ್ತು ರಹಾನೆ ಮುರಿಯದ 4ನೇ ವಿಕೆಟ್‌ಗೆ 71 ರನ್‌ ಸೇರಿಸಿದ್ದಾರೆ.

ಶುಕ್ರವಾರ ಮೊದಲ ಇನಿಂಗ್ಸ್‌ನಲ್ಲಿ 173 ರನ್‌ಗಳ ಭಾರಿ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ 84.3 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 270 ರನ್ ಗಳಿಸಿತು. ಶನಿವಾರ ಚಹಾ ವಿರಾಮಕ್ಕೆ ಸುಮಾರು 45 ನಿಮಿಷಗಳು ಬಾಕಿ ಇರಬೇಕಾದರೆ ನಾಯಕ ಪ್ಯಾಟ್ ಕಮಿನ್ಸ್‌ ಔಟಾದರು ಮತ್ತು ಡಿಕ್ಲೇರ್ ಘೋಷಿಸಿದರು.

ಬೆಟ್ಟದಂತಹ ಗುರಿ ಬೆನ್ನಟ್ಟಿರುವ ಭಾರತ ತಂಡಕ್ಕೆ ರೋಹಿತ್ ಶರ್ಮಾ (43; 60ಎ) ಹಾಗೂ ಶುಭಮನ್ ಗಿಲ್ (18; 19ಎ) ಉತ್ತಮ ಆರಂಭ ನೀಡಿದ್ದು ವಿಶ್ವಾಸ ಮೂಡಿಸಿತು. ಇಬ್ಬರೂ ಆದಷ್ಟು ವೇಗದಲ್ಲಿ ರನ್‌ ಗಳಿಸಲು ಚಿತ್ತನೆಟ್ಟರು. ಇದರಿಂದಾಗಿ ಏಳು ಓವರ್‌ಗಳಲ್ಲಿ 41 ರನ್‌ಗಳು ಸೇರಿದವು. 

ಆದರೆ ಎಂಟನೇ ಓವರ್‌ನಲ್ಲಿ ಸ್ಕಾಟ್‌ ಬೊಲಾಂಡ್ ಎಸೆತ ಶುಭಮನ್ ಬ್ಯಾಟ್ ಅಂಚು ಸವರಿ ಸಾಗಿತು. ತಮ್ಮ ಎಡಕ್ಕೆ ಡೈವ್ ಮಾಡಿದ ಸ್ಲಿಪ್ ಫೀಲ್ಡರ್ ಗ್ರೀನ್‌ ಕ್ಯಾಚ್ ಪಡೆದರು. ಚೆಂಡು ಅವರ ಕೈಸೇರುವ ಮುನ್ನ ನೆಲಕ್ಕೆ ತಾಗಿರುವ ಅನುಮಾನದಿಂದಾಗಿ ಹಲವು ಆಯಾಮಗಳಲ್ಲಿ ಪರಿಶೀಲಿಸಿದ ಟಿ.ವಿ. ಅಂಪೈರ್ ರಿಚರ್ಡ್ ಕೆಟಲ್‌ಬರೊ ಔಟ್ ತೀರ್ಪು ಪ್ರಕಟಿಸಿದರು. ಶುಭಮನ್ ಬೇಸರದಿಂದ ನಿರ್ಗಮಿಸಿದರು.

ಚಹಾ ವಿರಾಮದ ನಂತರ ರೋಹಿತ್ ಮತ್ತು ಪೂಜಾರ (27; 47) ಇನಿಂಗ್ಸ್‌ಗೆ ಬಲ ತುಂಬುವ ಪ್ರಯತ್ನ ಮಾಡಿದರು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ 51 ರನ್‌ ಕೂಡ ಸೇರಿಸಿದರು. 20ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಆಫ್‌ಸ್ಪಿನ್ನರ್ ನೇಥನ್ ಲಯನ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ರೋಹಿತ್ ಬಿದ್ದರು. ನಂತರದ ಓವರ್‌ನಲ್ಲಿ ಕಮಿನ್ಸ್‌ ಹಾಕಿದ ಬೌನ್ಸರ್‌ ಎಸೆತವನ್ನು ಅಪ್ಪರ್ ಕಟ್ ಮಾಡುವ ಯತ್ನದಲ್ಲಿ ಪೂಜಾರ,  ವಿಕೆಟ್‌ಕೀಪರ್ ಅಲೆಕ್ಸ್ ಕ್ಯಾರಿಗೆ ಸುಲಭದ ಕ್ಯಾಚಿತ್ತರು.

ಅಲೆಕ್ಸ್–ಸ್ಟಾರ್ಕ್ ಅರ್ಧಶತಕ: ವೇಗದ ಬೌಲರ್‌ಗಳಿಗೆ ಹೆಚ್ಚು ನೆರವು ನೀಡದ ಪಿಚ್‌ನಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಶಮಿ ಅವರ ಪ್ರಯತ್ನಗಳಿಗೆ ಹೆಚ್ಚು ಫಲ ಸಿಗಲಿಲ್ಲ. ಇದರ ಲಾಭ ಪಡೆದ ಅಲೆಕ್ಸ್ (ಅಜೇಯ 66) ಹಾಗೂ ಸ್ಟಾರ್ಕ್ (51; 47ಎ) ಅವರು ಏಳನೇ ವಿಕೆಟ್ ಜೊತೆಯಾಟದಲ್ಲಿ 93 ರನ್‌ ಸೇರಿಸಿದರು. ಇದರಿಂದಾಗಿ ಆಸ್ಟ್ರೇಲಿಯಾ ತಂಡದ ಮುನ್ನಡೆ ಹೆಚ್ಚಿತು. 

ಭಾರತದ ಮಟ್ಟಿಗೆ ಎಡಗೈ ಸ್ಪಿನ್ನರ್ ಜಡೇಜ (58ಕ್ಕೆ3) ಯಶಸ್ವಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.